ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಇಆರ್‌ಟಿ ಪಠ್ಯ ಪುಸ್ತಕ ಅನುವಾದಕ್ಕೆ ಶಿಕ್ಷಣ ತಜ್ಞರ ವಿರೋಧ

Last Updated 8 ಮಾರ್ಚ್ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಹಂತದ 6ನೇ ತರಗತಿಯಿಂದ ಕೇಂದ್ರೀಯ (ಎನ್‌ಸಿಇಆರ್‌ಟಿ) ಶಾಲಾ ಪಠ್ಯ ಪುಸ್ತಕಗಳನ್ನು ಅನುವಾದಿಸಿ ಅಳವಡಿಸುವ ಕ್ರಮ ಕೈಬಿಡಬೇಕು ಎಂದು ಶಿಕ್ಷಣ ತಜ್ಞರು ಮತ್ತು ಚಿಂತಕರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

ಆರನೇ ತರಗತಿಯಿಂದ ಭಾಷಾ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಉಳಿದ ವಿಷಯಗಳಿಗೆ ಕೇಂದ್ರೀಯ ಶಾಲೆಗಳ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕಗಳನ್ನು ಯಥಾವತ್‌ ಅನುವಾದಿಸಲು ಮುಂದಾಗಿದೆ. ಈ ಸಂಬಂಧ ಮೊದಲ ಹಂತವಾಗಿ ರಾಜ್ಯದ 74 ಆದರ್ಶ ಶಾಲೆಗಳಲ್ಲಿ ಕೇಂದ್ರೀಯ ಪಠ್ಯಗಳನ್ನು ಅಳವಡಿಸಲು 2017ರ ಆಗಸ್ಟ್‌ 10 ರಂದೇ ಆದೇಶ ಹೊರಡಿಸಲಾಗಿದೆ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, 2017 ರ ಆಗಸ್ಟ್‌ 4 ರಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು 74 ಆದರ್ಶ ಶಾಲೆಗಳಲ್ಲದೆ, ರಾಜ್ಯದ ಎಲ್ಲ ಶಾಲೆಗಳಿಗೂ ಕೇಂದ್ರೀಯ ಪಠ್ಯಗಳನ್ನು ಅಳವಡಿಸಲು ನೀಡಿದ ಸೂಚನೆಯಂತೆ ರಾಜ್ಯ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು 2017 ರ ಆಗಸ್ಟ್‌ 7 ರಂದು ಟಿಪ್ಪಣಿ ಹೊರಡಿಸಿ, ಅನುವಾದ ಕಾರ್ಯ ಕೈಗೊಳ್ಳಲು ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದರು. ಆಗ ರಾಜ್ಯದ ಪರಿಷ್ಕೃತ ಪಠ್ಯಗಳನ್ನು ಜಾರಿಗೆ ತಂದಿದ್ದರಿಂದ ಸ್ಥಗಿತಗೊಂಡಿದ್ದ ಅನುವಾದ ಕಾರ್ಯವನ್ನು ಈಗ ಮತ್ತೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರೀಯ ಪಠ್ಯಗಳನ್ನು ಯಥಾವತ್ತಾಗಿ ಅಳವಡಿಸುವ ಮೂಲಕ ಸಂವಿಧಾನದತ್ತ ಒಕ್ಕೂಟ ವ್ಯವಸ್ಥೆಗೆ ಅಪಚಾರ ಮಾಡಲಾಗುತ್ತಿದೆ. ರಾಜ್ಯದ ಶೈಕ್ಷಣಿಕ ಸ್ವಾಯತ್ತತೆಗೆ ಧಕ್ಕೆ ತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪತ್ರಕ್ಕೆ ಶಿಕ್ಷಣ ತಜ್ಞರಾದ ಪ್ರೊ ಷ.ಶೆಟ್ಟರ್‌, ಬರಗೂರು ರಾಮಚಂದ್ರಪ್ಪ, ಡಾ.ಜಿ.ರಾಮಕೃಷ್ಣ, ಕೆ.ಮರುಳಸಿದ್ದಪ್ಪ, ಎಸ್‌.ಚಂದ್ರಶೇಖರ್‌, ಹಂ.ಗು.ರಾಜೇಶ್‌, ಒ.ಅನಂತರಾಮಯ್ಯ ಮುಂತಾದವರು ಸಹಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT