ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹609 ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲು

Last Updated 13 ಫೆಬ್ರುವರಿ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ₹609.91 ಕೋಟಿ ಮೌಲ್ಯದ 145 ವಕ್ಫ್ ಆಸ್ತಿಗಳು ವೈಯಕ್ತಿಕ ವ್ಯಕ್ತಿಗಳ ಹೆಸರಿನಲ್ಲಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ವಿಧಾನ
ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ.

ಬಿಜೆಪಿ ಶಾಸಕ ಆರ್‌. ಅಶೋಕ್ ಅಧ್ಯಕ್ಷತೆಯ ಸಮಿತಿಯ ಮೊದಲ ವರದಿಯನ್ನು ವಿಧಾನ ಪರಿಷತ್‌ನಲ್ಲಿ ಬುಧ
ವಾರ ಮಂಡಿಸಲಾಯಿತು.

37,292 ವಕ್ಫ್‌ ಆಸ್ತಿಗಳ ‍ಪೈಕಿ 16,819 ಆಸ್ತಿಗಳನ್ನು ನವೀಕರಿಸಲಾಗಿದೆ. ಉಳಿದ 20,473 ಆಸ್ತಿಗಳ ನವೀಕರಣಕ್ಕೆ ತಹಶೀಲ್ದಾರ್, ಪಾಲಿಕೆ ಆಯುಕ್ತರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವಕ್ಫ್‌ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಇಲಾಖೆ ಹಾಗೂ ಪಂಚಾಯತ್‌ರಾಜ್‌ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸಿ ಆಸ್ತಿಗಳ ನಿರ್ವಹಣೆಗೆ ಸೂಚನೆ ನೀಡಿದ್ದು, ಈ ಕಾರ್ಯ ಪ್ರಗತಿಯಲ್ಲಿದೆ. ವಾಸ್ತವಿಕವಾಗಿ 3 ಸಾವಿರ ವಕ್ಫ್‌ ಆಸ್ತಿಗಳ ಕುರಿತು ಸರ್ವೆ ಸಂಖ್ಯೆ, ವಿಸ್ತೀರ್ಣ, ಹದ್ದುಬಸ್ತು, ವಕ್ಫ್‌ ಅಸ್ತಿತ್ವದ ಬಗ್ಗೆ ವಿವರಣೆ ಇಲ್ಲ.

ಈ ಬಗ್ಗೆ ಅಗತ್ಯವಾದ ಮಾಹಿತಿ ಸಂಗ್ರಹಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಬಾಕಿ ಇರುವ 20,473 ಆಸ್ತಿಗಳ ಇಂಡೀಕರಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಇತರ ಇಲಾಖೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದೂ ಸೂಚಿಸಿದೆ.

150 ಪ್ರಕರಣಗಳಲ್ಲಿ ಒತ್ತುವರಿ ತೆರವು ಬಾಕಿ ಇದ್ದು, 60 ಆಸ್ತಿಗಳ ಮೌಲ್ಯ ₹74.80 ಕೋಟಿಗಳು. ಅವುಗಳಲ್ಲಿ 597 ಎಕರೆ 23 ಗುಂಟೆ ಒತ್ತುವರಿ ಮಾಡಲಾಗಿದೆ ಎಂದು ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, 5 ಜಿಲ್ಲೆಗಳಲ್ಲಿ ಒತ್ತುವರಿಯಾಗಿರುವ ₹1,138 ಕೋಟಿ ಮೌಲ್ಯದ 213 ಎಕರೆಗಳ ಒತ್ತುವರಿ ತೆರವಿಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಮಂಗಳೂರು ಬೈಕಂಪಾಡಿಯ ಮೊಹಿಯುದ್ದೀನ್ ಜುಮ್ಮಾ ಮಸೀದಿಯು ₹30 ಲಕ್ಷಗಳ ಹೆಚ್ಚುವರಿ ಸಾಲ ಪಡೆಯಲು ಸುಳ್ಳು ದಾಖಲೆ ನೀಡಿದ್ದನ್ನು ಸಮಿತಿ ಖಂಡಿಸಿದೆ. ಸಂಸ್ಥೆಗೆ ಇಲಾಖೆಯು ಹಣ ಜಮಾ ಮಾಡಲು ತಗಾದೆ ಪತ್ರ ನೀಡಿದ್ದನ್ನು ಗಮನಿಸಿದ ಸಮಿತಿ, ಹೆಚ್ಚುವರಿ ಹಣವನ್ನು ವಾಪಸು ಪಡೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ವಕ್ಫ್‌ ಸಂಸ್ಥೆಗಳ ಉಪ ನಿಯಮಗಳ ಪ್ರಕಾರ, ಸಂಸ್ಥೆಗಳು ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಆದರೆ, ಬೆಂಗಳೂರಿನ ಮುಸಲ್ಮಾನ ಸಮುದಾಯದ ಅನಾಥಾಶ್ರಮವು ₹84 ಲಕ್ಷವನ್ನು ಅನಧಿಕೃತವಾಗಿ ಅಮಾನತ್‌ ಸಹಕಾರಿ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದೆ ಎಂದು ಸಮಿತಿ ಆಕ್ಷೇಪಿಸಿತು. ಹೂಡಿಕೆ ಮಾಡಿದ್ದ ಮೊತ್ತದಲ್ಲಿ ಬಡ್ಡಿ ಸಮೇತ ₹67.40 ಲಕ್ಷಗಳನ್ನು ಠೇವಣಿ ಇಡಲಾಗಿದೆ ಹಾಗೂ ₹17.36 ಲಕ್ಷವನ್ನು ಬ್ಯಾಂಕಿನ ಷೇರು ಬಂಡವಾಳದಲ್ಲಿ ತೊಡಗಿಸಲಾಗಿದೆ ಎಂದು ಇಲಾಖೆ ಸ್ಪಷ್ಟೀಕರಣ ನೀಡಿತು. ಬ್ಯಾಂಕಿನಲ್ಲಿರುವ ಬಾಕಿ ಹಣವನ್ನು ಕೂಡಲೇ ಹಿಂಪಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT