ಹಲಸೂರು: ಬಸ್‌ ಕಾಯುತ್ತ ಬಿಸಿಲಲ್ಲಿ ಬೇಯುವ ಪ್ರಯಾಣಿಕರು

7
ತಂಗುದಾಣಗಳೇ ಇಲ್ಲ * ಬಸ್‌ ಹತ್ತಿಳಿಯಲು ಹತ್ತಾರು ಸಮಸ್ಯೆ

ಹಲಸೂರು: ಬಸ್‌ ಕಾಯುತ್ತ ಬಿಸಿಲಲ್ಲಿ ಬೇಯುವ ಪ್ರಯಾಣಿಕರು

Published:
Updated:
Prajavani

ಬೆಂಗಳೂರು: ಹಲಸೂರಿನಲ್ಲಿ ತಂಗುದಾಣಗಳಿಲ್ಲದೇ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಯ ಬಿಸಿಲಲ್ಲಿ ಬೇಯುತ್ತಾ, ಮಳೆ ಬಂದರೆ ನನೆಯುತ್ತಾ, ಚಳಿಯಲ್ಲಿ ನಡುಗುತ್ತಾ ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಇಲ್ಲಿದೆ.

ಬೆಂಗಳೂರಿನ ಪೂರ್ವ ಪ್ರದೇಶದ ಹೊರವಲಯಗಳಾದ ಕೆ.ಆರ್.ಪುರ, ಹೂಡಿ ಮತ್ತು ವೈಟ್‌ಫೀಲ್ಡ್‌ ಕಡೆಗೆ ತೆರಳುವ ಬಹುತೇಕ ಬಸ್‌ಗಳು ಈ ಊರಿನ ಮೂಲಕವೇ ಹಾದುಹೋಗುತ್ತವೆ. ಈ ಪ್ರದೇಶಗಳಿಂದ ಕೆಂಪೇಗೌಡ ಬಸ್‌ ನಿಲ್ದಾಣ, ಕೆ.ಆರ್‌.ಮಾರುಕಟ್ಟೆ, ಶಿವಾಜಿನಗರಕ್ಕೆ ತಲುಪುವ ಬಸ್‌ಗಳು ಹಲಸೂರಿನ ಮಾರ್ಗವನ್ನೆ ಬಳಸುತ್ತವೆ. ಇಲ್ಲಿಂದ ನಾಲ್ಕು ಪ್ರತ್ಯೇಕ ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದು, ನಾಲ್ಕು ಕಡೆ ತಂಗುದಾಣಗಳನ್ನು ನಿರ್ಮಿಸುವ ಅಗತ್ಯ ಇದೆ.

ಆದರ್ಶ ಚಿತ್ರಮಂದಿರ ಬಸ್‌ ನಿಲುಗಡೆ ಸ್ಥಳ: ಹೊರವಲಯಗಳಿಗೆ ತೆರಳುವವರಿಗಾಗಿ ಈ ಸ್ಥಳ ಗುರುತಿಸಲಾಗಿದೆ. ಇಲ್ಲಿನ ರಾಮಕೃಷ್ಣ ಮಠದ ತಡೆಗೋಡೆಗೆ ಹೊಂದಿಕೊಂಡಂತೆ ತಂಗುದಾಣವೊಂದನ್ನು ನಿರ್ಮಿಸಲಾಗಿತ್ತು. ವಿಭಜಕದಿಂದಾಗಿ ಇಲ್ಲಿನ ರಸ್ತೆಯೂ ಕಿರಿದಾಗಿದೆ. ಜನರನ್ನು ಹತ್ತಿಸಿಕೊಳ್ಳಲು ಬಸ್‌ ನಿಂತರೆ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂಬ ಕಾರಣಕ್ಕೆ ತಂಗುದಾಣವನ್ನು ತೆರವುಗೊಳಿಸಲಾಗಿದೆ.

ಪ್ರಯಾಣಿಕರು ಈಗ ನಿಗದಿತ ಸ್ಥಳದಿಂದ ಸ್ವಲ್ಪ ದೂರವಿರುವ ಚಿತ್ರಮಂದಿರ (ಮಂದಿರವನ್ನು ಈಗ ಕೆಡವಲಾಗಿದೆ) ಜಾಗದ ಮುಂಭಾಗದ ತಿರುವಿನಲ್ಲಿನ ಪಾದಚಾರಿ ಮಾರ್ಗದ ಮೇಲೆಯೇ ಬಸ್‌ಗಳಿಗಾಗಿ ಕಾಯುತ್ತ ನಿಲ್ಲುತ್ತಾರೆ. ಇಲ್ಲಿ ಕುಳಿತುಕೊಳ್ಳುವುದಕ್ಕೂ ಜಾಗವಿಲ್ಲ. ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಬಿಸಿಲು ಜಾಸ್ತಿಯಿದ್ದರೆ, ಕಾಯುತ್ತ ಕಾಲುನೋವು ಬಂದರೆ ಪಕ್ಕದಲ್ಲಿನ ಬೈಕ್‌ಗಳ ಶೋ ರೂಮ್‌ ಮುಂಭಾಗದಲ್ಲಿ ಕುಳಿತುಕೊಳ್ಳುತ್ತಾರೆ. ಇಲ್ಲಿನ ತಿರುವಿನಲ್ಲಿ ಪ್ರತಿ ಬಸ್‌ ಬಂದಾಗಲೂ ಓಡೋಡಿ ಬಂದು ಅದು ತಮ್ಮ ಪ್ರದೇಶಕ್ಕೆ ಹೋಗುತ್ತದೋ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಾದ ಸ್ಥಿತಿ ಇದೆ. 

ಸೇಂಟ್‌ ಆನ್ಸ್‌, ಸೇಂಟ್‌ ಮೀರಾ, ಕೈರಳಿ ನಿಕೇತನ, ಆರ್‌.ಬಿ.ಎ.ಎನ್‌.ಎಂ. ವಿದ್ಯಾಸಂಸ್ಥೆಗಳು ಮತ್ತು ಪಾಲಿಕೆಯ ಶಾಲಾ–ಕಾಲೇಜುಗಳ ಬಹುತೇಕ ವಿದ್ಯಾರ್ಥಿಗಳು ಈ ನಿಲುಗಡೆ ಸ್ಥಳ ಬಳಸುತ್ತಾರೆ. ಇಲ್ಲಿನ ಸೋಮೇಶ್ವರ, ಸುಬ್ರಹ್ಮಣ್ಯ, ಪ್ರಸನ್ನ ವೆಂಕಟೇಶ್ವರ ದೇವಾಲಯಗಳು ಮತ್ತು ರಾಮಕೃಷ್ಣ ಮಠಕ್ಕೆ ಬರುವ ಹೆಚ್ಚಿನ ಭಕ್ತರು ಇಲ್ಲೇ ಬಸ್‌ ಹತ್ತುತ್ತಾರೆ.

‘ನಿತ್ಯ ಸಾವಿರಾರು ಜನರು ಬಸ್‌ಗಳನ್ನು ಹತ್ತಿಳಿಯುವ ಈ ಸ್ಥಳದಲ್ಲಿ ವ್ಯವಸ್ಥಿತ ತಂಗುದಾಣ  ನಿರ್ಮಿಸಲೇಬೇಕು’ ಎಂದು ಒತ್ತಾಯಿಸುತ್ತಾರೆ ಸ್ಥಳೀಯರಾದ ಎಂ.ಪಿಚಾಲ್ಡಿ.

ತಿಪ್ಪಸಂದ್ರದ ಕಡೆಗೆ: ಇಂದಿರಾನಗರ, ತಿಪ್ಪಸಂದ್ರದ ಕಡೆಗೆ ತೆರಳುವ ಬಸ್‌ಗಳಿಗೆ ಚಿನ್ಮಯ ಮಿಷನ್‌ ಆಸ್ಪತ್ರೆ ರಸ್ತೆಯ ಸ್ಮಶಾನದ ಮುಂಭಾಗದಲ್ಲಿ ನಿಲುಗಡೆ ಸ್ಥಳ ಗುರುತಿಸಲಾಗಿದೆ. ಆದರೆ, ಎಲ್ಲ ಬಸ್‌ಗಳು ನಿಲ್ಲುವುದು  ಮಾತ್ರ ಈ ರಸ್ತೆಯ ಆರಂಭದಲ್ಲಿ ಇರುವ ತಿರುವಿನಲ್ಲಿ. ಇಲ್ಲಿಯೂ ಆಸರೆಯ ತಾಣವಿಲ್ಲ. ಬಿಸಿಲಿನ ಬೇಗೆಯಿಂದ ಬಳಲುವ ಪ್ರಯಾಣಿಕರು ಪಕ್ಕದ ಬೇಕರಿಗಳ ಮುಂಭಾಗದಲ್ಲಿ ನಿಲ್ಲುತ್ತಾರೆ. ಪಾದಚಾರಿ ಮಾರ್ಗದ ಮೇಲೂ ಕುಳಿತುಕೊಳ್ಳುತ್ತಾರೆ.

ಕೇಂದ್ರ ನಿಲ್ದಾಣಗಳ ಕಡೆಗೆ: ಕೆಂಪೇಗೌಡ ಬಸ್‌ ನಿಲ್ದಾಣ, ಕೆ.ಆರ್‌.ಮಾರುಕಟ್ಟೆಯ ಕಡೆಗೆ ತೆರಳುವ ಬಸ್‌ಗಳು ಸುಬ್ರಹ್ಮಣ್ಯ ದೇವಾಲಯ ಸಭಾಭವನದ ಗೇಟಿನ ಮುಂದಿರುವ ಮರದಡಿ ನಿಲ್ಲುತ್ತವೆ. ಇಲ್ಲಿನ ಮರವೇ ಪ್ರಯಾಣಿಕರನ್ನು ಬಿಸಿಲಿನ ಝಳದಿಂದ ರಕ್ಷಿಸುತ್ತಿದೆ. ಇಲ್ಲಿಯೂ ಕುಳಿತುಕೊಳ್ಳುವುದಕ್ಕೆ ಸರಿಯಾದ ಜಾಗವಿಲ್ಲ. ಆಸುಪಾಸಿನ ಅಂಗಡಿಗಳ ಬಳಿ ಧೂಮಪಾನಿಗಳು ಬಿಡುವ ಹೊಗೆಯನ್ನು ಒಲ್ಲದ ಮನಸ್ಸಿನಿಂದಲೇ ಪ್ರಯಾಣಿಕರು ಸಹಿಸಿಕೊಳ್ಳುತ್ತಿದ್ದಾರೆ.

ಶಿವಾಜಿನಗರದ ಕಡೆಗೆ: ಈ ಕಡೆಗೆ ಹೋಗುವ ಜನರಿಗಾಗಿ ಎ.ನಂಜಪ್ಪ ವೃತ್ತದಲ್ಲಿ ಸ್ಥಳ ಗುರುತಿಸಲಾಗಿದೆ. ಇಲ್ಲಿ ಬಸ್‌ಗಳು ನಿಲ್ಲುತ್ತವೆ. ಆದರೆ, ಜನ ಇಲ್ಲಿಯೇ ನಿಂತು ಕಾಯಬೇಕು ಎಂಬ ಸೂಚನಾ ಫಲಕ ಇಲ್ಲ. ಮಲಮೂತ್ರದ ವಾಸನೆಯಂತೂ ಮೂಗಿಗೆ ಬಡಿಯುತ್ತಿರುತ್ತದೆ. ಹಾಗಾಗಿ ಜನರು ಸುಬ್ರಹ್ಮಣ್ಯ ಸಭಾಭವನ ಮುಂಭಾಗದಲ್ಲಿ ನಿಂತೇ ಬಸ್‌ಗಾಗಿ ಕಾಯುತ್ತಾರೆ. ಅಲ್ಲಿ ಶಿವಾಜಿನಗರದ ಕಡೆಗೆ ಹೋಗುವ ಬಸ್‌ಗಳನ್ನು ನಿಲ್ಲಿಸದಿದ್ದರೆ ಚಾಲಕ ಮತ್ತು ನಿರ್ವಾಹಕರಿಗೆ ಶಪಿಸುತ್ತಾರೆ.

***

ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಬಹಳ ಅನುಕೂಲ ಆಗುತ್ತದೆ.
- ಚಂದ್ರಪ್ಪ, ಸ್ಥಳೀಯ

ವಿದ್ಯಾರ್ಥಿಗಳು ಬಸ್‌ಪಾಸ್‌ ಹೊಂದಿರುತ್ತಾರೆ. ಅವರು ಟಿಕೆಟ್‌ ಖರೀದಿಸುವುದಿಲ್ಲ. ಕಲೆಕ್ಷನ್‌ ಕಡಿಮೆ ಆಗುತ್ತದೆ ಎಂಬ ಕಾರಣಕ್ಕೆ ಚಾಲಕರು ಇಲ್ಲಿ ಬಸ್‌ ನಿಲ್ಲಿಸುವುದಿಲ್ಲ.
-ಸೌಮ್ಯಾ, ವಿದ್ಯಾರ್ಥಿನಿ
 

ಪಾದಚಾರಿ ಮಾರ್ಗದಲ್ಲಿ ನಿಂತರೆ ಬಿಸಿಲು ಬಡಿಯುತ್ತದೆ. ಅಂಗಡಿಗಳ ಮುಂದೆ ಕುಳಿತರೆ, ಮಾಲೀಕರು ಬಯ್ಯುತ್ತಾರೆ 
- ನವೀನ್‌ ಕುಮಾರ್‌, ವಿದ್ಯಾರ್ಥಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !