ಬಡವರ ಖಾತೆಗೆ ₹72 ಸಾವಿರ, ರೈತರಿಗೆ ಪ್ರತ್ಯೇಕ ಬಜೆಟ್: ಬಸವರಾಜ ರಾಯರೆಡ್ಡಿ

ಮಂಗಳವಾರ, ಏಪ್ರಿಲ್ 23, 2019
27 °C

ಬಡವರ ಖಾತೆಗೆ ₹72 ಸಾವಿರ, ರೈತರಿಗೆ ಪ್ರತ್ಯೇಕ ಬಜೆಟ್: ಬಸವರಾಜ ರಾಯರೆಡ್ಡಿ

Published:
Updated:
Prajavani

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಾರ್ವತ್ರಿಕ ಕನಿಷ್ಠ ಆದಾಯ ಖಾತ್ರಿ ಯೋಜನೆಯಲ್ಲಿ ಬಡ ಕುಟುಂಬದ ಮಹಿಳೆಯ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು ₹6 ಸಾವಿರದಂತೆ ವಾರ್ಷಿಕ ಒಟ್ಟು ₹72 ಸಾವಿರ ಜಮಾ ಮಾಡಲಿದೆ ಎಂದು ಕಾಂಗ್ರೆಸ್ ಮುಖಂಡರ ಬಸವರಾಜ ರಾಯರೆಡ್ಡಿ ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರು. ಈ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಆದರೆ 2019–20ರಲ್ಲಿ ಕೇಂದ್ರದ ಬಜೆಟ್ ಗಾತ್ರವನ್ನು 30 ಲಕ್ಷ ಕೋಟಿಗೆ ಏರಿಸುವ ಗುರಿ ಹೊಂದಿರುವುರಿಂದ ಬಡವರಿಗೆ ‘ನ್ಯಾಯ್‌’ ಯೋಜನೆಯಲ್ಲಿ ಹಣ ಹಾಕಲು ಕಷ್ಟವಾಗದು ಎಂದರು.

ಮೋದಿ ಸರ್ಕಾರದ ಕೆಟ್ಟ ಆರ್ಥಿಕ ನೀತಿ ಹಾಗೂ ನಿರ್ಧಾರಗಳಿಂದಾಗಿ ದೇಶದ ಆರ್ಥಿಕತೆ ಕುಸಿದು ಹೋಗಿದೆ. ಅದನ್ನು ಸರಿಪಡಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಕೇಂದ್ರದಲ್ಲಿ ಖಾಲಿ ಇರುವ 4 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಹಾಗೂ ರಾಜ್ಯಗಳಲ್ಲಿ ಖಾಲಿ ಇರುವ 20 ಲಕ್ಷ ಹುದ್ದೆಗಳನ್ನು ತುಂಬಲು ಉತ್ತೇಜನ ನೀಡಲಾಗುವುದು. ಪ್ರತಿ ವರ್ಷ 34 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ತಿಳಿಸಿದರು.

ಸಂಸತ್ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ಜಾರಿಗೆ ತರಲಾಗುವುದು. ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರಿಗೆ ಕಾಂಗ್ರೆಸ್ ಹೆಚ್ಚಿನ ಆದ್ಯತೆ ನೀಡಿಲ್ಲ. ಆದರೆ ಒಮ್ಮೆ ಮೀಸಲಾತಿ ಜಾರಿಯಾದರೆ ಯಾರ ಹಂಗೂ ಇಲ್ಲದೆ ಮಹಿಳೆಯರು ತಮ್ಮ ಹಕ್ಕು ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆ ಬಗ್ಗೆಯೂ ಚಿಂತಿಸಲಾಗುವುದು. ವೀರಶೈವ– ಲಿಂಗಾಯತ ವಿಷಯದಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ಧಾರ್ಮಿಕ ಮುಖಂಡರೊಂದಿಗೆ ಸೇರಿ ಚರ್ಚಿಸಿ ಬಗೆಹರಿಸಲಾಗುವುದು ಎಂದರು.

ಶಾಸಕ ಪ್ರಸಾದ್ ಅಬ್ಬಯ್ಯ, ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ, ಮುಖಂಡರಾದ ವೀರಣ್ಣ ಮತ್ತೀಕಟ್ಟಿ, ಪ್ರೊ. ಐ.ಜಿ. ಸನದಿ, ಅಲ್ತಾಫ್‌ ಹಳ್ಳೂರ, ಅನಿಲ ಕುಮಾರ ಪಾಟೀಲ, ಪ್ರಕಾಶ್ ಕ್ಯಾರಕಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !