ಗ್ಲಾಮರ್ ಲೋಕದ ಚೆಲುವೆಯ ರಾಜಕೀಯ ಪ್ರವೇಶ?

ಗುರುವಾರ , ಏಪ್ರಿಲ್ 25, 2019
29 °C
ತಂದೆ ಬದಲು ಮಗಳಿಗೆ ಟಿಕೆಟ್‌: ಅಚ್ಚರಿಯ ನಡೆ ಪ್ರದರ್ಶಿಸಲಿದೆಯಾ ಬಿಜೆಪಿ?

ಗ್ಲಾಮರ್ ಲೋಕದ ಚೆಲುವೆಯ ರಾಜಕೀಯ ಪ್ರವೇಶ?

Published:
Updated:
Prajavani

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಶಾ ಯೋಗೇಶ್ವರ್‌ ಸ್ಪರ್ಧೆ ಸಾಧ್ಯತೆ ಹೆಚ್ಚಾಗಿದ್ದು, ಹಾಗಾದಲ್ಲಿ ರಾಜಕೀಯಕ್ಕೆ ಗ್ಲಾಮರ್‌ ಲೋಕದ ಮತ್ತೊಂದು ಹೆಸರು ಸೇರ್ಪಡೆಯಾಗಲಿದೆ.

ಕ್ಷೇತ್ರದ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಹೆಸರನ್ನೇ ಬಿಜೆಪಿ ರಾಜ್ಯ ಘಟಕ ಶಿಫಾರಸು ಮಾಡಿದೆ. ಆದರೆ, ಅವರು ರಾಷ್ಟ್ರ ರಾಜಕಾರಣಕ್ಕೆ ಒಲ್ಲೆ ಎನ್ನುತ್ತಿದ್ದಾರೆ. ಬದಲಾಗಿ ಮಗಳಿಗೆ ಟಿಕೆಟ್‌ ಕೊಟ್ಟರೆ ಶ್ರಮಿಸುವುದಾಗಿಯೂ ಹೇಳಿಕೊಂಡಿದ್ದಾರೆ. ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುವ ನಿರ್ಧಾರಕ್ಕೆ ಬಂದಿರುವ ಬಿಜೆಪಿ ಹೈಕಮಾಂಡ್‌ ನಿಶಾ ಹೆಸರನ್ನು ಪರಿಗಣಿಸಿದೆ.

29 ವರ್ಷ ವಯಸ್ಸಿನ ನಿಶಾಗೆ ರಾಜಕೀಯ ಹೊಸತೇನು ಅಲ್ಲ. ಕಳೆದ ಕೆಲವು ಚುನಾವಣೆಗಳಲ್ಲಿ ಚನ್ನಪಟ್ಟಣದಲ್ಲಿ ಅಪ್ಪನ ಪರ ಪ್ರಚಾರ ಮಾಡಿದ್ದಾರೆ. 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿಯೂ ಗೊಂಬೆ ನಾಡಿನಲ್ಲಿ ಮತಯಾಚನೆ ಮಾಡುತ್ತಾ ಮತದಾರರ ಪರಿಚಯ ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭವೇ ಚನ್ನಪಟ್ಟಣದಿಂದ ಅವರ ಹೆಸರು ಚಾಲ್ತಿಯಲ್ಲಿ ಇತ್ತು. ಯೋಗೇಶ್ವರ್‌ ಮಗಳಿಗಾಗಿ ಸ್ವಕ್ಷೇತ್ರ ಬಿಟ್ಟುಕೊಟ್ಟು ಮದ್ದೂರಿನಿಂದ ಸ್ಪರ್ಧಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು.

ಮಾಡೆಲಿಂಗ್‌ ಕ್ಷೇತ್ರದ ಚೆಲುವೆ: ನಿಶಾ ಅಪ್ಪನಂತೆಯೇ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾಡೆಲಿಂಗ್‌ ಮೂಲಕ ಆಗಾಗ್ಗೆ ಫ್ಯಾಷನ್‌ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ. ಅಮೆರಿಕಾದಲ್ಲಿ ಎಂ.ಎಸ್‌. ಪದವಿ ಪಡೆದಿರುವ ಅವರು ಅಪ್ಪನ ಜೊತೆ ಉದ್ಯಮ ಹೊಣೆಗಾರಿಕೆಯನ್ನೂ ಹೊಂದಿದ್ದಾರೆ.

ಹಳೆಯ ಕದನದ ನೆನಪು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಹಿಳೆಯರು ಸ್ಪರ್ಧಿಸಿದ್ದು ಅಪರೂಪ. ಈ ಹಿಂದೆ ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವದಲ್ಲಿ ಇದ್ದ ಸಂದರ್ಭ 2004ರಲ್ಲಿ ಕಾಂಗ್ರೆಸ್‌ನಿಂದ ತೇಜಸ್ವಿನಿ ರಮೇಶ್‌ ಸ್ಪರ್ಧಿಸಿ ಎಚ್.ಡಿ.ದೇವೇಗೌಡರ ವಿರುದ್ಧ ಗೆಲುವು ದಾಖಲಿಸಿದ್ದರು. 2009ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿ ಬದಲಾದ ಸಂದರ್ಭ ಅದೇ ತೇಜಸ್ವಿನಿ ಮತ್ತೊಮ್ಮೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಎದುರು ಪರಾಭವಗೊಂಡರು. ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಪಿ.ಯೋಗೇಶ್ವರ್‌ ಎರಡನೇ ಸ್ಥಾನ ಪಡೆದರು.

2013ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾದ ಅನಿತಾ ಕುಮಾರಸ್ವಾಮಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಎದುರು ಸೋತರು. ಆದಾಗ್ಯೂ, ತೇಜಸ್ವಿನಿ–ದೇವೇಗೌಡರ ನಡುವಿನ ಚುನಾವಣಾ ಕದನವು ಜನಮಾನಸದಲ್ಲಿ ಇನ್ನೂ ಹಾಗೆಯೇ ಉಳಿದಿದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !