ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಆವರಣದಲ್ಲಿ ರೋಗಿಗಳ ರೋದನ

ಶೆಡ್‌ನಲ್ಲಿ ಮಲಗದಂತೆ ನೆಪ್ರೊ ಯುರಾಲಜಿ ಸಂಸ್ಥೆ ಸೂಚನೆ
Last Updated 5 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಚಿಕಿತ್ಸೆಗಾಗಿ ಮೂರು– ನಾಲ್ಕು ದಿನಗಳಿಂದ ನೆಪ್ರೊ ಯುರಾಲಜಿ ಸಂಸ್ಥೆಯು ಶೆಡ್‌ನಲ್ಲೇ ಕಾಯುತ್ತಿದ್ದ ರೋಗಿಗಳ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಗಿದೆ.

ರೋಗಿಗಳು ಶೆಡ್‌ನಲ್ಲಿ ರಾತ್ರಿ ಕಳೆದ ಸುದ್ದಿ ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದ ನೆಪ್ರೊ ಯುರಾಲಜಿ ಸಂಸ್ಥೆ, ಅದರ ಬದಲು, ‘ರಾತ್ರಿ ವೇಳೆ ಆವರಣದಲ್ಲಿ ಮಲಗಬಾರದು’ ಎಂದು ಸೂಚಿಸಿ ಕೈತೊಳೆದುಕೊಂಡಿದೆ. ದೂರದ ಊರುಗಳಿಂದ ಚಿಕಿತ್ಸೆ ಅರಸಿ ಬಂದಿರುವ ರೋಗಿಗಳ ಪಾಲಿಗೆ ಸಂಸ್ಥೆಯ ಈ ನಿರ್ಧಾರವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅತ್ತ ಮನೆಗೂ ಹೋಗಲಾರದೆ, ಇತ್ತ ಚಿಕಿತ್ಸೆಯೂ ದೊರೆಯದೆರೋಗಿಗಳು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ.

ಸಂಸ್ಥೆಯು 130 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. ಹಾಗಾಗಿ ಸಂಸ್ಥೆಯು, ವಿವಿಧ ವೈದ್ಯಕೀಯ ಪರೀಕ್ಷೆಗಳ ವರದಿ ಬಂದ ಬಳಿಕ ಚಿಕಿತ್ಸೆಗೆ ಬರುವಂತೆ ರೋಗಿಗಳಿಗೆ ಸೂಚಿಸಿದೆ. ಪರಿಣಾಮ ದೂರದ ಊರುಗಳಿಂದ ಬಂದ ರೋಗಿಗಳು ಚಿಕಿತ್ಸೆ ಪಡೆದುಕೊಂಡೇ ಹೋಗಬೇಕೆಂದು ಸಂಸ್ಥೆಯ ಆವರಣದಲ್ಲಿರುವ ಶೆಡ್‌ನಲ್ಲಿ ನೋವನ್ನು ಸಹಿಸುತ್ತಲೇ ಮೂರು–ನಾಲ್ಕು ದಿನಗ
ಳಿಂದ ಕಾಲಕಳೆಯುತ್ತಿದ್ದರು.

‘ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಂಡ ಪರಿಣಾಮ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೆ. ದೇಹದಲ್ಲಿ ಪೈಪ್‌ ಅಳವಡಿಸಿದ್ದು, ಇದೀಗ ನೋವು ಕಾಣಿಸಿಕೊಂಡಿದೆ. ವೃತ್ತಿಯಲ್ಲಿ ನಾನು ಚಾಲಕ. ಈಗ ನೋವಿನಿಂದಾಗಿ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗಿದೆ. ಹಾಗಾಗಿ ಚಿಕಿತ್ಸೆ ಪಡೆದುಕೊಳ್ಳಲು ಬೆಳಮಂಗಲದಿಂದ ಬಂದಿರುವೆ. ನಾಲ್ಕು ದಿನವಾದರೂ ದಾಖಲಿಸಿಕೊಂಡಿಲ್ಲ’ ಎಂದು ಶೆಡ್‌ನಲ್ಲಿ ಆಶ್ರಯ ಪಡೆದಿದ್ದ ರೋಗಿ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೋವು ಜಾಸ್ತಿಯಿದೆ ಎಂದು ಹೇಳಿದರೆ ಕೂಡಾ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುತ್ತಿಲ್ಲ. ರಾತ್ರಿ ವೇಳೆ ನೋವು ತಾಳಲಾರದೇ ಶುಶ್ರೂಷಕಿಯಿಂದ ಡ್ರಿಪ್ಸ್ ಹಾಕಿಸಿಕೊಂಡೆ. ಬಸ್ಸಿನಲ್ಲಿ ವಾಪಸು ಮನೆಗೆ ಕೂಡಾ ಹೋಗುವ ಹಾಗಿಲ್ಲ. ವರದಿ ಬಂದ ಮೇಲೆ ಚಿಕಿತ್ಸೆ ನೀಡುತ್ತೇವೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದೀಗ ರಾತ್ರಿ ವೇಳೆ ಮಲಗಲೂ ಜಾಗವಿಲ್ಲದಂತಾಗಿದೆ’ ಎಂದು ಅಳಲು ತೋಡಿಕೊಂಡರು.

**

ರಾಜ್ಯದ ಬೇರೆ ಬೇರೆ ಊರುಗಳಿಂದ ರೋಗಿಗಳು ಗುಣಮಟ್ಟದ ಚಿಕಿತ್ಸೆ ಅರಸಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಅವರ ಸಂಕಷ್ಟ ಅರ್ಥೈಸಿಕೊಂಡು, ಅವರು ಉಳಿದುಕೊಳ್ಳಲು ನೆಲೆ ಒದಗಿಸಬೇಕು. ಆರೋಗ್ಯ ಸಚಿವರು ಈ ಬಗ್ಗೆ ಗಮನಹರಿಸಬೇಕು.
- ಮಂಜುನಾಥ್, ಬೆಳಮಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT