ಸೊರಗಿದ ‘ಅರಮನೆ’ಗೆ ಮಳೆ ಆತಂಕ

ಮಂಗಳವಾರ, ಜೂಲೈ 16, 2019
23 °C
‘ಅಭಿವೃದ್ಧಿ’ ಮರೆತ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆ

ಸೊರಗಿದ ‘ಅರಮನೆ’ಗೆ ಮಳೆ ಆತಂಕ

Published:
Updated:
Prajavani

ಮಡಿಕೇರಿ: ಅಬ್ಬಾ… ಮಡಿಕೇರಿ ಅಂದ ಕೂಡಲೇ ತಕ್ಷಣ ನೆನಪಿಗೆ ಬರೋದ್‌ ಇಲ್ಲಿನ ಮಂಜು ಮುಸುಕಿದ ವಾತಾವರಣ, ರಾಜಾಸೀಟ್‌, ಅರಮನೆ, ಓಂಕಾರೇಶ್ವರ ದೇಗುಲ... ರಾಜಾಸೀಟ್‌ ಈಗ ಅಭಿವೃದ್ಧಿಯತ್ತ ಹೆಜ್ಜೆಯಿಟ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಅದೇ ‘ಅರಮನೆ’ಯ ಪಾಡು ಕೇಳುವವರೇ ಇಲ್ಲ. 

ಮಡಿಕೇರಿಯಲ್ಲಿ ಇತಿಹಾಸದ ಕುರುಹು ಆಗಿರುವ ಅರಮನೆಯನ್ನು ಉಳಿಸುವತ್ತ ‘ಗ್ರೀನ್‌ ಸಿಟಿ ಫೋರಂ’ ಸದಸ್ಯರು ಹಾಗೂ ಇತಿಹಾಸ ತಜ್ಞರೂ ಸೇರಿದಂತೆ ಹಲವರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆ ಮಾತ್ರ ಅಲ್ಪಸ್ವಲ್ಪ ಕೆಲಸ ಮಾಡಿ ಕೈತೊಳೆದುಕೊಂಡಿದೆ.

ಒಮ್ಮೆ ಅರಮನೆ ಆವರಣದ ಒಳಹೊಕ್ಕರೇ ಸಾಕು, ಇತಿಹಾಸದ ಕುರುಹು ಬದಲಿಗೆ ಬರೀ ವಾಹನ, ಕಸಕಡ್ಡಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ಬಂದವರೇ ಕಾಣಿಸುತ್ತಾರೆ. ಇಂದೋ– ನಾಳೆಯೋ ಕುಸಿಯುವ ಹಂತ ತಲುಪಿರುವ ಅರಮನೆಯನ್ನು ಉಳಿಸಲು ಕೇಂದ್ರ ಸರ್ಕಾರ ವ್ಯಾಪ್ತಿಗೆ ಒಳಪಟ್ಟಿರುವ ಇಲಾಖೆ ಯಾವುದೇ ಯೋಜನೆ ರೂಪಿಸಿಲ್ಲ. ಕಳೆದ ವರ್ಷದ ಮಳೆಗಾಲದಲ್ಲಿ ಅರಮನೆಯ ಒಂದುಭಾಗದ ಚಾವಣಿ ಕುಸಿದಿತ್ತು. ಈ ಮಳೆಗಾಲದಲ್ಲಿ ಅದರ ಸ್ಥಿತಿ ಏನಾಗಲಿದೆಯೋ ಎಂಬ ಆಂತಕ ಎಲ್ಲರನ್ನೂ ಕಾಡುತ್ತಿದೆ.

ಅರಸರ ಆಳ್ವಿಕೆಯ ಅರಮನೆ ಹಾಗೂ ಸುಂದರ ಕೋಟೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯಯಿದೆ. ಪುರಾತತ್ವ ಇಲಾಖೆ ಪದೇ ಪದೇ ಸರ್ವೆ ನಡೆಸುತ್ತೆ. ಮಣ್ಣಿನ ಗೋಡೆ ಮಾತ್ರ ನಮಗೆ ಹಸ್ತಾಂತರವಾಗಿದೆ ಎಂದು ನೆಪಹೇಳಿ ಅರಮನೆಯನ್ನೇ ನಿರ್ಲಕ್ಷ್ಯ ಮಾಡುತ್ತಿದೆ.

ಅರಮನೆಯ ಗೋಡೆಗಳು ಕಪ್ಪಿಟ್ಟಿವೆ. ಹೆಂಚುಗಳು ಉದುರಿ ಬೀಳುವ ಸ್ಥಿತಿಗೆ ತಲುಪಿದೆ. ಕೆಲವೆಡೆ ಗೋಡೆಯಲ್ಲೂ ಬಿರುಕು ಕಾಣಿಸಿಕೊಂಡಿದೆ. ಈ ಆತಂಕದ ನಡುವೆಯೇ ಅರಮನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ದಿನ ದೂಡುತ್ತಿದ್ದಾರೆ. ಗಾಳಿಬೀಡು ರಸ್ತೆಯಲ್ಲಿ ಹೊಸದಾಗಿ ಜಿಲ್ಲಾ ಪಂಚಾಯಿತಿಗೆ ಬೃಹತ್‌ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಅಲ್ಲಿಗೆ ಸ್ಥಳಾಂತರ ಪ್ರಕ್ರಿಯೆ ಮಾತ್ರ ವಿಳಂಬವಾಗಿದೆ. ನ್ಯಾಯಾಲಯ ಸಂಕೀರ್ಣ ಸಹ ಕೋಟೆ ಆವರಣದಲ್ಲಿಯೇ ಇದ್ದು ಅದೂ ಸಹ ಸ್ಥಳಾಂತರಗೊಳ್ಳಬೇಕಿದೆ.

ಹಗ್ಗಜಗ್ಗಾಟ:
ಜಿಲ್ಲಾ ಪಂಚಾಯಿತಿ ಕಚೇರಿಗಳು ಸ್ಥಳಾಂತರವಾಗದೇ ನಾವು ಅರಮನೆಯನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸುಮ್ಮನಿದ್ದಾರೆ. ಒಮ್ಮೆ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಅವರು ಪುರಾತತ್ವ ಇಲಾಖೆ ಅಧಿಕಾರಿ ಮೂರ್ತಿಶ್ವರಿ ಅವರಿಗೆ ತಕ್ಷಣವೇ ಅರಮನೆ ಅಭಿವೃದ್ಧಿಗೊಳಿಸಿ; ನಾವೇ ಭದ್ರತಾ ಠೇವಣಿ ಇಡುತ್ತೇವೆ. ಇಲ್ಲವೇ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿ ಎಂದು ಹೇಳಿದ್ದರು. ಅದಕ್ಕೂ ಕ್ಯಾರೆ ಎನ್ನುತ್ತಿಲ್ಲ. ದಿನದಿಂದ ದಿನಕ್ಕೆ ಅರಮನೆ ಸೊರಗುತ್ತಿದೆ.

ಇತಿಹಾಸ:
ಹಾಲೇರಿ ವಂಶದ ಅರಸರ ಕಾಲದಲ್ಲಿ ಮುದ್ದುರಾಜ ಎಂಬಾತ 17ನೇ ಶತಮಾನದಲ್ಲಿ ಈ ಮಣ್ಣಿನ ಕೋಟೆ ಹಾಗೂ ಅರಮನೆ ಕಟ್ಟಿಸಿದ್ದ. ಇದನ್ನೇ ಟಿಪ್ಪು ಸುಲ್ತಾನ್‌ ಕಲ್ಲಿನಲ್ಲಿ ಪುನರ್‌ ನಿರ್ಮಿಸಿ ‘ಜಾಫರಾಬಾದ್‌’ ಎಂದು ಕರೆದಿದ್ದ. 1790ರಲ್ಲಿ ದೊಡ್ಡ ವೀರರಾಜೇಂದ್ರ ಕೋಟೆ ವಶಪಡಿಸಿಕೊಂಡಿದ್ದ. ಬಳಿಕ 1834ರಲ್ಲಿ ಬ್ರಿಟಿಷರ ಆಳ್ವಿಕೆಗೂ ಈ ಕೋಟೆ ಒಳಪಟ್ಟಿತ್ತು.

1855ರಲ್ಲಿ ಇದೇ ಆವರಣದಲ್ಲಿ ನಿರ್ಮಿಸಿದ್ದ ಚರ್ಚ್‌ನಲ್ಲಿ ವಸ್ತು ಸಂಗ್ರಾಹಾಲಯವಿದೆ. 1812ರಲ್ಲಿ ಇಮ್ಮಡಿ ಲಿಂಗರಾಜ ಒಡೆಯರ ಕಾಲದಲ್ಲಿ ನಿರ್ಮಿಸಿದ್ದ ಅರಮನೆಯಲ್ಲಿ ಈಗ ಸರ್ಕಾರಿ ಕಚೇರಿಗಳಿವೆ. ಅರಮನೆ ಹಿಂದೆ ಕೆಲವೇ ವರ್ಷಗಳ ಹಿಂದೆ ನಿರ್ಮಿಸಿದ್ದ ಕಟ್ಟಡದಲ್ಲಿ ನ್ಯಾಯಾಲಯ ಸಂಕೀರ್ಣವಿದೆ. ಸರ್ಕಾರಿ ಕಚೇರಿಗಳಿಗೆ ದಿನನಿತ್ಯ ಬರುವ ಜನದಟ್ಟಣೆ ಹಾಗೂ ವಾಹನಗಳ ಭಾರವೂ ಅರಮನೆ ಮೇಲೆ ಬೀಳುತ್ತಿದೆ. 

ಕೋಟೆ ಕೊಡಗಿನ ಹೆಮ್ಮೆ. ಅದರ ರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗಬೇಕು. ಇಲ್ಲದಿದ್ದರೆ ಇತಿಹಾಸದ ಪುಟ ಸೇರಲಿದೆ ಎಂದು ಹಿರಿಯ ಸಾಹಿತಿ ನಾಗೇಶ್‌ ಕಾಲೂರು ಪದೇ ಪದೇ ನೆನಪಿಸುತ್ತಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಂಜಿನ ನಗರಿಯ ಹೃದಯ ಭಾಗದಲ್ಲಿದ್ದ ಸುಂದರ ಪ್ರವಾಸಿ ತಾಣ, ಐತಿಹಾಸಿಕ ಕೇಂದ್ರ ಸೊರಗಿ ನಿಂತಿದೆ.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !