ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ರೆಡ್ಡಿ ಜಾಮೀನು ಅರ್ಜಿ ವಜಾ

ಬಹುಕೋಟಿ ವಂಚನೆ ಪ್ರಕರಣ
Last Updated 14 ಫೆಬ್ರುವರಿ 2019, 21:00 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಅಪರಾಧಗಳಡಿ ಬಂಧನಕ್ಕೆ ಒಳಗಾಗಿರುವ ತೆಲುಗುದೇಶಂ ಪಕ್ಷದ (ಟಿಡಿಪಿ) ವಿಧಾನ ಪರಿಷತ್ ಸದಸ್ಯ ವಕಟಿ ನಾರಾಯಣ ರೆಡ್ಡಿ ಅವರ ಜಾಮೀನು ಕೋರಿಕೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

ಅರ್ಜಿಯ ಮೇಲಿನ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿದೆ.

‘ಪ್ರಕರಣದಲ್ಲಿ ಉಳಿದ ಏಳು ಆರೋಪಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ (ಸಿಬಿಐ ವಿಶೇಷ ನ್ಯಾಯಾಲಯ) ಸಿಬಿಐ ಅಂತಿಮ ತನಿಖಾ ವರದಿ ಸಲ್ಲಿಸಿದ ಬಳಿಕ ನೀವು ವಿಚಾರಣಾ ನ್ಯಾಯಾಲಯದಲ್ಲೇ ಜಾಮೀನು ಅರ್ಜಿ ಸಲ್ಲಿಸಬಹುದು’ ಎಂದು ನ್ಯಾಯಪೀಠವು, ಅರ್ಜಿದಾರ ನಾರಾಯಣ ರೆಡ್ಡಿ ಅವರಿಗೆ ಸೂಚಿಸಿದೆ.

‘ಆಳವಾಗಿ ಬೇರುಬಿಟ್ಟಿರುವ ಆರ್ಥಿಕ ಅಪರಾಧಗಳು ದೇಶದ ಆರೋಗ್ಯಕರ ಬೆಳವಣಿಗೆಗೆ ದೊಡ್ಡ ಬೆದರಿಕೆಯಾಗಿವೆ’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ‘ಅರ್ಜಿದಾರರು ಪ್ರಭಾವಶಾಲಿ ವ್ಯಕ್ತಿಯಾಗಿದ್ದು ಜಾಮೀನು ಪಡೆದು ಹೊರಬಂದರೆ ಪ್ರಾಸಿಕ್ಯೂಷನ್‌ ಸಾಕ್ಷ್ಯಗಳನ್ನು ನಾಶಪಡಿಸಬಹುದು’ ಎಂಬ ಸಿಬಿಐ ಪರ ವಕೀಲರ ವಾದವನ್ನು ಎತ್ತಿಹಿಡಿದಿದೆ.

ಪ್ರಕರಣವೇನು ?: ‘ವಕಟಿ ನಾರಾಯಣ ರೆಡ್ಡಿ ಹೈದರಾಬಾದ್‌ನಲ್ಲಿರುವ ವಿಎನ್‌ಆರ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು. ಬೆಂಗಳೂರಿನ ಭಾರತೀಯ ಕೈಗಾರಿಕಾ ಹಣಕಾಸು ನಿಗಮದಿಂದ (ಐಎಫ್‌ಸಿಐ) 2014-15ರಲ್ಲಿ ₹190 ಕೋಟಿ ಸಾಲ ಮಂಜೂರು ಮಾಡಿಸಿಕೊಂಡಿದ್ದರು. ಆದರೆ, ಇನ್ನೂ ಆ ಸಾಲ ಮರುಪಾವತಿ ಮಾಡಿಲ್ಲ. ಇದರಿಂದ ಬೊಕ್ಕಸಕ್ಕೆ ₹ 205 ಕೋಟಿ ವಂಚನೆ ಆಗಿದೆ‘ ಎಂಬುದು ಸಿಬಿಐ ಆರೋಪ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಕಟಿ ನಾರಾಯಣ ರೆಡ್ಡಿ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಇವರ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಕೆಲವು ತಿಂಗಳ ಹಿಂದಷ್ಟೇ ವಜಾಗೊಳಿಸಿತ್ತು.

ನಾರಾಯಣ ರೆಡ್ಡಿ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ, ಕೆ.ಸುಮನ್ ಹಾಗೂ ಸಿಬಿಐ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT