ಮತ್ತಾವು–.ಮತ್ತದೇ ಮರದ ಕಾಲುಸಂಕ!

4
ನಕ್ಸಲರ ಮತ್ತಾವು ಬಾಂಬ್ ದಾಳಿಗೆ 13 ವರ್ಷ

ಮತ್ತಾವು–.ಮತ್ತದೇ ಮರದ ಕಾಲುಸಂಕ!

Published:
Updated:
Deccan Herald

ಹೆಬ್ರಿ: ‘ಮತ್ತಾವಿಗೆ ಬೆಳಕು ಬಂತು, ಎಲ್ಲವೂ ಬಂತು.  ಸೇತುವೆ ಮಾತ್ರ ಆಗಲೇ ಇಲ್ಲ...’ ಇದು ನಕ್ಸಲ್ ಪೀಡಿತ ಕಬ್ಬಿನಾಲೆಯ ಮತ್ತಾವಿನ ಮನೆಮಂದಿನ ಮನದಾಳದ ನೋವಿನ ಮಾತು.

2005ರಲ್ಲಿ ರಾಜ್ಯದಲ್ಲಿಯೇ ಭಯಾನಕವಾಗಿ ನಕ್ಸಲರು ಪೊಲೀಸರ ಮೇಲೆ ನಡೆಸಿದ ಮತ್ತಾವು ಬಾಂಬ್ ದಾಳಿಗೆ (ಜುಲೈ 28) 13 ವರ್ಷ ತುಂಬುತ್ತಿದೆ.

ಆ ಬಳಿಕ ಇಲ್ಲಿನ ಮುದ್ರಾಡಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸಕರು ಸೇರಿದಂತೆ ನಕ್ಸಲ್ ಪೀಡಿತ ಇಲ್ಲಿನ ಮಲೆಕುಡಿಯ ಮನೆಮಂದಿಯ ಹಲವು ಕಷ್ಟಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ. 10 ಮನೆಗಳಿರುವ ಮತ್ತಾವಿನ ಮಲೆಕುಡಿಯ ಜನಾಂಗದ ಮೂಲ ಸೌಕರ್ಯದ ಹಲವು ಬೇಡಿಕೆಯನ್ನು ಈಗಾಗಲೇ ಈಡೇರಿಸಲಾಗಿದೆ. ಆದರೆ ಅಗತ್ಯವಾಗಿ ಆಗಲೇ ಬೇಕಾದ ಮತ್ತಾವು ಸೇತುವೆ ಮಾತ್ರ ಆಗಲೇ ಇಲ್ಲ.

ಮುದ್ರಾಡಿ ಗ್ರಾಮ ಪಂಚಾಯತಿನಿಂದ ಸೋಲಾರ್ ದೀಪಗಳನ್ನು ನೀಡಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅಗತ್ಯ ಕೆಲಸಗಳನ್ನು ನಿರ್ವಹಿಸಲಾಗಿದೆ. ರಸ್ತೆ ದುರಸ್ತಿ ಜೊತೆಗೆ ಹಲವರಿಗೆ ವೈಯಕ್ತಿಕ ಸೌಲಭ್ಯಗಳನ್ನು ನೀಡಲಾಗಿದೆ.

ಬೆಳಕಿನ ಕನಸು ನನಸು: ಮತ್ತಾವಿನ ಮನೆಮಂದಿಯ ಬಹುವರ್ಷದ ಕನಸಿಗೆ ಸ್ಪಂದಿಸಿದ ಜನಪ್ರತಿನಿಧಿಗಳು ಮತ್ತು ವಿದ್ಯುತ್ ಇಲಾಖೆ 90 ಕಂಬಗಳನ್ನು ಅಳವಡಿಸಿ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿದೆ. ಇದರ ಬಗ್ಗೆ ಸ್ಥಳೀಯರಿಗೆ ಬಹಳ ಖುಷಿ ಇದೆ.

ಆದರೆ ಮತ್ತಾವಿನ ಮನೆಗಳಿಗೆ ಹೋಗಲು ಮಳೆಗಾಲದಲ್ಲಿ ಹರಸಾಹಸ ಪಡಬೇಕಾಗಿದೆ. ಮರದ ಕಾಲುಸಂಕದ (ಪಾಪು) ಮೂಲಕ ಸರ್ಕಸ್ ಮಾಡಿ ಹೋಗಬೇಕಾಗಿದೆ. ಮತ್ತಾವು ರಸ್ತೆಯ ಪಕ್ಕದಲ್ಲೇ ಹೊಳೆಗೆ ಅಡ್ಡಲಾಗಿ ಹಾಕಲಾದ ಮರದ ಮೇಲೆ ನಡೆದು ಹೋಗಬೇಕು. ಇದರಲ್ಲಿ ನಡೆಯುವುದೆಂದರೆ ಜೀವವನ್ನು ಕೈಯಲ್ಲಿ ಹಿಡಿದು ಸಾಗುವ ಅನುಭವ. ಎಲ್ಲಾದರೂ ಆಯ ತಪ್ಪಿದರೆ ಹೊಳೆಗೆ ಬಿದ್ದು ಕೊಚ್ಚಿ ಹೋಗುವ ಭೀತಿ ಇದೆ.

ನಕ್ಸಲ್ ಪ್ಯಾಕೇಜ್ ಸೇರಿದಂತೆ ಹಲವು ಯೋಜನೆಯಡಿ ಹಲವು ಭಾರೀ ಮನವಿ ಮಾಡಿದರೂ ಇಲ್ಲಿನ ಸೇತುವೆಯ ಕನಸು ಮಾತ್ರ ಕನಸಾಗಿಯೇ ಉಳಿದಿದೆ.

ಜಿಲ್ಲಾಧಿಕಾರಿ ಭೇಟಿ–ಭರವಸೆ: ಇಲ್ಲಿಗೆ ಹೆಚ್ಚಿನ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ, ಸೇತುವೆ ಮತ್ತು ಇತರ ಬೇಡಿಕೆಯನ್ನು ಆದ್ಯತೆಯ ನೆಲೆಯಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈ ತನಕ ಸೇತುವೆಯ ಕಾಮಗಾರಿ ಆರಂಭವಾಗಿಲ್ಲ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !