ಬುಧವಾರ, ಆಗಸ್ಟ್ 4, 2021
21 °C
ಮಕ್ಕಳನ್ನು ಕಳುಹಿಸುವುದಿಲ್ಲ ಎಂದ ಪೋಷಕರು, ದಿನವಿಡೀ ಶಾಲೆಯಲ್ಲಿರಿ ಎಂದ ಸರ್ಕಾರ– ಶಿಕ್ಷಕರ ಅಳಲು

ಶಾಲೆಗಳಿಗೆ ಕಾವಲು ಕುಳಿತ ಶಿಕ್ಷಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ‘ಸುಮ್ಮನೆ ಕುಳಿತಿರುವ ಬದಲು ಕಂಬವನ್ನಾದರು ಸುತ್ತು’ ಎನ್ನುವಂತಾಗಿದೆ ನಮ್ಮ ಕೆಲಸ. ಗ್ರಾಮಾಂತರ ಪ್ರದೇಶದಲ್ಲಿನ ಶಾಲೆಗಳಿಗೆ ಹೋಗಲು ಬಸ್‌ ಸಂಚಾರ ಇಲ್ಲ. ನಗರದಲ್ಲಿ ಕೊರೊನಾ‌ ಸೋಂಕಿನ ಹಾವಳಿ ಹೆಚ್ಚಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ಆದರೂ ಪ್ರತಿದಿನ ಶಾಲೆಗೆ ಹೋಗಿ ಸಂಜೆವರೆಗೂ ಕುಳಿತು ಬರುವಂತ ಅಗತ್ಯವಾದರೂ ಏನಿದೆ ಅನ್ನುವುದೇ ಅರ್ಥವಾಗುತ್ತಿಲ್ಲ’ ಎಂದು ಸರ್ಕಾರಿ ಶಾಲಾ ಶಿಕ್ಷಕರು ಆಳಲು ತೋಡಿಕೊಂಡಿದ್ದಾರೆ.

‘ಜೂನ್‌ 5 ರಿಂದ ಮುಖ್ಯ ಶಿಕ್ಷಕರು ಮಾತ್ರ ಶಾಲೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಜೂನ್‌ 8 ರಿಂದ ಎಲ್ಲ ಶಿಕ್ಷಕರು ಹಾಜರಾಗುವಂತೆ ಸೂಚಿಸಲಾಯಿತು. ಜೂನ್‌ 10 ರಿಂದ 12ರವರೆಗೆ ಪೋಷಕರ ಸಭೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಪೋಷಕರು ಕೊರೊನಾ ಸೋಂಕಿಗೆ ಔಷಧಿ ದೊರೆಯುವ ತನಕ ಅಥವಾ ಸೋಂಕು ನಿವಾರಣೆಯಾಗುವ ತನಕ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನು ಶಿಕ್ಷಣ ಇಲಾಖೆಯ ಶಾಲಾ ಪ್ರಗತಿ ನಿಗಾವಹಿಸುವ ವ್ಯವಸ್ಥೆಯ ವೆಬ್‌ಸೈಟ್‌ನಲ್ಲು (ಎಸ್‌ಎಟಿಎಸ್‌) ದಾಖಲಿಸಿದ್ದೇವೆ’ ಎನ್ನುತ್ತಾರೆ ನಗರದಲ್ಲಿನ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರೊಬ್ಬರು.

‘2020-21ನೇ ಸಾಲಿನ ಶಾಲಾ ಶೈಕ್ಷಣಿಕ ಯೋಜನೆ, ಶಾಲಾ ಅಭಿವೃದ್ಧಿ ಯೋಜನೆ, ಸಂಸ್ಥಾ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಿ. ಶಾಲಾ ಕೊಠಡಿ, ಆವರಣವನ್ನು ಸ್ವಚ್ಛಗೊಳಿಸಿಟ್ಟಿಕೊಳ್ಳಿ ಎಂದು ಸೂಚಿಸಿದ್ದರು. ಇವೆಲ್ಲ ಕೆಲಸವು ನಾಲ್ಕೇ ದಿನದಲ್ಲಿ ಮುಕ್ತಾಯವಾದವು. ಇನ್ನು ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲೆಗೆ ನೀಡಲಾಗಿದ್ದ ಎಣ್ಣೆ, ಹಾಲಿನ ಪುಡಿ, ಬೆಳೆ ಎಲ್ಲವನ್ನು ಅಕ್ಷರ ದಾಸೋಹ ಇಲಾಖೆಗೆ ಹಿಂದಿರುಗಿಸಲಾಗಿದೆ. ಹೀಗಾಗಿ ಬೆಳಿಗ್ಗೆ 9.50ಕ್ಕೆ ಶಾಲೆಗೆ ಬಂದರೆ ಸಂಜೆ 4.15ರವರೆಗೂ ಇರುವಂತಾಗಿದೆ. ಮತ್ತೆ ಸಂಜೆ ಮನೆ ತಲುಪಲು ಬಸ್‌ ಸೌಲಭ್ಯಗಳು ಇಲ್ಲದಾಗಿವೆ. ಆಟೋಗಳಲ್ಲಿ ಒಬ್ಬರ ಮೇಲೆ ಒಬ್ಬರು ಕುಳಿತು ಪ್ರಯಾಣಿಸುವಂತಾಗಿದೆ. ಎಲ್ಲಿ ಸೋಂಕು ಹರಡುತ್ತದೋ ಎನ್ನುವ ಭಯವಾಗುತ್ತಿದೆ’ ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೋಗುವ ಶಿಕ್ಷಕಿಯರು.

‘ದೊಡ್ಡಬಳ್ಳಾಪುರ ನಗರದಲ್ಲಿ ಸಾಕಷ್ಟು ಪ್ರದೇಶಗಳು ಕಂಟೈನ್‌ಮೆಂಟ್‌ ಪ್ರದೇಶಗಳನ್ನಾಗಿ ಘೋಷಣೆ ಮಾಡಲಾಗಿದೆ. ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ಇರುವ ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿದೆ. ಆದರೆ ಈ ಪ್ರದೇಶಕ್ಕೆ ಅಂಟಿಕೊಂಡೇ ಇರುವ ಶಾಲೆಗಳಿಗೆ ರಜೆ ಇಲ್ಲದಾಗಿದೆ. ಹೀಗಾಗಿ ಆತಂಕದಲ್ಲೇ ದಿನವಿಡೀ ಶಾಲೆಯಿಂದ ಹೊರಬರದೇ ಕೊಠಡಿಗಳಲ್ಲೇ ಕುಳಿತು ಕಾಲ ಕಳೆಯುವಂತಾಗಿದೆ’ ಎಂದು ಆತಂಕ ತೋಡಿಕೊಂಡರು ನಗರ ಪ್ರದೇಶದ ಶಾಲೆಗಳಿಗೆ ಬರುವ ಶಿಕ್ಷಕರು.

* ಉದ್ಯೋಗ ನಿಮಿತ್ತ ಬೇರೆ ಊರುಗಳಿಗೆ ವರ್ಗಾವಣೆಯಾಗಿ ಹೋಗುವ ಪೋಷಕರ ಮಕ್ಕಳಿಗೆ ವರ್ಗಾವಣೆ ಪತ್ರ ನೀಡಲು ಅಥವಾ ಇತರೆ ಮಾಹಿತಿಗಳಿಗಾಗಿ ಶಿಕ್ಷಕರು ಶಾಲೆಯಲ್ಲಿ ಇರಬೇಕು ಎನ್ನುವುದು ಸರ್ಕಾರದ ಆದೇಶ. ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ವಾಸವಾಗಿರುವ ಶಿಕ್ಷಕರು ಶಾಲೆಗೆ ಬರುವಂತಿಲ್ಲ, ಶಾಲೆಯನ್ನು ತೆರೆಯುವಂತಿಲ್ಲ.

–ಎಂ.ಎಚ್‌. ಗಂಗಮಾರೇಗೌಡ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು