ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರ್ವತ್ರಿಕ ಆರೋಗ್ಯ ಕಾರ್ಡ್‌’ ಯೋಜನೆಗೆ ಶೀಘ್ರ ಚಾಲನೆ

1.43 ಕೋಟಿ ಕುಟುಂಬಗಳಿಗೆ ಏಕರೂಪದ ಆರೋಗ್ಯ ಭಾಗ್ಯ
Last Updated 2 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಸಾರ್ವತ್ರಿಕ ಆರೋಗ್ಯ ಕಾರ್ಡ್‌’ (ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌) ಯೋಜನೆಗೆ ಈ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ರಾಜ್ಯದ 1.43 ಕೋಟಿ ಕುಟುಂಬಗಳಿಗೂ ಏಕರೂಪದ ಆರೋಗ್ಯ ಭಾಗ್ಯ ನೀಡುವ ಉದ್ದೇಶದಿಂದ ಈ ಯೋಜನೆ ಸಿದ್ಧಪಡಿಸಲಾಗಿದೆ. ವಾರ್ಷಿಕ ₹ 1,200 ಕೋಟಿಗೂ ಹೆಚ್ಚು ಹಣ ಬೇಕಾಗಬಹುದು ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.‌

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ನಗರಾಭಿವೃದ್ಧಿ, ಪೌರಾಡಳಿತ ಇಲಾಖೆಗಳು ಮತ್ತು ಬೃಹತ್‌ ಬೆಂಗಳೂರು ಮಹಾನಗರ
ಪಾಲಿಕೆ (ಬಿಬಿಎಂಪಿ) ಕೂಡಾ ಯೋಜನೆಗೆ ಕೈ ಜೋಡಿಸಲಿವೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿದ್ದರೂ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಹೀಗಾಗಿ, ಅವರನ್ನೂ ಸೇರಿಸಿಕೊಳ್ಳುವ ಉದ್ದೇಶದಿಂದ ಈ ಇಲಾಖೆಗಳ ಸಹಯೋಗ ಪಡೆಯಲಾಗಿದೆ’ ಎಂದರು.

ಆಧಾರ್‌ ಕಾರ್ಡ್‌ ಹೊಂದಿದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಸರು ನೋಂದಣಿ ಮಾಡಿಕೊಂಡರೆ ಆರೋಗ್ಯ ಇಲಾಖೆಯಿಂದ ಯುನಿವರ್ಸಲ್‌ ಹೆಲ್ತ್‌ ಕಾರ್ಡ್‌ ನೀಡಲಾಗುವುದು. ಈ ಕಾರ್ಡ್ ಬಳಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.  ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಇಲ್ಲದೆ, ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದರೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.

ಈ ಉದ್ದೇಶದಿಂದ ಕರ್ನಾಟಕ ಖಾಸಗಿ ವೈದ್ಯಕೀಯ ನಿಯಂತ್ರಣ (ಕೆಪಿಎಂಇ) ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ನಿಯಮಗಳನ್ನು ರಚಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರ ನಿಗದಿಪಡಿಸಲು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳನ್ನೂ ಒಳಗೊಂಡ ತಜ್ಞರ ಸಮಿತಿ ರಚಿಸಲಾಗುವುದು. ಹೊಸ ಯೋಜನೆಯ ಸಮರ್ಪಕ ಜಾರಿಗೆ ಎರಡು ತಿಂಗಳು ಬೇಕಾಗಬಹುದು ಎಂದೂ ಸಚಿವರು ವಿವರಿಸಿದರು.

ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಸೇರಿ ರಾಜ್ಯದಲ್ಲಿರುವ ಎಲ್ಲ ಆರೋಗ್ಯ ಯೋಜನೆಗಳನ್ನು ಸಾರ್ವತ್ರಿಕ ಆರೋಗ್ಯ ಕಾರ್ಡ್‌ ವ್ಯಾಪ್ತಿಯಡಿ ತರಲಾಗುವುದು. ಸಾಮಾನ್ಯ ಜನರಿಂದ ಮುಖ್ಯಮಂತ್ರಿವರೆಗೆ ಎಲ್ಲರೂ ಉಚಿತವಾಗಿ ಕಾರ್ಡ್‌ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬಹುದು ಎಂದರು.

ಆರೋಗ್ಯ ಸೇವೆ ನೀಡಲು ಹೇಗೆ ಸಾಧ್ಯ ?

1.43 ಕೋಟಿ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲು ₹ 1,200 ಕೋಟಿ ಅಗತ್ಯವಿದೆ ಎಂದಾದಾಗ ದೇಶದ 120 ಕೋಟಿ ಜನರಿಗೆ ₹ 2,000 ಕೋಟಿ ಯಲ್ಲಿ ಆರೋಗ್ಯ ಸೇವೆ ನೀಡಲು ಹೇಗೆ ಸಾಧ್ಯ’ ಎಂದು ರಮೇಶ್‌ ಕುಮಾರ್‌ ಪ್ರಶ್ನಿಸಿದರು.

ಕೇಂದ್ರ ಸರ್ಕಾರ 2018–19ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಆರೋಗ್ಯ ಸೇವೆ ಯೋಜನೆಯನ್ನು ಸಚಿವರು ಟೀಕಿಸಿದರು. ಬಡತನ ರೇಖೆಗಿಂತ ಕೆಳಗಿರುವವರಿಗೆ(ಬಿಪಿಎಲ್) ಕೇಂದ್ರ ಸರ್ಕಾರ ಈ ಹಿಂದೆ ಆರಂಭಿಸಿದ್ದ ₹ 1 ಲಕ್ಷ ಆರೋಗ್ಯ ವಿಮೆ ಸೌಲಭ್ಯದ ರಾಷ್ಟ್ರೀಯ ಆರೋಗ್ಯ ಸುರಕ್ಷತಾ ಯೋಜನೆ (ಎನ್‌ಎಚ್‌ಪಿಎಸ್) ರಾಜ್ಯದಲ್ಲಿ ಯಾರಿಗೂ ಸಿಕ್ಕಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT