ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಾಣಾವರದ ಮನೆಯಲ್ಲಿ ಸ್ಫೋಟಕ ಪತ್ತೆ| ಶಂಕಿತ ಆರು ಉಗ್ರರಿಂದ ಸ್ಫೋಟಕ್ಕೆ ಸಂಚು!

ಸ್ಥಳೀಯ ಪೊಲೀಸರಿಗೆ ದೂರು ನೀಡಿದ ಎನ್‌ಐಎ ಅಧಿಕಾರಿ
Last Updated 9 ಜುಲೈ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಬಾಣಾವರದ ಹಳೇ ರೈಲ್ವೆ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಸ್ಫೋಟಕ ಜಪ್ತಿ ಮಾಡಿರುವ ಎನ್‌ಐಎ ಅಧಿಕಾರಿಗಳು, ‘ಮನೆಯಲ್ಲಿ ಈ ಹಿಂದೆ ವಾಸವಿದ್ದ ಆರು ಶಂಕಿತ ಉಗ್ರರು, ಬೆಂಗಳೂರು ಹಾಗೂ ಸುತ್ತಮುತ್ತಲ ಹಲವು ಸ್ಥಳಗಳಲ್ಲಿ ಬಾಂಬ್‌ ಸ್ಫೋಟಿಸಲು ಸಂಚು ರೂಪಿಸಿದ್ದರು’ ಎಂಬುದಾಗಿ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಸಂಬಂಧ ಬಂಧಿಸಿರುವಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ (30) ಎಂಬಾತನನ್ನೂ ದೊಡ್ಡಬಳ್ಳಾಪುರದಲ್ಲಿ ಜೂನ್ 25ರಂದು ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಆಧರಿಸಿ ಎನ್‌ಐಎ ಅಧಿಕಾರಿಗಳು, ಚಿಕ್ಕಬಾಣಾವರದ ನಿವಾಸಿ ಮಸ್ತಾನ್ ಎಂಬುವರಿಗೆ ಸೇರಿದ್ದ ಬಾಡಿಗೆ ಮನೆ ಮೇಲೆ ಭಾನುವಾರ ದಾಳಿ ಮಾಡಿದ್ದರು.

‘ಶಂಕಿತ ಉಗ್ರ ಹಬೀಬುರ್‌ ಹಾಗೂ ಐವರು ಸಹಚರರು ಈ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆಯಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದಾಗ, ಬಾಂಬ್‌ ತಯಾರಿಸಲು ಬೇಕಾದ ವಸ್ತುಗಳು, ಪುಸ್ತಕ ಹಾಗೂ ಏರ್‌ಗನ್‌ಗಳು ಪತ್ತೆಯಾಗಿವೆ. ಆ ಸಂಬಂಧ ಎನ್‌ಐಎ ಅಧಿಕಾರಿಯೇ ದೂರು ನೀಡಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಜಮಾತ್‌–ಉಲ್‌– ಮುಜಾಹಿದ್ದೀನ್‌ ಬಾಂಗ್ಲಾದೇಶ (ಜೆಎಂಬಿ)' ಸಂಘಟನೆಯ ಹಬೀಬುರ್‌ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಈಗ ಆ ಸಂಘಟನೆಯ ಐವರು ಶಂಕಿತರ ವಿರುದ್ಧ ಅಪರಾಧ ಸಂಚು (ಐಪಿಸಿ 34),ದೇಶದ್ರೋಹ (121ಎ),ಹತ್ಯೆಯ ಸಂಚು (ಐಪಿಸಿ 120ಬಿ) ಹಾಗೂ ಕಾನೂನುಬಾಹಿರ ಚಟುವಟಿಕೆ ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ತನಿಖೆಯನ್ನು ಎನ್‌ಐಎ ಅಧಿಕಾರಿಗಳೇ ನಡೆಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಗ್ರೆನೇಡ್‌ ಶೆಲ್‌ಗಳೂ ಪತ್ತೆ: ‘ಗ್ರೆನೇಡ್ ಶೆಲ್‌ಗಳು ಹಾಗೂ ಸುಧಾರಿತ ಸ್ಫೋಟಕಗಳುಮನೆಯಲ್ಲಿ ಸಿಕ್ಕಿವೆ. ಅವುಗಳಿಂದಲೇ ಬಾಂಬ್‌ ತಯಾರಿಸಿ ಸ್ಫೋಟ ನಡೆಸಲು ಶಂಕಿತರು ಸಂಚು ರೂಪಿಸಿದ್ದರು’ ಎಂದು ಎನ್‌ಐಎ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

‘ಮನೆ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ‘ವ್ಯಾಪಾರಿಗಳ ಸೋಗಿನಲ್ಲಿ ಶಂಕಿತರು ಮನೆಗೆ ಬಂದಿದ್ದರು. ಪಶ್ಚಿಮ ಬಂಗಾಳದ ಐಜುಲ್ ಮೊಂಡಲ್ ಎಂಬಾತನ ಹೆಸರಿನಲ್ಲಿ ಮನೆ ಬಾಡಿಗೆಗೆ ಕೊಟ್ಟಿದ್ದೆ. ಆರಂಭದಲ್ಲಿ ಇಬ್ಬರೇ ಮನೆಯಲ್ಲಿ ಇರುವುದಾಗಿ ಹೇಳಿದ್ದರು. ನಂತರ ಯಾರ‍್ಯಾರೂ ಮನೆಗೆ ಬಂದು ಹೋಗುತ್ತಿದ್ದರು’ ಎಂದು ಹೇಳಿಕೆ ನೀಡಿರುವ ಮಾಲೀಕ, ಮನೆಯಲ್ಲಿ ಬಾಡಿಗೆಗಿದ್ದ ಶಂಕಿತ ಉಗ್ರರ ಭಾವಚಿತ್ರಗಳನ್ನು ನೋಡಿ ಗುರುತಿಸಿದ್ದಾರೆ’ ಎಂದು ಅಧಿಕಾರಿ ಹೇಳಿದ್ದಾರೆ.

‘ಕರ್ನಾಟಕದ ಬೆಂಗಳೂರು ಹಾಗೂ ಹಲವು ನಗರಗಳಲ್ಲಿ ಸ್ಫೋಟ ನಡೆಸಲು ಶಂಕಿತರು ಸಂಚು ರೂಪಿಸಿದ್ದು ಸದ್ಯದ ತನಿಖೆಯಿಂದ ಗೊತ್ತಾಗಿದೆ. ಅದಕ್ಕೆ ಸಂಬಂಧಪಟ್ಟ ಪುರಾವೆಗಳೂ ಸಿಕ್ಕಿವೆ. ಈ ಶಂಕಿತರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಿ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಾಡಿಗೆ ಮನೆಯಲ್ಲಿದ್ದ ಶಂಕಿತರು

ನಜೀರ್ ಶೇಖ್ ಅಲಿಯಾಸ್ ಪಟ್ಲಾ ಅನಾಸ್,

ನಜ್ರುಲ್ ಇಸ್ಲಾಂ ಅಲಿಯಾಸ್ ಮೋಟಾ ಅನಾಸ್,

ಆಸಿಫ್ ಇಕ್ಬಾಲ್ ಅಲಿಯಾಸ್ ನದೀಮ್,

ಆರಿಫ್ ಹಾಗೂ ಜಾಹೀದುಲ್ಲಾ ಇಸ್ಲಾಂ ಅಲಿಯಾಸ್ ಕೌಸರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT