ನಿತ್ಯಾನಂದ ಸ್ವಾಮಿಗೆ ‘ಸೈಬರ್’ ಸಂಕಷ್ಟ!

7
ಯೂಟ್ಯೂಬ್‌ನಲ್ಲಿ ಶಿಷ್ಯೆಯ ಅಶ್ಲೀಲ ವಿಡಿಯೊ ಪ್ರಕಟಿಸಿದ ಆರೋಪ

ನಿತ್ಯಾನಂದ ಸ್ವಾಮಿಗೆ ‘ಸೈಬರ್’ ಸಂಕಷ್ಟ!

Published:
Updated:
Deccan Herald

ಬೆಂಗಳೂರು: ‘ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಹಾಗೂ ಅವರ ಅನುಯಾಯಿಗಳು ನನ್ನ ಅಶ್ಲೀಲ ವಿಡಿಯೊವೊಂದನ್ನು ಯೂಟ್ಯೂಬ್‌ಗೆ ಹಾಕಿ ಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಅವರ ಮಾಜಿ ಶಿಷ್ಯೆಯೊಬ್ಬರು ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ಮಂಗಳವಾರ ದೂರು ಕೊಟ್ಟಿದ್ದಾರೆ.‌

‘ನನಗೆ ಸಂಬಂಧಿಸಿದ ವಿಡಿಯೊವೊಂದು ಯೂಟ್ಯೂಬ್‌ನಲ್ಲಿರುವ ಬಗ್ಗೆ ಅ.5ರಂದು ಪರಿಚಿತರೊಬ್ಬರು ತಿಳಿಸಿದರು. ‘ಕರ್ಮಕಾಂಡ’ ಎಂಬ ಯೂಸರ್ ಐಡಿಯಿಂದ ಅಪ್‌ಲೋಡ್ ಆಗಿರುವ ಆ ವಿಡಿಯೊಗೆ, ‘ಪೋರ್ನ್‌ ಸ್ಟಾರ್’ ಎಂಬ ಶೀರ್ಷಿಕೆ ಹಾಕಲಾಗಿದೆ. ಹಳೆ ದ್ವೇಷದ ಕಾರಣಕ್ಕೆ ನಿತ್ಯಾನಂದ ಹಾಗೂ ಅವರ ಅನುಯಾಯಿಗಳೇ ಈ ಕೃತ್ಯ ಎಸಗಿದ್ದಾರೆ’ ಎಂದು ತಮಿಳುನಾಡಿನ ಆ ಶಿಷ್ಯೆ ದೂರಿನಲ್ಲಿ ವಿವರಿಸಿದ್ದಾರೆ.

‘ಆ ವಿಡಿಯೊ ಇಂಟರ್‌ನೆಟ್‌ನ ವಿವಿಧ ತಾಣಗಳಲ್ಲೂ ಹರಿದಾಡುತ್ತಿದೆ. ನೋಡಿದವರು ಕೆಟ್ಟ ಪ್ರತಿಕ್ರಿಯೆಗಳನ್ನು ಹಾಕುತ್ತಿದ್ದಾರೆ. ಪರಿಚಿತರೂ ನೋಡಿರುವುದರಿಂದ ತಲೆ ಎತ್ತಿ ತಿರುಗಾಡದಂತಹ ಸ್ಥಿತಿ ಎದುರಾಗಿದೆ. ಕೆಲವರು ಆ ವಿಡಿಯೊ ಇಟ್ಟುಕೊಂಡೇ ಕಿರುಕುಳ ನೀಡುತ್ತಿದ್ದಾರೆ. ದಯವಿಟ್ಟು ಆದಷ್ಟು ಬೇಗ ಅದನ್ನು ಬ್ಲಾಕ್ ಮಾಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ’ ಎಂದು ಅವರು ಮನವಿ ಮಾಡಿದ್ದಾರೆ.

‘ಮಹಿಳೆಯ ಅಶ್ಲೀಲ ವಿಡಿಯೊ ಪ್ರಕಟಿಸಿದ (ಐಪಿಸಿ 354ಸಿ) ಹಾಗೂ ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ ತಂದ (509) ಆರೋಪಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನಿತ್ಯಾನಂದ ಹಾಗೂ ಅನುಯಾಯಿಗಳಿಗೆ ನೋಟಿಸ್ ನೀಡಲಾಗುವುದು’ ಎಂದು ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿತ್ಯಾನಂದ ವಿರುದ್ಧ ಇದೇ ಶಿಷ್ಯೆ ಅತ್ಯಾಚಾರ ಆರೋಪದಡಿ ಹೂಡಿರುವ ಪ್ರಕರಣವು, ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ರಕ್ಷಣೆ ಕೋರಿರುವ ಶಿಷ್ಯೆ

ಅ.4ರಂದು ಕೋರ್ಟ್‌ಗೆ ಹಾಜರಾಗಿದ್ದ ಶಿಷ್ಯೆ, ‘ನಾನು ನ್ಯಾಯಾಲಯದಲ್ಲಿ ಇರುವಾಗಲೇ ಯಾರೋ ಮೂವರು ನನ್ನ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ನಿತ್ಯಾನಂದ ಸ್ವಾಮಿಯಿಂದ ಪ್ರಾಣಭೀತಿ ಇದೆ. ನನಗೆ ರಕ್ಷಣೆ ಬೇಕು’ ಎಂದು ಮನವಿ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 4

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !