ಓಲಾ ಕ್ಯಾಬ್‌ ಕಂಪನಿಗೆ ₹15 ಲಕ್ಷ ದಂಡ

ಗುರುವಾರ , ಏಪ್ರಿಲ್ 25, 2019
33 °C
ಪರವಾನಗಿ ಅಮಾನತು ಆದೇಶ ಹಿಂಪಡೆದ ಪ್ರಾಧಿಕಾರ

ಓಲಾ ಕ್ಯಾಬ್‌ ಕಂಪನಿಗೆ ₹15 ಲಕ್ಷ ದಂಡ

Published:
Updated:
Prajavani

ಬೆಂಗಳೂರು: ಓಲಾ ಕ್ಯಾಬ್ ಕಂಪನಿ ಪರವಾನಗಿ ಅಮಾನತು ಆದೇಶವನ್ನು ಹಿಂಪಡೆದಿರುವ ರಾಜ್ಯ ಸಾರಿಗೆ ಪ್ರಾಧಿಕಾರ, ನಿಯಮ ಉಲ್ಲಂಘಿಸಿದಕ್ಕಾಗಿ ಕಂಪನಿಗೆ ₹15 ಲಕ್ಷ ದಂಡ ವಿಧಿಸಿದೆ.

ಆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರೂ ಆದ ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ, ‘ಅಮಾನತು ಆದೇಶವನ್ನು ಹಿಂಪಡೆದು, ಕಂಪನಿಗೆ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ಒಂದೇ ದಿನ ಕಾಲಾವಕಾಶ ನೀಡಿದ್ದೇವೆ’ ಎಂದು ಹೇಳಿದರು.

‘ಚಾಲ್ತಿಯಲ್ಲಿರುವ ಕಾನೂನು ಪ್ರಕಾರವೇ ಓಲಾ ಕಂಪನಿಯ ಪರವಾನಗಿಯನ್ನು ಮುಂದಿನ ಆರು ತಿಂಗಳವರೆಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದೆವು. ಈಗ ಆದೇಶ ಹಿಂಪಡೆದಿರುವುದರ ಹಿಂದೆ ಯಾವುದೇ ರಾಜಕೀಯ ಒತ್ತಡವಿಲ್ಲ’ ಎಂದು ತಿಳಿಸಿದರು.

‘ತನ್ನ ತಪ್ಪು ಒಪ್ಪಿಕೊಂಡಿರುವ ಕಂಪನಿ, ಪ್ರಾಧಿಕಾರದ ನಿರ್ಧಾರಕ್ಕೆ ಬದ್ಧ‌ವೆಂದು ಹೇಳಿ ಮುಚ್ಚಳಿಕೆ ನೀಡಿದೆ. ಅದನ್ನು ಪರಿಗಣಿಸಿ ಪ್ರಾಧಿಕಾರದಲ್ಲಿ ಚರ್ಚಿಸಿ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಕಂಪನಿಯ ಆಡಳಿತ ಮಂಡಳಿಗೆ ನೀಡಲಾಗಿದೆ’ ಎಂದು ಇಕ್ಕೇರಿ ಹೇಳಿದರು.

ರ‍್ಯಾಪಿಡೋ ಕಂಪನಿಗೆ ನೋಟಿಸ್‌: ‘ನಗರದಲ್ಲಿ ರ‍್ಯಾಪಿಡೋ ಕಂಪನಿಯು ಅಕ್ರಮವಾಗಿ ಬೈಕ್ ಟ್ಯಾಕ್ಸಿ ಆರಂಭಿಸಿರುವುದು ಗಮನಕ್ಕೆ ಬಂದಿದ್ದು, ಈಗಾಗಲೇ ನೋಟಿಸ್‌ ನೀಡಲಾಗಿದೆ’ ಎಂದು ಇಕ್ಕೇರಿ ತಿಳಿಸಿದರು.

‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿಗಳು–2016’ ಪಾಲಿಸುವುದು ಪ್ರತಿಯೊಂದು ಕಂಪನಿಯ ಕರ್ತವ್ಯ ಹಾಗೂ ಜವಾಬ್ದಾರಿ. ನಿಯಮ ಉಲ್ಲಂಘನೆಯಾದರೆ ಪ್ರಾಧಿಕಾರವು ಕ್ರಮ ಜರುಗಿಸಲಿದೆ’ ಎಂದು ಹೇಳಿದರು.  

ಡಿ.ಡಿ ಮೂಲಕ ದಂಡ ಕಟ್ಟಿದ ಓಲಾ

ಪ್ರಾಧಿಕಾರದ ತೀರ್ಮಾನಕ್ಕೆ ಒಪ್ಪಿದ ಓಲಾ ಕಂಪನಿ, ₹15 ಲಕ್ಷ ದಂಡವನ್ನು ಡಿ.ಡಿ ಮೂಲಕ ಪ್ರಾಧಿಕಾರಕ್ಕೆ ಪಾವತಿ ಮಾಡಿದೆ. ಸದ್ಯ ಎಂದಿನಂತೆ ಓಲಾ ಕಂಪನಿ ಕ್ಯಾಬ್‌ಗಳು ರಾಜ್ಯದಾದ್ಯಂತ ಸೇವೆ ಆರಂಭಿಸಿವೆ.

ಆ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕಂಪನಿಯ ಪ್ರತಿನಿಧಿ, ‘ಕೆಲ ದಿನದಳ ಹಿಂದೆ ಕಾಣಿಸಿಕೊಂಡಿದ್ದ ಸಮಸ್ಯೆ ಬಗೆಹರಿದಿದೆ. ಇದನ್ನು ತಿಳಿಸಲು ಸಂತೋಷವೆನಿಸುತ್ತದೆ. ಚಾಲಕರು ಹಾಗೂ ಪ್ರಯಾಣಿಕರಿಗೆ ಉಂಟಾಗಿರುವ ಅಡಚಣೆಗೆ ವಿಷಾದಿಸುತ್ತೇವೆ’ ಎಂದಿದ್ದಾರೆ.

‘ಸಾರಿಗೆ ವ್ಯವಸ್ಥೆಯ ಸವಾಲುಗಳನ್ನು ಎದುರಿಸಲು ಸರ್ಕಾರದೊಂದಿಗೆ ಕಾರ್ಯನಿರ್ವಹಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದ್ದಾರೆ.  

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !