ಗುರುವಾರ , ನವೆಂಬರ್ 21, 2019
24 °C
ಎಂಜಿನಿಯರ್‌ ಶ್ರೀಕಂಠಯ್ಯ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವ ವಿ. ಸೋಮಣ್ಣ ಸೂಚನೆ

ಅನುಮತಿ ಪಡೆಯದೆ ಖಾಸಗಿ ಬ್ಯಾಂಕ್‌ನಲ್ಲಿ ₹ 21 ಕೋಟಿ ಜಮೆ!

Published:
Updated:

ಎಲ್ಲ ಮುದ್ರಣಕ್ಕೆ...
 

ಮಡಿಕೇರಿ: ಪ್ರಾಕೃತಿಕ ವಿಕೋಪದ ಕಾಮಗಾರಿಗೆ ಬಿಡುಗಡೆ ಮಾಡಿದ್ದ ₹ 21 ಕೋಟಿಯನ್ನು ಕೊಡಗು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಶ್ರೀಕಂಠಯ್ಯ ಅವರು ಕಾನೂನು ಬಾಹಿರವಾಗಿ ಖಾಸಗಿ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಜಮೆ ಮಾಡಿರುವುದು ತನಿಖೆಯಿಂದ ಸಾಬೀತಾಗಿದೆ. ಶ್ರೀಕಂಠಯ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸೂಚಿಸಿದ್ದಾರೆ.

ಪ್ರಾಕೃತಿಕ ವಿಕೋಪದ ಪರಿಹಾರ ಕಾಮಗಾರಿಗಳಿಗೆ ಬಳಕೆ ಮಾಡುವಂತೆ ಸೂಚಿಸಿ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಹಣ ಬಿಡುಗಡೆ ಮಾಡಿದ್ದರು. ಆದರೆ, ಶ್ರೀಕಂಠಯ್ಯ ಖಾಸಗಿ ಬ್ಯಾಂಕ್‌ನಲ್ಲಿ ಈ ಹಣವನ್ನು ಜಮೆ ಮಾಡಿದ್ದರು. ಮಾಹಿತಿ ತಿಳಿದ ಜಿಲ್ಲಾ ಪಂಚಾಯಿತಿ ಸದಸ್ಯರು, ಅವ್ಯವಹಾರದ ಶಂಕೆ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದರು. ಸದಸ್ಯರ ಒತ್ತಾಯದಂತೆ ತನಿಖೆ ನಡೆದಿದ್ದು ಅನುಮತಿ ಪಡೆಯದೇ ದೊಡ್ಡ ಮೊತ್ತದ ಹಣವನ್ನು ಖಾಸಗಿ ಬ್ಯಾಂಕ್‌ನಲ್ಲಿ ಇಟ್ಟಿದ್ದು ಸಾಬೀತಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರೂ ಶ್ರೀಕಂಠಯ್ಯ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು.

ಏನಿದು ಪ್ರಕರಣ?:
ಮಹಾಮಳೆಯಿಂದ ಜಿಲ್ಲೆಯಲ್ಲಿ ಹಾನಿಯಾಗಿದ್ದ ಗ್ರಾಮೀಣ ರಸ್ತೆಗಳು, ಕುಡಿಯುವ ನೀರು ಘಟಕಗಳ ದುರಸ್ತಿಗೆ ₹ 28 ಕೋಟಿ ಹಣವನ್ನು ಜಿಲ್ಲಾಧಿಕಾರಿ ನಿಗದಿಗೊಳಿಸಿ ಮೊದಲ ಹಂತದಲ್ಲಿ ₹ 21 ಕೋಟಿ ಬಿಡುಗಡೆಗೊಳಿಸಿದ್ದರು. ಅದನ್ನು ಹಂತ ಹಂತವಾಗಿ ಖರ್ಚು ಮಾಡಲು ನಿಯಮದಂತೆ ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಖಾತೆ ತೆರೆದು ಇಡಬೇಕಿತ್ತು. ಆದರೆ, ಶ್ರೀಕಂಠಯ್ಯ 2019ರ ಮಾರ್ಚ್‌ 14ರಂದು ಖಾಸಗಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದು ಹಣವನ್ನು ಇಟ್ಟಿದ್ದರು. ಪ್ರಕೃತಿ ವಿಕೋಪದಡಿ ಬಿಡುಗಡೆಯಾದ ಅನುದಾನವನ್ನು ಠೇವಣಿ ಇಡದೆ ಉಳಿತಾಯ ಖಾತೆ ತೆರೆದು ಇಟ್ಟಿದ್ದು ಅನುಮಾನಕ್ಕೆ ಕಾರಣವಾಗಿತ್ತು. ರಾಷ್ಟ್ರೀಯ ಅಥವಾ ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಹೊಸ ಖಾತೆ ತೆರೆಯಲು ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಶ್ರೀಕಂಠಯ್ಯ ಅನುಮತಿ ಪಡೆಯದೇ ಖಾಸಗಿ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದರು ಎಂಬುದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯ ಲೆಕ್ಕಾಧಿಕಾರಿ ತನಿಖೆ ನಡೆಸಿದ್ದರು.

‘ಶ್ರೀಕಂಠಯ್ಯ ಅವರು ಬ್ಯಾಂಕ್‌ ಖಾತೆ ತೆರೆಯಲು ಅನುಪತಿ ಪಡೆದಿರಲಿಲ್ಲ. ಬ್ಯಾಂಕ್‌ ಖಾತೆ ಪರಿಶೀಲಿಸಲಾಗಿದ್ದು ಬಡ್ಡಿ ಹಣ ಖಾತೆಯಲ್ಲೇ ಇದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.

ಪ್ರತಿಕ್ರಿಯಿಸಿ (+)