‘ಇಎಸ್‌ಝಡ್‌’ಗಾಗಿ ಅಧಿಸೂಚನೆ

7
ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಪ್ರಕಟ

‘ಇಎಸ್‌ಝಡ್‌’ಗಾಗಿ ಅಧಿಸೂಚನೆ

Published:
Updated:
Deccan Herald

ನವದೆಹಲಿ: ಕರ್ನಾಟಕದ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ ಸುತ್ತಲಿನ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ’ (ಇಎಸ್‌ಝಡ್) ಎಂದು ಘೋಷಿಸುವ ಸಲುವಾಗಿ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊಸದಾಗಿ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ಇಎಸ್‌ಝಡ್‌ಗೆ ಸಂಬಂಧಿಸಿದಂತೆ ‘ಝೋನಲ್‌ ಮಾಸ್ಟರ್‌ ಪ್ಲಾನ್‌’ ಸಿದ್ಧ ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆಯನ್ನೂ ಈ ಕರಡು ಅಧಿಸೂಚನೆ ಒಳಗೊಂಡಿದೆ.

‘ಪರಿಸರ ಸೂಕ್ಷ್ಮ ವಲಯ’ ಎಂದು ಘೋಷಿಸಲಾಗುವ ಈ ಪ್ರದೇಶ ವ್ಯಾ‍ಪ್ತಿಯಲ್ಲಿ  ಹಲವಾರು ಕಂಪನಿಗಳು ಗಣಿಗಾರಿಕೆ ನಡೆಸುತ್ತಿರುವ ಈ ಪ್ರದೇಶ ಈಗಾಗಲೇ ವಿವಾದ ಹುಟ್ಟು ಹಾಕಿದೆ. ಆದರೆ, ಹೊಸದಾಗಿ ಪ್ರಕಟಿಸಲಾಗಿರುವ ಕರಡು ಅಧಿಸೂಚನೆ ಪ್ರಕಾರ ಇಎಸ್‌ಝಡ್ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಹಾಗೂ ಕ್ರಷಿಂಗ್ ಘಟಕಗಳ ಸ್ಥಾಪನೆಗೆ ನಿಷೇಧ ಹೇರಲಾಗುತ್ತದೆ.

ಇಎಸ್‌ಝಡ್ ವ್ಯಾಪ್ತಿ ಕುರಿತಂತೆ ಸಚಿವಾಲಯ 2016ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಗೆ ವಿರೋಧ ವ್ಯಕ್ತ‍ಪಡಿಸಿದ್ದ ಕರ್ನಾಟಕ ಸರ್ಕಾರ, ಕೇಂದ್ರವು ಕೇಳಿದ್ದ ಮಾಹಿತಿಯನ್ನು ಸಲ್ಲಿಸಲಿರಲಿಲ್ಲ. ಹೀಗಾಗಿ ಈ ಅಧಿಸೂಚನೆ ರದ್ದಾಗಿತ್ತು.

ಇಎಸ್‌ಝಡ್ ರಚನೆಗೆ ಸಂಬಂಧಿಸಿದಂತೆ ಕಳೆದ ಮೇನಲ್ಲಿ ರಾಜ್ಯ ಅರಣ್ಯ ಇಲಾಖೆ ಕಳುಹಿಸಿದ್ದ ಪ್ರಸ್ತಾವದ ಆಧಾರದ ಮೇಲೆಯೇ ಹೊಸ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

2016ರಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆ ಪ್ರಕಾರ, ಇಎಸ್‌ಝಡ್ ವ್ಯಾಪ್ತಿಯನ್ನು 268.9 ಚದರ ಕಿ.ಮೀ. ಎಂದು ಗುರುತಿಸಲಾಗಿತ್ತು. ಆದರೆ, ಹೊಸದಾಗಿ ಪ್ರಕಟಿಸಲಾಗಿರುವ ಅಧಿಸೂಚನೆ ಪ್ರಕಾರ ಇಎಸ್‌ಝಡ್ ವ್ಯಾಪ್ತಿಯನ್ನು 168.84 ಚದರ ಕಿ.ಮೀ. ಎಂದು ಗುರುತಿಸಲಾಗಿದ್ದು, ಒಟ್ಟು 77 ಗ್ರಾಮಗಳನ್ನು ಒಳಗೊಂಡಿದೆ. ಅಂದರೆ,  ಇಎಸ್‌ಝಡ್ ವ್ಯಾಪ್ತಿ 100 ಚದರ ಕಿ.ಮೀ.ನಷ್ಟು ಕಡಿಮೆಯಾಗಿದೆ.

**

ಇವುಗಳ ಮೇಲೂ ನಿಷೇಧ...

ಬನ್ನೇರಘಟ್ಟ ಇಎಸ್‌ಝಡ್‌ ವ್ಯಾಪ್ತಿಯಲ್ಲಿ ಇನ್ನೂ ಹಲವಾರು ಚಟುವಟಿಕೆಗಳನ್ನು ಹೊಸ ಅಧಿಸೂಚನೆ ನಿಷೇಧಿಸಲಿದೆ. ಪರಿಸರ ಮಾಲಿನ್ಯ ಮಾಡುವಂತಹ ಕೈಗಾರಿಕೆಗಳು, ವಿದ್ಯುತ್‌ ಉತ್ಪಾದನೆ, ಇಟ್ಟಿಗೆ ಭಟ್ಟಿಗಳು ಹಾಗೂ ಸಾ ಮಿಲ್‌ ಸ್ಥಾಪನೆಗೆ ಅವಕಾಶ ಇರುವುದಿಲ್ಲ.

ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಹೋಟೆಲ್‌, ರೆಸಾರ್ಟ್‌ಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದಿಲ್ಲ. ಆದರೆ, ಪರಿಸರ ಪ್ರವಾಸೋದ್ಯಮ (ಇಕೊ ಟೂರಿಸಂ) ಉತ್ತೇಜಿಸುವಂತಹ ಚಟುವಟಿಕೆಗಳಿಗೆ ಸಂಬಂಧಿಸಿದ ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇರಲಿದೆ.

**

ಹೋರಾಟದ ಹಾದಿ...

ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಇಎಸ್‌ಝಡ್‌ ಗುರುತಿಸಬೇಕು, ಆ ಮೂಲಕ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಿ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಪರಿಸರವಾದಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಅಧಿಕಾರಿಗಳು ಮಾತ್ರ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದೇ ಪ್ರತಿಪಾದಿಸಿದ್ದರು.

2016ರಲ್ಲಿ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿತ್ತು. ಅದರಂತೆ, ಇಎಸ್‌ಝಡ್‌ ಅಗಲ ಕೆಲವಡೆ ಕೇವಲ 100 ಮೀ. ನಷ್ಟಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ 4.5 ಕಿ.ಮೀ. ವಿಸ್ತಾರವಾಗಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !