ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಪ್ಪು ಕಲ್ಪನೆ ಬಿಡಿ; ಚೈತನ್ಯ ತುಂಬಿ’

ದಕ್ಷಿಣ ಭಾರತೀಯ ಮನೋವೈದ್ಯರ ಸಂಘದಿಂದ ಮನೋವೈದ್ಯರ ಸಮ್ಮೇಳನ
Last Updated 19 ಅಕ್ಟೋಬರ್ 2019, 14:19 IST
ಅಕ್ಷರ ಗಾತ್ರ

ಮಡಿಕೇರಿ: ‘ಸಿನಿಮಾ, ಸಾಮಾಜಿಕ ಮಾಧ್ಯಮಗಳಲ್ಲಿ ಮನೋವೈದ್ಯರು ಹಾಗೂ ಮಾನಸಿಕ ಒತ್ತಡಗಳಿಂದ ಬಳಲುತ್ತಿರುವವರನ್ನು ಅಪಹಾಸ್ಯ ಮಾಡಿ ಕೆಟ್ಟದಾಗಿ ಬಿಂಬಿಸುವ ಪ್ರಕರಣಗಳ ವಿರುದ್ಧ ಕಾನೂನಾತ್ಮಕ ಹೋರಾಟ ಕೈಗೊಂಡು ವಿಕೃತ ಪ್ರವೃತ್ತಿಗೆ ಕಡಿವಾಣ ಹಾಕಲಾಗುತ್ತದೆ’ ಎಂದು ಭಾರತೀಯ ಮನೋವೈದ್ಯರ ಸಂಘದ ಅಧ್ಯಕ್ಷ ಡಾ.ಮುರುಗೇಶ್ ವೈಷ್ಣವ್ ಹೇಳಿದರು.

ಮಡಿಕೇರಿಯ ಕೊಡಗು ವೈದ್ಯಕೀಯ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಭಾರತೀಯ ಮನೋವೈದ್ಯರ ಸಂಘದ ವತಿಯಿಂದ ಆಯೋಜಿಸಿರುವ 52ನೇ ಸಮಾವೇಶದ 2ನೇ ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸಂಘವು ಹಿಂದಿ ಸಿನಿಮಾ ‘ಮೆಂಟಲ್ ಹೈ ಕ್ಯಾ...’ ಎಂಬ ಹೆಸರಿನ ವಿರುದ್ಧ ಹೋರಾಟ ಕೈಗೊಂಡು ಕೊನೆಗೂ ಹೆಸರು ಬದಲಾವಣೆ ಮಾಡುವಲ್ಲಿ ಸಫಲವಾಗಿದೆ. ಮಾನಸಿಕವಾಗಿ ಬಳಲುತ್ತಿರುವವರ ಬಗ್ಗೆ ತಪ್ಪು ಕಲ್ಪನೆಯ ಬದಲಿಗೆ ಚೈತನ್ಯ ತುಂಬುವ ಮನೋಪ್ರವೃತ್ತಿ ಮೂಡಬೇಕಾಗಿದೆ’ ಎಂದರು.

‘ರಾಜಕಾರಣಿಗಳು ಕೂಡ ಹಲವು ಸಂದರ್ಭ ಪರಸ್ಪರ ಟೀಕಿಸಲು ಹುಚ್ಚ ಎಂಬ ಪದ ಬಳಕೆ ಮಾಡುತ್ತಾರೆ. ಆದರೆ, ರಾಜಕಾರಣಿಗಳಿಗಿಂತ ಮಾನಸಿಕ ಅಸ್ವಸ್ಥರು ಎಷ್ಟೋ ಉತ್ತಮ ಮಾನಸಿಕ ಆರೋಗ್ಯ ಹೊಂದಿರುತ್ತಾರೆ. ಮಾನಸಿಕ ಚಿಕಿತ್ಸಾ ಪದ್ಧತಿ ಸಂಬಂಧಿತ ಹಲವಾರು ತಿದ್ದುಪಡಿಗಳು ಸಂವಿಧಾನದ ಮೂಲಕ ಆಗಬೇಕಾಗಿದೆ’ ಎಂದು ಪ್ರತಿಪಾದಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಕಾರ್ಯಪ್ಪ ಮಾತನಾಡಿ, ದೇಶದ ಹಲವೆಡೆಗಳಿಂದ 850ಕ್ಕೂ ಅಧಿಕ ಮನೋವೈದ್ಯರು ಪಾಲ್ಗೊಂಡಿರುವ ಈ ಸಮ್ಮೇಳನಕ್ಕೆ ಸಹಕಾರ ನೀಡಿದ್ದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೆಮ್ಮೆಯಾಗಿದೆ ಎಂದು ಹೇಳಿದರು.

ದಕ್ಷಿಣ ಭಾರತ ಮನೋವೈದ್ಯರ ಸಂಘದ ನಿರ್ಗಮಿತ ಅಧ್ಯಕ್ಷ ಡಾ.ಎ. ಜಗದೀಶ್ ಮಾತನಾಡಿ, 2027ರ ವೇಳೆಗೆ ದೇಶದಲ್ಲಿ ಜಾಗತಿಕ ಗುಣಮಟ್ಟದ ಮನೋವೈದ್ಯಕೀಯ ಚಿಕಿತ್ಸಾ ಪದ್ಧತಿ ಅಳವಡಿಕೆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ಸಾಗಿವೆ. ಮಾದಕ ವ್ಯಸನಿಗಳಾಗುತ್ತಿರುವ ಯುವಜನಾಂಗವನ್ನು ಆ ದುಶ್ಚಟದಿಂದ ಹೊರತರುವುದೂ ಮನೋವೈದ್ಯರ ಪ್ರಮುಖ ಸವಾಲುಗಳಲ್ಲೊಂದು ಎಂದೂ ಹೇಳಿದರು.

ದಕ್ಷಿಣ ಭಾರತ ಮನೋವೈದ್ಯರ ಸಂಘಧ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಡಾ.ಪಿ. ಕಿಶನ್, ದಕ್ಷಿಣ ಭಾರತದಲ್ಲಿ ಮನೋವೈದ್ಯರ ಸಂಘಕ್ಕೆ ಸದಸ್ಯರ ಸಂಖ್ಯೆ ವೃದ್ಧಿಸುವ ಗುರಿಯೊಂದಿಗೆ, ಯೋಗ ವಿಧಾನದ ಮೂಲಕ ಮಾನಸಿಕವಾಗಿ ಬಳಲುವವರಿಗೆ ಸೂಕ್ತ ಚಿಕಿತ್ಸಾ ವಿಧಾನ ಅಳವಡಿಸಲು ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.

ಸಂಘಧ ಕಾರ್ಯದರ್ಶಿ ಡಾ.ಮಹೇಶ್ ಗೌಡ, ವಲಯ ಕಾರ್ಯದರ್ಶಿ ಡಾ.ನರೇಶ್ ವಡ್ಲಮಣಿ, ಖಜಾಂಚಿ ಡಾ.ಕೆ. ಗಂಗಾರಾಮ್, ವಾರ್ತಾ ಸಂಚಿಕೆ ಸಂಪಾದಕ ಡಾ.ಸಾನ್ಯುವಲ್ ಅಮೀನ್, ಮಡಿಕೇರಿ ಸ‌ರ್ಕಾರಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಎ.ಜೆ. ಲೋಕೇಶ್ ಹಾಜರಿದ್ದರು. ಜಾಹ್ನವಿ ಪ್ರಾರ್ಥಿಸಿದರು.

ಲಂಡನ್‌ನಿಂದ ಸಂವಾದ:ಮನೋವೈದ್ಯರ ಸಮ್ಮೇಳನದಲ್ಲಿ ಲಂಡನ್‌ನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ವೈದ್ಯರೊಂದಿಗೆ ಸಂವಾದ ನಡೆಸಿದ ಹೆಸರಾಂತ ಮಕ್ಕಳ ತಜ್ಞ ಪ್ರೊ.ಸ್ಟೀಫನ್ ಸ್ಕಾಟ್, ಜಗತ್ತಿನಾದ್ಯಂತ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಠಿಣ ಕಾನೂನು ಜಾರಿಗೊಳಿಸಲಾಗಿದ್ದರೂ ಕಾನೂನು ಮೀರಿ ಮಕ್ಕಳ ದೌಜ೯ನ್ಯ ನಿರಂತರವಾಗಿವೆ ಎಂದರು.

ಪೋಷಕರಲ್ಲಿ ಮಕ್ಕಳ ಪಾಲನೆ ಪೋಷಣೆ ಕುರಿತಂತೆ ಮತ್ತಷ್ಟು ಜಾಗೃತಿ, ಸೂಕ್ತ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT