ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ಸಂಪುಟ ವಿಸ್ತರಣೆ : ಮುಂದುವರಿದ ಯಡಿಯೂರಪ್ಪ ‘ಏಕಾಧಿಪತ್ಯ‘

Last Updated 9 ಆಗಸ್ಟ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ 15 ದಿನ ಕಳೆದುಹೋಗಿದ್ದು, ಪೂರ್ಣ ಪ್ರಮಾಣದ ಸಚಿವ ಸಂಪುಟ ಇಲ್ಲದೇ ‘ಏಕಾಧಿಪತ್ಯ’ವೇ ನಡೆಯುತ್ತಿದೆ.

ಸರ್ಕಾರ ರಚನೆ ಮಾಡಲು ತೋರಿದ ತರಾತುರಿಯನ್ನು ಸಚಿವ ಸಂಪುಟ ವಿಸ್ತರಣೆಗೆ ತೋರದೇ ಇರುವುದಕ್ಕೆ ವಿರೋಧ ಪಕ್ಷಗಳ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ.

18 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಗ್ರಾಮಗಳು ನಡುಗಡ್ಡೆಗಳಾಗಿವೆ. ಸಾವಿರಾರು ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಹೊತ್ತಿನಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೆ ಪರಿಹಾರ ಕಾಮಗಾರಿಯ ಮೇಲುಸ್ತುವಾರಿ ಮಾಡಬಹುದಿತ್ತು. ಮುಖ್ಯಮಂತ್ರಿ ಒಬ್ಬರೇ ಇರುವುದರಿಂದ ಅವರು ಒಂದೇ ಹೊತ್ತಿನಲ್ಲಿ ಎರಡು ಮೂರು ಜಿಲ್ಲೆಗಳಿಗೆ ಭೇಟಿ ನೀಡಲು ಸಾಧ್ಯವಾಗದೇ ಇರುವುದರಿಂದ ಪರಿಹಾರ ಕಾರ್ಯಕ್ಕೆ ಅಡಚಣೆ ಉಂಟಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.

ಸಂಪುಟ ವಿಸ್ತರಣೆ ಕುರಿತು ಪಕ್ಷದ ಅಧ್ಯಕ್ಷ ಅಮಿತ್ ಶಾ ಜತೆ ಚರ್ಚಿಸಲು ಯಡಿಯೂರಪ್ಪ ಅವರು ನವದೆಹಲಿಗೆ ಹೋಗಿದ್ದರು. ‘ನೆರೆ ಹಾವಳಿಯಿಂದ ಸಂತ್ರಸ್ತರಾಗಿರುವ ಜನರ ಕಷ್ಟ ಬಗೆಹರಿಸಲು ಮೊದಲು ಕಾರ್ಯಪ್ರವೃತ್ತರಾಗಿ. ವಿಸ್ತರಣೆ ಬಗ್ಗೆ ನಂತರ ಮಾತನಾಡೋಣ’ ಎಂದು ಸೂಚಿಸಿದ್ದ ಶಾ, ಮುಖ್ಯಮಂತ್ರಿ ಅವರನ್ನು ಕರ್ನಾಟಕಕ್ಕೆ ಕಳುಹಿಸಿದ್ದರು. ‘ಇದೇ 11ರಂದು ಸಂಪುಟ ವಿಸ್ತರಣೆ ನಡೆಯಲಿದೆ’ ಎಂದು ಯಡಿಯೂರಪ್ಪನವರೇ ಘೋಷಿಸಿದ್ದರು.

‘ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿಲ್ಲ.ಇದೇ 12ರಂದು ಯಡಿಯೂರಪ್ಪ ದೆಹಲಿಗೆ ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅನುಮೋದನೆ ದೊರೆತರೆ ಇದೇ 16ರ ಶುಕ್ರವಾರ ಸಂಪುಟ ವಿಸ್ತರಣೆಯಾಗಬಹುದು. ನೆರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇದ್ದರೆ ಹಾಗೂ ಬೇರೆ ಏನಾದರೂ ಬೆಳವಣಿಗೆಗಳು ನಡೆದರೆ ಮತ್ತೂ ಒಂದಷ್ಟು ದಿನ ಮುಂದಕ್ಕೆ ಹೋಗಬಹುದು’ ಎಂದು ಬಿಜೆಪಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT