ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ನಿವೇಶನದಾರರಿಗೆ ‘ಹೈ ಟೆನ್ಷನ್‌’

ನಾಡಪ್ರಭು ಕೆಂಪೇಗೌಡ ಬಡಾವಣೆಯ ನಡುವೆ ಹಾದು ಹೋಗಿದೆ 400 ಕೆ.ವಿ. ವಿದ್ಯುತ್‌ ಮಾರ್ಗ
Last Updated 22 ಅಕ್ಟೋಬರ್ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ (ಎನ್‌ಪಿಕೆ) ಬಡಾವಣೆಯ ನಡುವೆ 400 ಕಿಲೋವಾಟ್‌ ವಿದ್ಯುತ್‌ ಪ್ರಸರಣ ಮಾರ್ಗವು ಹಾದುಹೋಗಿದೆ. ಬಿಡಿಎ ಇದರ ಅಕ್ಕಪಕ್ಕದಲ್ಲೇ ಕೆಲವರಿಗೆ ವಸತಿ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದು ನಿವೇಶನದಾರರ ಆತಂಕಕ್ಕೆ ಕಾರಣವಾಗಿದೆ.

ಬಿಡಿಎ ಸಿದ್ಧಪಡಿಸಿರುವ ನಗರ ಮಹಾಯೋಜನೆ 2031ರ ಕರಡಿನ ಪ್ರಕಾರ 400 ಕೆ.ವಿ ವಿದ್ಯುತ್‌ ಮಾರ್ಗವು ಹಾದು ಹೋಗುವ ಕಡೆ ಕಟ್ಟಡ ನಿರ್ಮಿಸುವುದಕ್ಕೆ ಮುನ್ನ ಇಂಧನ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಇಂತಹ ವಿದ್ಯುತ್‌ ಮಾರ್ಗವಿರುವ ಕಡೆ 50 ಮೀಟರ್‌ ಕಾರಿಡಾರ್‌ನಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಆದರೆ, ಎನ್‌ಪಿಕೆ ಬಡಾವಣೆಯ 5ನೇ ಬ್ಲಾಕ್‌ನಲ್ಲಿ 400 ಕೆ.ವಿ. ವಿದ್ಯುತ್‌ ಮಾರ್ಗ ಹಾದು ಹೋಗುವ ಕಡೆ ಸಾಕಷ್ಟು ಜಾಗ ಬಿಟ್ಟಿಲ್ಲ ಎಂಬುದು ಇಲ್ಲಿನ ನಿವೇಶನದಾರರ ದೂರು.

‘400 ಕೆ.ವಿ. ಮಾರ್ಗದ ಟವರ್‌ ಸಾಮಾನ್ಯವಾಗಿ 16 ಮೀಟರ್‌ ಅಗಲವಿರುತ್ತದೆ. ಇಲ್ಲಿ ಎರಡು ತಂತಿಗಳ ನಡುವೆ 19.2 ಮೀಟರ್‌ ಅಂತರ ಇರುತ್ತದೆ. ಇಲ್ಲಿ ಟವರ್‌ನ ಮಧ್ಯಭಾಗದಿಂದ ಇಕ್ಕೆಲಗಳಲ್ಲೂ ತಲಾ 25 ಮೀಟರ್‌ ಜಾಗವನ್ನು ಬಿಟ್ಟು ಕಟ್ಟಡ ನಿರ್ಮಿಸಬಹುದು. ಆದರೆ, ಕಟ್ಟಡ ನಿರ್ಮಿಸುವುದಕ್ಕೆ ಮುನ್ನ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದಿಂದ (ಕೆಪಿಟಿಸಿಎಲ್‌) ಅನುಮತಿ ಪಡೆಯಬೇಕು. ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ಅನುಮತಿ ನೀಡಲಾಗುತ್ತದೆ’ ಎಂದು ಕೆಪಿಟಿಸಿಎಲ್‌ನ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಡಾವಣೆಯ 5ನೇ ಬ್ಲಾಕ್‌ನಲ್ಲಿ ಈ ವಿದ್ಯುತ್‌ ಮಾರ್ಗದ ಪಾರ್ಶ್ವದಲ್ಲಿ ಒಂದು ಕಡೆ 9 ಮೀಟರ್‌ ಅಗಲದ ರಸ್ತೆಗೆ ಹಾಗೂ ಇನ್ನೊಂದು ಪಾರ್ಶ್ವದಲ್ಲಿ 12 ಮೀಟರ್‌ ಅಗಲದ ರಸ್ತೆಗೆ ಜಾಗ ಕಾಯ್ದಿರಿಸಲಾಗಿದೆ. ಮಾರ್ಗದ ಪಕ್ಕದಲ್ಲೇ ನಾಗರಿಕ ಮೂಲಸೌಕರ್ಯ ನಿವೇಶನಗಳನ್ನು ಹಾಗೂ ವಾಣಿಜ್ಯ ನಿವೇಶನಗಳಿಗೂ ಜಾಗ ಕಾಯ್ದಿರಿಸಲಾಗಿದೆ. ಯಾವ ರೀತಿ ಲೆಕ್ಕಾಚಾರ ಹಾಕಿದರೂ ಇಲ್ಲಿನ ನಿವೇಶನಗಳು ವಿದ್ಯುತ್‌ ಕಾರಿಡಾರ್‌ನ ಮಧ್ಯಭಾಗದಿಂದ 25 ಮೀಟರ್‌ ಅಂತರದಲ್ಲಿ ಇಲ್ಲ.

‘ಬಡಾವಣೆಯ ಎರಡನೇ ಹಂತದ 5ನೇ ಬ್ಲಾಕ್‌ನಲ್ಲಿ ನನ್ನ ಪತ್ನಿಯ ಹೆಸರಿಗೆ 30x40 ಚದರ ಅಡಿ ವಿಸ್ತೀರ್ಣದ ನಿವೇಶನ ಹಂಚಿಕೆ ಆಗಿದೆ. ನಾನು ಈ ಸ್ಥಳವನ್ನು ಪರಿಶೀಲಿಸಿದಾಗ ಅಚ್ಚರಿಯಾಯಿತು. 400 ಕೆ.ವಿ ಹೈಟೆನ್ಷನ್‌ ವಿದ್ಯುತ್‌ ಮಾರ್ಗ ಹಾದು ಹೋಗುವ ಕಡೆಯೇ ಬಿಡಿಎ ನಿವೇಶನಗಳನ್ನು ಹಂಚಿಕೆ ಮಾಡಿದೆ. ಈ ನಿವೇಶನಗಳಲ್ಲಿ ಮನೆ ನಿರ್ಮಿಸುವಾಗ ಖಂಡಿತಾ ಸಮಸ್ಯೆ ಎದುರಾಗಲಿದೆ’ ಎಂದು ಚೇತನ್‌ ಎಂಬುವರು ಆತಂಕ ವ್ಯಕ್ತಪಡಿಸಿದರು.

‘5ನೇ ಬ್ಲಾಕ್‌ನಲ್ಲಿ ಅನೇಕ ನಿವೇಶನಗಳು ವಿದ್ಯುತ್‌ ಮಾರ್ಗದ ಪಕ್ಕದಲ್ಲೇ ಇವೆ. ಕೆಲವು ನಿವೇಶನಗಳಂತೂ ವಿದ್ಯುತ್‌ ಮಾರ್ಗದಿಂದ 15 ಮೀಟರ್‌ಗಿಂತಲೂ ಕಡಿಮೆ ಅಂತರದಲ್ಲಿವೆ. ಬಿಡಿಎ ಅಧಿಕಾರಿಗಳು ಇನ್ನೊಮ್ಮೆ ಸ್ಥಳ ಪರಿಶೀಲನೆ ನಡೆಸಿ ನಿವೇಶನಗಳು ವಿದ್ಯುತ್‌ ಮಾರ್ಗದಿಂದ ಸುರಕ್ಷಿತ ಅಂತರವನ್ನು ಹೊಂದಿರುವುದನ್ನು ಖಚಿತಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ನಾವು ನಗರ ಯೋಜನೆ ಘಟಕದವರು ನೀಡಿರುವ ಮಾಹಿತಿ ಆಧರಿಸಿ ನಿವೇಶನಗಳನ್ನು ನಿರ್ಮಿಸಿದ್ದೇವೆ. ನನ್ನ ತಿಳಿವಳಿಕೆ ಪ್ರಕಾರ ವಿದ್ಯುತ್‌ ಮಾರ್ಗದ ಪಕ್ಕದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಹಾಗಾಗಿ ನಿವೇಶನಗಳು ಹಾಗೂ ವಿದ್ಯುತ್‌ ಮಾರ್ಗದ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಗಿದೆ. ಆದರೂ ಈ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸುತ್ತೇನೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT