ಭಾನುವಾರ, ಡಿಸೆಂಬರ್ 15, 2019
20 °C
ಕಟಪಾಡಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವಕ್ಕೆ ಚಾಲನೆ

ಅಭಿವೃದ್ಧಿ ನಿಗಮ ಸ್ಥಾಪನೆಗೆ ಪ್ರಸ್ತಾವನೆ- ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರ್ವ: ‘ಸಮಾಜದಲ್ಲಿನ ಶೋಷಿತ ವರ್ಗದ ಜನರ ಅಭಿವೃದ್ಧಿಗಾಗಿ ಮತ್ತು ಅವರ ಧ್ವನಿಗೆ ಶಕ್ತಿ ಕೊಟ್ಟು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ‘ನಾರಾಯಣಗುರು ಅಭಿವೃದ್ಧಿ ನಿಗಮ‘ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸೃತಿ ಇಲಾಖೆಯ ವತಿಯಿಂದ ಕಟಪಾಡಿ ವಿಶ್ವನಾಥ ಕ್ಷೇತ್ರದ ಜಿಲ್ಲಾ ಬಿಲ್ಲವ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಕುರಿತಂತೆ ಬೆಂಗಳೂರಿನಲ್ಲಿ ನಡೆಯುವ ನಾರಾಯಣಗುರು ಜಯಂತ್ಯುತ್ಸವದಲ್ಲಿ ಮುಖ್ಯಮಂತ್ರಿಗೆ ಮನವಿ ನೀಡಲಾಗುವುದು’ ಎಂದು ಅವರು ತಿಳಿಸಿದರು.

‘ಇಡೀ ಪ್ರಪಂಚ ಒಂದೇ ಕುಟುಂಬದಂತೆ ಶಾಂತಿ, ಸಮಾನತೆ, ಸಹಬಾಳ್ವೆಯಿಂದ ಬದುಕಬೇಕು ಎಂದು ನಾರಾಯಣಗುರುಗಳು ಬಯಸಿದ್ದರು. ಅದಕ್ಕಾಗಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಸಂದೇಶ ಆಧುನಿಕ ಜಗತ್ತಿನಲ್ಲೂ ಪ್ರಸ್ತುತವೆನಿಸಿದೆ’ ಎಂದು ಹೇಳಿದರು.

ನಾರಾಯಣ ಗುರುಗಳ ತತ್ವಾದರ್ಶಗಳನ್ನು ಒಪ್ಪಿಕೊಂಡು ಕೇರಳದಲ್ಲಿರುವ ಅವರ ಆಶ್ರಮಕ್ಕೆ ಮಹಾತ್ಮ ಗಾಂಧೀಜಿ, ರವಿಂದ್ರನಾಥ ಟಾಗೂರ್, ವಿನೋಬ ಭಾವೆ ಅವರಂತಹ ಮಹಾನ್ ನಾಯಕರು ಭೇಟಿ ನೀಡಿ ಅಲ್ಲಿನ ಸಮಾನತೆಯನ್ನು ಕಂಡು ಪ್ರಭಾವಿತರಾಗಿದ್ದರು. ಜಗತ್ತಿನ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿರುವ ನಾರಾಯಣ ಗುರುಗಳ ಸಂದೇಶ ಇಂದಿನ ಯುವಜನಾಂಗವು ಒಪ್ಪಿಕೊಳ್ಳಬೇಕಾಗಿದೆ. ಸಮಾಜಕ್ಕೆ ಗುರುಗಳ ತತ್ವಾದರ್ಶಗಳನ್ನು ಸಾರುವಂತಹ ಕೆಲಸ ಸಮಾಜದ ಸಂಘಟನೆಗಳಿಂದ ನಡೆಯಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಸಚಿವ ಕೊಟ ಶ್ರೀನಿವಾಸ ಪೂಜಾರಿ ಅವರು, ನಾರಾಯಣ ಗುರುಗಳ ಭಾವಚಿತ್ರದ ಮುಂದೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ ಸಚಿವರಾಗಿ ನೇಮಕಗೊಂಡ ಸಚಿವರನ್ನು ಸಮಸ್ತ ಬಿಲ್ಲವ ಸಮಾಜದ ಪರವಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಜನಾರ್ದನ ತೋನ್ಸೆ, ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಗೌರವಾಧ್ಯಕ್ಷ ಶಿವಾನಂದ್ ಉಪಸ್ಥಿತರಿದ್ದರು.

ಹಿರಿಯಡ್ಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಎಂ.ಆರ್. ಉಪನ್ಯಾಸ ನೀಡಿದರು. ಇದೇ ಸಂದರ್ಭ ಸಪ್ನಾ ಮತ್ತು ನಾಗರಾಜ ಶೇಟ್ ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಪೂರ್ಣಿಮಾ ವಂದಿಸಿದರು. ದಯಾನಂದ ಉಗ್ಗೆಲ್ಬೆಟ್ಟು ನಿರೂಪಿಸಿದರು.

ಅಸ್ಪೃಶ್ಯತೆ ಆಚರಣೆ ಇಲ್ಲದ ಜಿಲ್ಲೆ!

ಸಾಮಾಜಿಕ ಪಿಡುಗುಗಳ ವಿರುದ್ಧ ಕ್ರಾಂತಿಯ ಕಿಡಿ ಹಚ್ಚಿ, ಭಾಷೆಗೆ ಬರಹದ ಮೂರ್ತರೂಪ ನೀಡಿ, ಮನುಕುಲದಲ್ಲಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದರು. ನಾರಾಯಣ ಗುರುಗಳು ಸಾರಿದ ಸಮಾನತೆಯನ್ನು ಒಪ್ಪಿಕೊಂಡು, ಅಸ್ಪೃಶ್ಯತೆ ಆಚರಣೆ ಇಲ್ಲದ ರಾಜ್ಯದ ಜಿಲ್ಲೆಗಳೆಂದರೆ ಬಹುಶಃ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮಾತ್ರ. ಗುರುಗಳ ತತ್ವ ಮತ್ತು ಆದರ್ಶದ ಹಾದಿಯಲ್ಲಿಯೇ ನಾನೂ ಕೂಡ ಸಚಿವನಾಗಿ ಕರ್ತವ್ಯ ನಿರ್ವಹಿಸುತ್ತೇನೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು