ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆಂಟಿಲ್ಲ, ನೀರಿಲ್ಲ: ಎನ್‌ಎಸ್‌ಡಿ ವಿದ್ಯಾರ್ಥಿಗಳು ಮನೆಗೆ

ವಿದ್ಯುತ್‌ ಪರಿವರ್ತಕದಲ್ಲಿ ತಾಂತ್ರಿಕ ದೋಷ
Last Updated 21 ಮೇ 2019, 18:51 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನ ಬಳಿಯಲ್ಲೇ ಇರುವ ಕಲಾ ಗ್ರಾಮಕ್ಕೆ ಶುಕ್ರವಾರದಿಂದ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದ್ದು, ನೀರು ಸರಬರಾಜು ಕೂಡಾ ನಿಂತಿದೆ. ಹೀಗಾಗಿ ಇಲ್ಲಿನ ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ವಿದ್ಯಾರ್ಥಿಗಳನ್ನು ರಜೆ ಮೇಲೆ ಕಳುಹಿಸಿಕೊಡಲಾಗಿದೆ.

ವಿದ್ಯುತ್‌, ನೀರು ಇಲ್ಲದ ಕಾರಣ ಕ್ಯಾಂಪಸ್‌ಗೆ ಎರಡು ದಿನ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗಿತ್ತು. ಇನ್ನಷ್ಟು ದಿನ ಟ್ಯಾಂಕರ್‌ ನೀರು ಪೂರೈಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕಲಾ ಗ್ರಾಮದ ಅಧಿಕಾರಿಗಳು, ಇದೇ 25ರವರೆಗೆ ರಜೆ ಮೇಲೆ ತೆರಳುವಂತೆ ಸಂಸ್ಥೆಯ 20 ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.

‘ವಿದ್ಯುತ್‌ ಇಲ್ಲದ ಕಾರಣ ರಾತ್ರಿ ವೇಳೆ ವಿದ್ಯಾರ್ಥಿಗಳಿಗೆಭದ್ರತೆ ನೀಡುವುದು ಕಷ್ಟವಾಗಿದೆ. ಕಲಾ ಗ್ರಾಮದ ಸುತ್ತ ಕಾಡು ಇದ್ದು, ಹಾವುಗಳು ಹರಿದಾಡುತ್ತವೆ. ಹೀಗಾಗಿ ಸಂಜೆ 6ರ ಬಳಿಕ ಕತ್ತಲೆಯಲ್ಲಿ ಓಡಾಡಲು ಇಲ್ಲಿನ ಕಲಾವಿದರುಭಯಪಡುತ್ತಿದ್ದಾರೆ’ ಎಂದು ಎನ್‌ಎಸ್‌ಡಿ ನಿರ್ದೇಶಕ ಬಸವಲಿಂಗಯ್ಯ ಹೇಳಿದರು.

ಏನು ಕಾರಣ: ಕಲಾ ಗ್ರಾಮದಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕದಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಕಲಾ ಗ್ರಾಮದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ. ‘ಇಲ್ಲಿನ ಸಮಸ್ಯೆ ಏನೆಂದು ಸಂಬಂಧಪಟ್ಟವರಿಗೆ ಗೊತ್ತಿದೆ. ಆದರೂ ಸಮಸ್ಯೆ ಬಗೆಹರಿಸುವ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಇಲ್ಲಿ ಕುವೆಂಪು ಭಾಷಾ ಭಾರತಿ ಮತ್ತು ಶಿಲ್ಪಕಲಾ ಅಕಾಡೆಮಿಗಳೂ ಇವೆ’ ಎಂದು ಕಲಾವಿದರೊಬ್ಬರು ತಿಳಿಸಿದರು.

ಈ ಮಧ್ಯೆ, ಮಂಗಳವಾರ ಕಲಾವಿದರ ಗುಂಪೊಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.‘ತಮ್ಮ ಬೇಡಿಕೆಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ’ ಎಂದು ಅವರು ದೂರಿದ್ದಾರೆ.

ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಇಲಾಖೆಯ ಜಂಟಿ ನಿರ್ದೇಶಕ ಬಲವಂತ ರಾವ್‌ ಪಾಟೀಲ, ‘ನಮಗೆ ಸಮಸ್ಯೆಯ ಅರಿವಿದೆ. ಎಲೆಕ್ಟ್ರಿಷಿಯನ್‌ಗಳ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT