ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಘಾ ಗಡಿಯಿಂದ ಆಚೆಗೆ ಕಳುಹಿಸಿ

Last Updated 26 ಏಪ್ರಿಲ್ 2019, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದು ಮದುವೆಯಾಗಿ ಇಲ್ಲೇ ನೆಲೆಸಿ ಜೈಲು ಶಿಕ್ಷೆಗೆ ಗುರಿಯಾಗಿರುವ ದಂಪತಿಯನ್ನು ಕ್ಷಣವೂ ತಡಮಾಡದೆ ವಾಘಾ ಗಡಿಗೆ ಕರೆದುಕೊಂಡು ಹೋಗಿ ಆಚೆಗೆ ಕಳಿಸಿ’ ಎಂದು ಹೈಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಖಡಕ್ ತಾಕೀತು ಮಾಡಿದೆ.

ಅಕ್ರಮವಾಗಿ ನೆಲೆಸಿದ ಆರೋಪದ ಮೇಲೆ 21 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕರಾಚಿ ಜಿಲ್ಲೆಯ ಚಕ್ರಘೋತ್‌ನ ಕಾಸಿಫ್‌ ಶಂಸುದ್ದೀನ್‌ ಅಲಿಯಾಸ್‌ ಕಾಸಿಫ್‌ (30) ಮತ್ತು ಕೋರಂಗಿಯ ಕಿರಣ್‌ ಗುಲಾಂ ಅಲಿ (30) ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಅವರು, ‘ಈ ದಂಪತಿ ಬಗ್ಗೆ ಪಾಕಿಸ್ತಾನದ ರಾಯಭಾರ ಕಚೇರಿಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇದೊಂದು ಗಂಭೀರ ವಿಚಾರ. ಇವರು ಪಾಕಿಸ್ತಾನದ ಪ್ರಜೆಗಳೇ ಎಂಬುದನ್ನು ಖಚಿತಪಡಿಸಿ ಎಂದು ಕೇಳಿದ್ದೇವೆ. ಅಲ್ಲಿಂದ ಪ್ರತ್ಯುತ್ತರ ಬರಬೇಕು. ಅದಕ್ಕಾಗಿ ಒಂದಷ್ಟು ಸಮಯಾವಕಾಶ ಕೊಡಿ’ ಎಂದು ಮನವಿ ಮಾಡಿದರು.

ಇದಕ್ಕೆ ಬಿಲ್‌ಕುಲ್‌ ಒಪ್ಪದ ನ್ಯಾಯಪೀಠ, ‘ಇವೆಲ್ಲಾ ದೇಶದ ಸುರಕ್ಷತೆಯ ವಿಷಯ. ವಿದೇಶಿ ಕ್ರಿಮಿನಲ್‌ಗಳನ್ನು ನಮ್ಮ ನೆಲದಲ್ಲಿ ಇಲ್ಲಿಟ್ಟುಕೊಂಡು ಅವರಿಗೆ ಅನ್ನ ನೀರು ಹಾಕಿ ಸಾಕುತ್ತಿದ್ದೀರಿ. ಕೂಡಲೇ ಅವರನ್ನು ಇಲ್ಲಿಂದ ಪಾಕಿಸ್ತಾನಕ್ಕೆ ಕಳಿಸಿ. ಇಲ್ಲದೇ ಹೋದರೆ ನಾನು ಹೈಕೋರ್ಟ್‌ನ ಪರಮಾಧಿಕಾರ ಬಳಸಿ ಈಗಲೇ ಈ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸುತ್ತೇನೆ’ ಎಂದು ಎಚ್ಚರಿಸಿದರು.

ವಾದ–ಪ್ರತಿವಾದಿ ಆಲಿಸಿದ ನಂತರ, ‘ಎರಡು ಪ್ರಕರಣಗಳಲ್ಲಿ ನೀಡಲಾಗಿರುವ ಜೈಲು ಶಿಕ್ಷೆಯನ್ನು ಅರ್ಜಿದಾರರುಪ್ರತ್ಯೇಕವಾಗಿ ಅನುಭವಿಸಬೇಕು’ ಎಂಬ ವಿಚಾರಣಾ ನ್ಯಾಯಾಲಯದ ಆದೇಶವನ್ನು ಮಾರ್ಪಾಡು ಮಾಡಿದರು. ‘ಏಕಕಾಲಕ್ಕೆ ಶಿಕ್ಷೆ ಪೂರೈಸಬೇಕು’ ಎಂದು ಆದೇಶಿಸಿ ಅರ್ಜಿದಾರರಿಗೆ ವಿಧಿಸಿದ್ದ ದಂಡವನ್ನು ರದ್ದುಗೊಳಿಸಿದರು. ‘ಮೇ 5ರೊಳಗೆ ದಂಪತಿಯನ್ನು ಇಲ್ಲಿಂದ ಪಾಕಿಸ್ತಾನಕ್ಕೆ ಕಳುಹಿಸಲು ಎಲ್ಲ ಕ್ರಮ ಕೈಗೊಳ್ಳಬೇಕು’ ಎಂದೂ ಆದೇಶಿಸಿದರು.

ಪ್ರಕರಣವೇನು?: ಕಾಸೀಫ್ ಹಾಗೂ ಕಿರಣ್ ಗುಲಾಮ್ ಆಲಿ 2017ರಿಂದ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಲ್ಲಿಯೇ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದರು. ಅಕ್ರಮವಾಗಿ ನೆಲೆಸಿದ್ದ ಇವರನ್ನು ಕುಮಾರಸ್ವಾಮಿ ಲೇ ಔಟ್ ಮತ್ತು ಬನಶಂಕರಿ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು. ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ವಿದೇಶಿಯರ ಕಾಯ್ದೆ ಅಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ್ದ 44ನೇ ಎಸಿಎಂಎಂ ನ್ಯಾಯಾಲಯ, ಎರಡೂ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ 21 ಮತ್ತು 12 ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಅಂತೆಯೇ 60 ಸಾವಿರಕ್ಕೂ ಹೆಚ್ಚು ಮೊತ್ತದ ದಂಡ ವಿಧಿಸಿತ್ತು. 21 ಮತ್ತು 12 ತಿಂಗಳ ಜೈಲು ಶಿಕ್ಷೆಯನ್ನು ಪ್ರ‌ತ್ಯೇಕವಾಗಿ ಅನುಭವಿಸಬೇಕು ಎಂದು ಆದೇಶಿಸಿತ್ತು. ಅರ್ಜಿದಾರ ದಂಪತಿ ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ರಾಜ್ಯ ಪ್ರಾಸಿಕ್ಯೂಷನ್‌ ಪರ ಎಸ್‌.ರಾಚಯ್ಯ ಹಾಜರಿದ್ದರು.

ಈ ವಕೀಲರ ಮೇಲೆ ಕಣ್ಣಿಡಬೇಕಲ್ಲವೇ?

ಅರ್ಜಿದಾರ ದಂಪತಿ ಪರ ವಕಾಲತ್ತು ವಹಿಸಿ ವಾದ ಮಂಡಿಸಿದ ವಕೀಲ ಸಿರಾಜುದ್ದೀನ್‌ ಅಹಮದ್‌ ಅವರನ್ನು ನ್ಯಾಯಮೂರ್ತಿಗಳು, ‘ನಿಮಗೆ ಹೇಗೆ ಈ ಪ್ರಕರಣ ಗೊತ್ತಾಯಿತು’ ಎಂದು ಪ್ರಶ್ನಿಸಿದರು.

ಇದಕ್ಕೆ ಸಿರಾಜುದ್ದೀನ್‌, ‘ನಾನು ಜೈಲಿಗೆ ಭೇಟಿ ನೀಡಿದ್ದಾಗ ಈ ಪ್ರಕರಣ ಗೊತ್ತಾಯಿತು’ ಎಂದರು. ಇದಕ್ಕೆ ನ್ಯಾಯಮೂರ್ತಿಗಳು, ‘ಹಾಗಾದರೆ ಪ್ರಕರಣ ನಡೆಸಲು ನಿಮಗೆ ಯಾರು ಫೀಸು ಕೊಡುತ್ತಾರೆ’ ಎಂದರು.

‘ಇಲ್ಲಾ ನಾನು ಪುಕ್ಕಟೆಯಾಗಿ ಪ್ರಕರಣ ನಡೆಸುತ್ತೇನೆ’ ಎಂದು ಸಿರಾಜುದ್ದೀನ್‌ ಉತ್ತರಿಸಿದರು.

ಇದಕ್ಕೆ ನ್ಯಾಯಮೂರ್ತಿಗಳು ನಾವದಗಿ ಅವರನ್ನು ಉದ್ದೇಶಿಸಿ, ‘ಇವರೆಲ್ಲಾ ಫೀಸಿಲ್ಲದೇ ಇಂತಹ ಪ್ರಕರಣಗಳ ವಕಾಲತ್ತು ವಹಿಸಿ ವಾದ ಮಾಡುತ್ತಾರೆ ಎಂದರೆ, ಇಂತಹ ವಕೀಲರ ಬಗ್ಗೆ ಒಂದು ಕಣ್ಣಿಡಬೇಕಲ್ಲವೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT