ಎನ್‌ಜಿಟಿ ಆದೇಶ ಮರುಪರಿಶೀಲನೆಗೆ ಮೇಲ್ಮನವಿ

7
ಬೆಳ್ಳಂದೂರು ಕೆರೆ ಮಾಲಿನ್ಯ

ಎನ್‌ಜಿಟಿ ಆದೇಶ ಮರುಪರಿಶೀಲನೆಗೆ ಮೇಲ್ಮನವಿ

Published:
Updated:
Deccan Herald

ಬೆಳಗಾವಿ: ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ದಂಡ ವಿಧಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಮರುಪರಿಶೀಲನೆ ಕೋರಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಬೆಂಗಳೂರಿನ ಕೆರೆಗಳ ಸಂರಕ್ಷಣೆಯನ್ನು ನಿರ್ಲಕ್ಷಿಸಲಾಗಿದೆ’ ಎಂದು ಅಭಿಪ್ರಾಯಪಟ್ಟಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಈ ಸಂಬಂಧ ರಾಜ್ಯ ಸರ್ಕಾರಕ್ಕೆ ₹ 50 ಕೋಟಿ, ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ₹ 25 ಕೋಟಿ ದಂಡ ವಿಧಿಸಿ ಕಳೆದ ವಾರ ಆದೇಶ ಹೊರಡಿಸಿತ್ತು.

ಈ ಮೂರೂ ಕೆರೆಗಳ ಪುನಶ್ಚೇತನ ಕಾರ್ಯಕ್ಕಾಗಿ ₹ 500 ಕೋಟಿ ಮೀಸಲಿಡಬೇಕು. ಕೆರೆಗಳ ಅಭಿವೃದ್ಧಿ ಕುರಿತ ಕಾರ್ಯಕ್ಷಮತೆಯ ಖಾತರಿ ಹಣವನ್ನಾಗಿ ಪ್ರತ್ಯೇಕವಾಗಿ ₹ 100 ಕೋಟಿ ಇರಿಸಬೇಕು ಎಂದು ಸೂಚಿಸಿತ್ತು.

’₹500 ಕೋಟಿ ಮೊತ್ತ ಠೇವಣಿ ಇಡಲು ಸಾಧ್ಯವಿಲ್ಲ. ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಬೆಳ್ಳಂದೂರು ಕೆರೆಯ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿವೆ‘ ಎಂದು ಸಭೆಯಲ್ಲಿ ಚರ್ಚಿಸಲಾಯಿತು. 

’ಕೆರೆಗಳ ಸುತ್ತ 75 ಮೀಟರ್‌ ಮೀಸಲು ಪ್ರದೇಶ ಇರಬೇಕು ಎಂದು ಎನ್‌ಜಿಟಿ 2016ರಲ್ಲಿ ಆದೇಶಿಸಿದೆ. ಅದನ್ನು ಅನುಷ್ಠಾನ ಮಾಡುವುದು ಕಷ್ಟ. ಹಲವು ಕೆರೆಗಳು ಬತ್ತಿ ಹೋಗಿವೆ. ಅಲ್ಲದೆ, ಜಲಮೂಲಗಳ ಸುತ್ತ ಅನೇಕ ಮಂದಿ ಮನೆ ಕಟ್ಟಿಕೊಂಡಿದ್ದಾರೆ. ಅವರನ್ನು ಎತ್ತಂಗಡಿ ಮಾಡಲು ಸಾಧ್ಯವಿಲ್ಲ‘ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

’ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಮೀಸಲು ಪ್ರದೇಶ 15 ಮೀಟರ್‌ಗಳಷ್ಟೇ ಇದೆ. ನಮ್ಮಲ್ಲಿ ಮಾತ್ರ ಐದು ಪಟ್ಟು ಹೆಚ್ಚಿದೆ. ಇದರ ವಿರುದ್ಧವೂ ಮೇಲ್ಮನವಿ ಸಲ್ಲಿಸಬೇಕು‘ ಎಂದು ಅಧಿಕಾರಿಗಳಿಗೆ ಪರಮೇಶ್ವರ ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್‌, ಬಿಬಿಎಂಪಿ ಆಯುಕ್ತ ಎಂ.ಮಂಜುನಾಥ ಪ್ರಸಾದ್‌, ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !