ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ನಿರ್ಮಿಸಿಲ್ಲ ಎಂದು ಶಿಕ್ಷಿಸಬೇಡಿ: ನಿರ್ಮಲಾ ಸೀತಾರಾಮನ್‌ ಮನವಿ

Last Updated 24 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಮಮಂದಿರ ನಿರ್ಮಾಣ ಮಾಡಿಲ್ಲ ಎಂಬ ಕಾರಣಕ್ಕೆ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಶಿಕ್ಷಿಸಬಾರದು’ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮನವಿ ಮಾಡಿದರು.

‘ಚಿಂತಕರ ಚಾವಡಿ’ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ರಾಮಮಂದಿರ ನಿರ್ಮಾಣ ವಿಷಯದಲ್ಲಿ ಪಕ್ಷ ಭರವಸೆಗಳನ್ನಷ್ಟೇ ನೀಡುತ್ತಿದೆ ಎಂದು ಆರೋಪಿಸಬೇಡಿ. ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬದ್ಧ. ಸರ್ಕಾರ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದು ಹೆಚ್ಚಿನ ಭೂಮಿ ಕೇಳಿದೆ. ಕೆಲವು ಕಾನೂನಾತ್ಮಕ ವಿಷಯಗಳಿವೆ. ಜನರು ತಾಳ್ಮೆಯಿಂದ ಇರಬೇಕು. ಸರ್ಕಾರದ ಮೇಲೆ ನಂಬಿಕೆಯಿಡಬೇಕು’ ಎಂದರು.

‘ಮೋದಿ ಅವರು ಬದ್ಧತೆಯುಳ್ಳ, ಸಮರ್ಪಿತ ಮನೋಭಾವದ ಹಾಗೂ ಸ್ವಚ್ಛ ವ್ಯಕ್ತಿ. ಅವರ ವಿರುದ್ಧ ವಿರೋಧಪಕ್ಷಗಳು ಪಿತೂರಿ ಮಾಡುತ್ತಿವೆ. ಇಂತಹ ಅಪಪ್ರಚಾರಕ್ಕೆ ಜನರು ಕಿವಿಗೊಡಬಾರದು. ಮೋದಿಯ ನೇತೃತ್ವದ ಸರ್ಕಾರ ಪೂರ್ಣ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರಲಿದೆ. ಮಂದಿರ ನಿರ್ಮಾಣ ಮಾಡಲಿದೆ’ ಎಂದು ಅಭಯ ನೀಡಿದರು.

‘ದೇಶ ಈಗ ಕವಲು ದಾರಿಯಲ್ಲಿದೆ. ಸರ್ಕಾರ ನಮಗಾಗಿ ಕೆಲಸ ಮಾಡುತ್ತಿದೆ ಎಂದು ಎಲ್ಲ ವರ್ಗದ ಜನರು ಅರಿತಿದ್ದಾರೆ. ಅಪ್ರಾಮಾಣಿಕ ಜನರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂಬುದನ್ನೂ ಅರಿತಿದ್ದಾರೆ. ಸುಂದರವಾಗಿದ್ದಾರೆ ಹಾಗೂ ಹೊಸಬರು ಎಂಬ ಕಾರಣಕ್ಕೆ ಅವರ ಜಾಲಕ್ಕೆ ಬೀಳಬೇಡಿ. ಒಂದೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬಾರದಿದ್ದರೆ ದೇಶ 50 ವರ್ಷಗಳ ಹಿಂದಕ್ಕೆ ಹೋಗಲಿದೆ. ನಮಗೆ ಮತ್ತೆ ಹಿಂದಿನ ಶತಮಾನಕ್ಕೆ ಹೋಗುವ ಬಯಕೆ ಇಲ್ಲ. ಹಾಗಾದಲ್ಲಿ ನಮ್ಮನ್ನು ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ’ ಎಂದರು.

‘ಐದು ವರ್ಷಗಳ ಹಿಂದೆ ರಕ್ಷಣಾ ಸಚಿವಾಲಯ ದುಸ್ಥಿತಿಯಲ್ಲಿತ್ತು. 10 ದಿನಗಳು ಯುದ್ಧ ಮಾಡಿದರೆ ಶಸ್ತ್ರಾಸ್ತ್ರ ಖಾಲಿಯಾಗುತ್ತದೆ ಎಂಬ ಸ್ಥಿತಿ ಇತ್ತು. ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಸೇನೆ ಸರ್ವಸನ್ನದ್ಧವಾಗಿದೆ. ಸುಧಾರಿತ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲಾಗಿದೆ. ಬಜೆಟ್‌ನಲ್ಲಿ ರಕ್ಷಣಾ ಸಚಿವಾಲಯ ಹೆಚ್ಚಿನ ಅನುದಾನ ಸಿಗುತ್ತಿದೆ’ ಎಂದರು.

‘ಭಯೋತ್ಪಾದಕರ ಮೇಲೆ ಅಮೆರಿಕದ ಮಾದರಿಯಲ್ಲಿ ದಾಳಿ ಮಾಡಬೇಕು ಎಂದು ಕೆಲವು ಜನರು ಅಭಿ‍ಪ್ರಾಯಪಟ್ಟಿದ್ದಾರೆ. ಅವರ ಸಲಹೆಯನ್ನು ಸ್ವೀಕರಿಸಿದ್ದೇವೆ. ನಮ್ಮ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ. ಈ ಕೃತ್ಯ ಮಾಡಿದವರು ಅದಕ್ಕೆ ಬೆಲೆ ತೆರಲೇಬೇಕು. ಈ ವಿಷಯವನ್ನು ಪ್ರಧಾನಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಜನರು ನಮ್ಮ ಮೇಲೆ ನಂಬಿಕೆ ಇಡಬೇಕು’ ಎಂದು ವಿನಂತಿಸಿದರು.

‘ಯುಪಿಎ ಅಧಿಕಾರದ ಅವಧಿಯಲ್ಲಿ ಎಲ್ಲ ರಾಜ್ಯಗಳಲ್ಲಿ ಉಗ್ರರ ದಾಳಿಗಳು ನಡೆದಿದ್ದವು. ಅದಕ್ಕೆ ಹೋಲಿಸಿದರೆ ನಮ್ಮ ಅವಧಿಯಲ್ಲಿ ಪ್ರಕರಣಗಳು ಕಡಿಮೆ. ಉಗ್ರರನ್ನು ಮಟ್ಟ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದರು.

ರಾಜಾಜಿನಗರ, ಜಯನಗರ ಹಾಗೂ ವಿದ್ಯಾರಣ್ಯಪುರದಲ್ಲಿ ಸಂವಾದಗಳು ನಡೆದವು.

ಪಾಕ್‌ ಪರ ಘೋಷಣೆ!

‘ವಿದ್ಯಾರಣ್ಯಪುರದಲ್ಲಿ ಸಂವಾದ ಮುಕ್ತಾಯಗೊಂಡ ಬೆನ್ನಲ್ಲೇ ಸಭಿಕರೊಬ್ಬರು ‘ಪಾಕಿಸ್ತಾನ ಜಿಂದಾಬಾದ್‌’ ಎಂದು ಘೋಷಣೆ ಕೂಗಿದರು. ಇದರಿಂದ ನಿರ್ಮಲಾ ಸೀತಾರಾಮನ್‌ ಮುಜುಗರಕ್ಕೆ ಒಳಗಾದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಇದನ್ನು ಸಂಘಟಕರು ನಿರಾಕರಿಸಿದರು. ‘ಪಾಕಿಸ್ತಾನ ಮುರ್ದಾಬಾದ್‌’ ಎಂಬುದಾಗಿ ಸಭಿಕರು ಘೋಷಣೆ ಕೂಗಿದರು ಎಂದು ಸಮರ್ಥಿಸಿಕೊಂಡರು. ಜತೆಗೆ, ಹಲವು ಸಭಿಕರು ‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದರು.

ಅಂತಹ ಘಟನೆ ನಡೆದಿಲ್ಲ ಎಂದು ವಿದ್ಯಾರಣ್ಯಪುರ ಪೊಲೀಸರು ಹೇಳಿದರು.

ಕಿಸಾನ್‌ ಸಮ್ಮಾನ್‌ಗೆ ರಾಜ್ಯ ಅಸಹಕಾರ: ಆರೋಪ

‘ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ’ ಎಂದು ನಿರ್ಮಲಾ ಸೀತಾರಾಮನ್‌ ಆರೋಪಿಸಿದರು.

ವಿದ್ಯಾರಣ್ಯಪುರದಲ್ಲಿ ಸಂವಾದದಲ್ಲಿ ಮಾತನಾಡಿದ ಅವರು, ‘ನೇರ ನಗದು ವರ್ಗಾವಣೆ ಮೂಲಕ ಮೊದಲ ಕಂತಿನಲ್ಲಿ ಪ್ರತಿ ರೈತನ ಖಾತೆಗೆ ₹2 ಸಾವಿರ ವರ್ಗಾವಣೆ ಮಾಡಲಾಗುತ್ತಿದೆ. ಬಹುತೇಕ ರಾಜ್ಯಗಳು ಅರ್ಹ ರೈತರ ಪಟ್ಟಿಯನ್ನು ನೀಡಿವೆ. ಆದರೆ, ಕರ್ನಾಟಕ, ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಅರ್ಹ ರೈತರ ಪಟ್ಟಿಯನ್ನು ಸಂಪೂರ್ಣವಾಗಿ ನೀಡಿಲ್ಲ. ರಾಜ್ಯದಲ್ಲಿ 62 ಲಕ್ಷ ರೈತರು ಈ ಯೋಜನೆಗೆ ಅರ್ಹರು. ಸಮ್ಮಿಶ್ರ ಸರ್ಕಾರ 2 ಲಕ್ಷ ರೈತರ ಮಾಹಿತಿಯನ್ನಷ್ಟೇ ನೀಡಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT