ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ನಿಖಿಲ್ ಗೆಲುವು: ಎಚ್‌ಡಿಕೆ ವಿಶ್ವಾಸ

Last Updated 18 ಏಪ್ರಿಲ್ 2019, 19:39 IST
ಅಕ್ಷರ ಗಾತ್ರ

ರಾಮನಗರ: ಮೊದಲ ಹಂತದ ಚುನಾವಣೆ ನಡೆದಿರುವ 14 ಕ್ಷೇತ್ರಗಳ ಪೈಕಿ 10ರಿಂದ -12 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ದಾಖಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೇತಗಾನಹಳ್ಳಿ ಮತಗಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ಪತ್ನಿ ಅನಿತಾ ಹಾಗೂ ಪುತ್ರ ನಿಖಿಲ್ ಜೊತೆಗೂಡಿ ಮತ ಚಲಾಯಿಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ಮಂಡ್ಯದಲ್ಲಿ ನಿಖಿಲ್ ಗೆಲುವು ನಿಶ್ಚಿತ. ಅಲ್ಲಿನ ಚುನಾವಣೆಯನ್ನು ಮಾಧ್ಯಮಗಳು ವಿಪರೀತವಾಗಿ ಬಿಂಬಿಸಿದವು. ಸುಮಲತಾರಿಗೆ ಮೋದಿಗಿಂತ ಹೆಚ್ಚಿನ ಪ್ರಚಾರ ಕೊಟ್ಟವು. ಇದರಿಂದ ರಾಜ್ಯದಲ್ಲಿ ಮೋದಿ ಅಲೆ ತಗ್ಗಿ, ಜೆಡಿಎಸ್‌–ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಳ್ಳೆಯದೇ ಆಯಿತು’ ಎಂದು ಮಾರ್ಮಿಕವಾಗಿ ನುಡಿದರು.

‘ಇಡೀ ದೇಶಕ್ಕೆ ಇದು ಮಹತ್ವದ ಚುನಾವಣೆ. ದೇಶ ಇಂದು ವಿಪತ್ತಿನಲ್ಲಿದೆ. ಕಳೆದ ಐದು ವರ್ಷದಿಂದ ರೈತರ ಸ್ಥಿತಿ ಚಿಂತಾಜನಕವಾಗಿದ್ದು, ಇಡೀ ರೈತ ಸಮುದಾಯವನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ’ ಎಂದರು.

ನಿಂಗೇ ಓಟು!: ಕೇತಗಾನಹಳ್ಳಿ ಮತಗಟ್ಟೆ ಬಳಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು ವಿಶೇಷವಾಗಿತ್ತು. ‘ನೋಡಣ್ಣ ನಮ್ಮ ಮೂವರದ್ದು ನಿಂಗೇ ಓಟು ಹಾಕೋ ಅದೃಷ್ಟ’ ಎಂದು ಹೇಳುತ್ತಲೇ ಕುಮಾರಸ್ವಾಮಿ ಸುರೇಶ್‌ ಅವರ ಕೈ ಕುಲುಕಿದರು.

20 ಕ್ಷೇತ್ರಗಳಲ್ಲಿ ಜಯ:‘ಈ ಬಾರಿ ದೇಶದಲ್ಲಿ ಎಲ್ಲೂ ಮೋದಿ ಅಲೆ ಇಲ್ಲ. ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರನ್ನು ಜನ ನಂಬುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿಯಲ್ಲಿ ಕುಟುಂಬದೊಂದಿಗೆ ಮತದಾನ ಮಾಡಿ ಅವರು ಮಾತನಾಡಿದರು. ‘ಅಚ್ಛೆ ದಿನ್ ಎಂದಿದ್ದರು. ಒಳ್ಳೆಯ ದಿನ ಬರಲಿಲ್ಲ. ಸ್ವಚ್ಛ ಭಾರತ್ ಎನ್ನುತ್ತಾರೆ. ವಾರಾಣಸಿಯಲ್ಲಿಯೇ ಸ್ವಚ್ಛತೆ ಇಲ್ಲ’ ಎಂದು ಲೇವಡಿ ಮಾಡಿದರು.

‘ಈ ಬಾರಿ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನರು ಸುರೇಶ್ ಅವರನ್ನು ಮತ್ತೊಮ್ಮೆ ಆಶೀರ್ವದಿಸುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT