ಶನಿವಾರ, ಡಿಸೆಂಬರ್ 7, 2019
22 °C
ಪೀಣ್ಯ ಪೊಲೀಸರಿಂದ ಮೂವರ ಬಂಧನ

ಗುಜರಿ ಸೇರುತ್ತಿದೆ ಆಸ್ಪತ್ರೆ ತ್ಯಾಜ್ಯ; ಜಾಲ ಪತ್ತೆ ಹಚ್ಚಿದ ಬಿಬಿಎಂಪಿ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಅಪಾಯಕಾರಿ ಜೈವಿಕ ತ್ಯಾಜ್ಯವನ್ನು ನಿಯಮಬಾಹಿರವಾಗಿ ಗುಜರಿ ಅಂಗಡಿಗಳಿಗೆ ಮಾರಾಟ ಮಾಡುವ ಜಾಲ ರಾಜಧಾನಿಯಲ್ಲಿ ಸಕ್ರಿಯವಾಗಿದೆ. ಜನರ ಪ್ರಾಣಕ್ಕೇ ಕುತ್ತು ತರುವಂತಹ ಕೃತ್ಯದಲ್ಲಿ ತೊಡಗಿದ್ದ ಈ ಜಾಲವನ್ನು ಬಿಬಿಎಂಪಿ ಅಧಿಕಾರಿಗಳು ಹಾಗೂ ಪೀಣ್ಯ ಪೊಲೀಸರು ಬೇಧಿಸಿದ್ದಾರೆ. 

ಆಸ್ಪತ್ರೆಗಳಲ್ಲಿ ಬಳಸಲಾದ ಸಿರಿಂಜ್, ಸೂಜಿ ಮತ್ತಿತರ ಜೈವಿಕ ತ್ಯಾಜ್ಯವನ್ನು ‘ಆಸ್ಪತ್ರೆಗಳ ಜೈವಿಕ ತಾಜ್ಯ ನಿರ್ವಹಣೆ ನಿಯಮ–2016’ರ ಪ್ರಕಾರ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಇಂತಹ ತ್ಯಾಜ್ಯವನ್ನು ಆಸ್ಪತ್ರೆಯವರು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆದ ಸಂಸ್ಥೆಗಳಿಗೆ ಪೂರೈಸಬೇಕು. ಆ ಸಂಸ್ಥೆಗಳೇ ತ್ಯಾಜ್ಯವನ್ನು ಸಂಸ್ಕರಿಸುವ ಹಾಗೂ ನಾಶಪಡಿಸುವ ಕೆಲಸ ಮಾಡುತ್ತವೆ.

ಆದರೆ ಈಗ, ಅಂಥ ಸಂಸ್ಥೆಯ ಕೆಲಸಗಾರರೇ ಹಣದ ಆಸೆಗಾಗಿ ತ್ಯಾಜ್ಯವನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಈ  ಕೃತ್ಯವನ್ನು ಪತ್ತೆ ಹಚ್ಚಿರುವ ಬಿಬಿಎಂಪಿಯ ಚೊಕ್ಕಸಂದ್ರ ವಾರ್ಡ್‌ನ ಕಿರಿಯ ಆರೋಗ್ಯ ನಿರೀಕ್ಷಕ ಎಚ್‌.ರಮೇಶ್, ಪೀಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು, ಗುಜರಿ ಅಂಗಡಿ ಮಾಲೀಕ ಚಂದ್ರಪ್ಪ ಹಾಗೂ ‘ರಾಮ್ಕಿ’ ಸಂಸ್ಥೆ ವಾಹನದ ಇಬ್ಬರು ಚಾಲಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಜಾಲದಲ್ಲಿ ಮತ್ತಷ್ಟು ಜನರು ಶಾಮೀಲಾಗಿರುವ ಅನುಮಾನವಿದ್ದು, ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ದಾಳಿಯಿಂದ ಬಯಲಾಯ್ತು ಕೃತ್ಯ: ಚೊಕ್ಕಸಂದ್ರದ ರುಕ್ಮಿಣಿನಗರದ ವಿದ್ಯಾನಗರ ರಸ್ತೆಯಲ್ಲಿರುವ ಸ್ಮಶಾನ ಬಳಿಯ ಗುಜರಿ ಅಂಗಡಿಯಲ್ಲಿ ಆಸ್ಪತ್ರೆ ತ್ಯಾಜ್ಯ ಸಂಗ್ರಹಿಸಿಟ್ಟಿದ್ದ ಬಗ್ಗೆ ರಮೇಶ್ ಅವರಿಗೆ ಮಾಹಿತಿ ಬಂದಿತ್ತು. ಅವರು, ಅಂಗಡಿ ಮೇಲೆ ದಾಳಿ ನಡೆಸಿದಾಗಲೇ ಜಾಲದ ಕೃತ್ಯ ಬಯಲಾಗಿದೆ.

‘ಆಸ್ಪತ್ರೆಯ ತ್ಯಾಜ್ಯವನ್ನು ಮೂಟೆಯಲ್ಲಿ ತುಂಬಿಸಿಡಲಾಗಿತ್ತು. ದಾಳಿ ವೇಳೆ, ಮಾಲೀಕ ಅಂಗಡಿಯಲ್ಲಿರಲಿಲ್ಲ. ಎರಡು ಟಾಟಾ ಎ.ಸಿ ವಾಹನ ಹಾಗೂ ಇಬ್ಬರು ಚಾಲಕರು ಮಾತ್ರ ಅಲ್ಲಿದ್ದರು. ಅವರಿಬ್ಬರು ತ್ಯಾಜ್ಯವನ್ನು ಬೇರೆಡೆ ಸಾಗಿಸಲು ಕಾಯುತ್ತಿದ್ದುದ್ದು ಗೊತ್ತಾಯಿತು. ಆ ಚಾಲಕರು ನೀಡಿದ ಮಾಹಿತಿಯಂತೆ, ಆಸ್ಪತ್ರೆಯಿಂದ ತ್ಯಾಜ್ಯವನ್ನು ಗುಜರಿ ಅಂಗಡಿಗೆ ತಂದುಕೊಡುತ್ತಿದ್ದ ಇನ್ನಿಬ್ಬರು ಚಾಲಕರನ್ನು ಪತ್ತೆ ಹಚ್ಚಿದೆವು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆವು’ ಎಂದು ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆ ತ್ಯಾಜ್ಯದಿಂದ ಮಾರಣಾಂತಿಕ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ಇರುತ್ತದೆ. ಹೀಗಾಗಿ, ತ್ಯಾಜ್ಯ ನಿರ್ವಹಣೆಗೆಂದೇ ಪ್ರತ್ಯೇಕ ನಿಯಮ ರೂಪಿಸಲಾಗಿದೆ. ಅದನ್ನು ಉಲ್ಲಂಘಿಸಿ ಚಾಲಕರು, ತ್ಯಾಜ್ಯವನ್ನು ಗುಜರಿಗೆ ಮಾರುತ್ತಿದ್ದರು. ಸದ್ಯ ಗುಜರಿ ಅಂಗಡಿ ಮಾಲೀಕ ಚಂದ್ರಪ್ಪನಿಗೆ ಬಿಬಿಎಂಪಿಯಿಂದ ₹50 ಸಾವಿರ ದಂಡ ವಿಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಮ್ಕಿ’ ಸಂಸ್ಥೆಗೂ ವಂಚನೆ: ‘ತ್ಯಾಜ್ಯ ವಿಲೇವಾರಿ ಜವಾಬ್ದಾರಿ ವಹಿಸಿಕೊಂಡಿರುವ ‘ರಾಮ್ಕಿ’ ಸಂಸ್ಥೆ, ಆಸ್ಪತ್ರೆಯಿಂದ ತ್ಯಾಜ್ಯ ಸಂಗ್ರಹಿಸಲು ಚಾಲಕರನ್ನು ನೇಮಿಸಿಕೊಂಡಿದೆ. ಈಗ ಸೆರೆ ಸಿಕ್ಕಿರುವ ಚಾಲಕರು, ಆ ಸಂಸ್ಥೆಗೂ ವಂಚಿಸಿ ತ್ಯಾಜ್ಯವನ್ನು ಗುಜರಿಗೆ ಮಾರುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೀಣ್ಯ ಪೊಲೀಸರು ಹೇಳಿದರು.

‘ಬಂಧಿತ ಚಾಲಕರು, ಆಸ್ಪತ್ರೆಯಿಂದ ಸಂಸ್ಥೆಯ ಘಟಕಕ್ಕೆ ತ್ಯಾಜ್ಯ ಸಾಗಿಸುತ್ತಿದ್ದರು. ಅದರ ನಡುವೆಯೇ ತ್ಯಾಜ್ಯದ ಮೂಟೆಗಳನ್ನು ಕದ್ದು ಗುಜರಿ ಅಂಗಡಿ ಮಾಲೀಕ ಚಂದ್ರಪ್ಪನಿಗೆ ಮಾರುತ್ತಿದ್ದರು. ಅದಕ್ಕೆ ಪ್ರತಿಯಾಗಿ ₹2 ಸಾವಿರದಿಂದ ₹5 ಸಾವಿರ ಪಡೆಯುತ್ತಿದ್ದರು. ಆ ಬಗ್ಗೆ ಮೂವರಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ವಿವರಿಸಿದರು.

‘ಚಾಲಕರ ಕೃತ್ಯಕ್ಕೂ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ. ತನಿಖೆಗೆ ನಾವೂ ಸಹಕಾರ ನೀಡುತ್ತೇವೆ ಎಂದು ರಾಮ್ಕಿ ಸಂಸ್ಥೆಯವರು ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

**
ನಿಯಮ ಏನು ಹೇಳುತ್ತದೆ?

* ಹಳದಿ, ಕೆಂಪು, ಬಿಳಿ ಹಾಗೂ ನೀಲಿ ಬಣ್ಣದ ಡಬ್ಬಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ವಿಂಗಡಣೆ ಮಾಡುವುದು ಕಡ್ಡಾಯ.

* ಡಬ್ಬದಲ್ಲಿ ಸಂಗ್ರಹಿಸಲಾದ ತ್ಯಾಜ್ಯವನ್ನು 48 ಗಂಟೆಯೊಳಗೆ ವಿಲೇವಾರಿ ಮಾಡಬೇಕು.

* ಪರವಾನಗಿ ಪಡೆದ ಸಂಸ್ಥೆಗೆ ತ್ಯಾಜ್ಯವನ್ನು ನೀಡಬೇಕು. ಹಣ ಉಳಿಸುವುದಕ್ಕಾಗಿ ಸಾಮಾನ್ಯ ಕಸದೊಂದಿಗೆ ತ್ಯಾಜ್ಯವನ್ನು ಸೇರಿಸುವುದು ಅಪರಾಧ

* ನಿಯಮ ಉಲ್ಲಂಘಿಸಿದರೆ, ಆಸ್ಪತ್ರೆಯ ಮಾನ್ಯತೆ ರದ್ದುಪಡಿಸಲಾಗುತ್ತದೆ

**

ಯಾವ ಬಣ್ಣದಲ್ಲಿ ಯಾವ ತ್ಯಾಜ್ಯ

ಹಳದಿ: ರೋಗಿಯ ದೇಹದ ಭಾಗ, ರಕ್ತದಿಂದ ಒದ್ದೆಯಾದ ಹತ್ತಿ, ಬಟ್ಟೆ, ಅವಧಿ ಮೀರಿದ ಔಷಧ, ಎಕ್ಸ್‌-ರೇ ತೆಗೆಯಲು ಬಳಸುವ ರಾಸಾಯನಿಕ, ಗಾಯ ತೊಳೆಯಲು ಬಳಸುವ ರಾಸಾಯನಿಕ, ರಕ್ತದ ಚೀಲ, ಬಳಸಿದ ಟಿಶ್ಯೂ ಪೇಪರ್‌, ಬ್ಯಾಂಡೇಜ್‌.

ಕೆಂಪು: ಬಾಟಲಿ, ಟ್ಯೂಬ್‌, ಮೂತ್ರ ಸಂಗ್ರಹಿಸುವ ಚೀಲ, ಸಿರಿಂಜ್‌, ಡ್ರಿಪ್‌ ಉಪಕರಣ.

ಬಿಳಿ: ಸೂಜಿ, ಸಿರಿಂಜ್‌, ಬ್ಲೇಡ್‌, ಕತ್ತರಿಯಂತಹ ಹರಿತವಾದ ವಸ್ತುಗಳು

ನೀಲಿ: ಗಾಜು, ಔಷಧ ಬಾಟಲಿಗಳು

ಮಾಲಿನ್ಯ ನಿಯಂತ್ರಣ ಮಂಡಳಿ ಕೆಲಸ

‘ಆಸ್ಪತ್ರೆ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯದ್ದು. ಅವರೇ ಮೊದಲಿಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ನಮ್ಮ ಆರೋಗ್ಯ ಅಧಿಕಾರಿಗೆ ಮೊದಲು ವಿಷಯ ಗೊತ್ತಾಗಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಮಿತಿಯನ್ನು ಲೆಕ್ಕಿಸದೇ ನಾವೇ ಮೊದಲು ದೂರು ಕೊಟ್ಟೆವು’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ಲಾಸ್ಟಿಕ್ ಜೊತೆ ಸೇರ್ಪಡೆ

‘ಗುಜರಿ ಅಂಗಡಿ ಮಾಲೀಕ ಚಂದ್ರಪ್ಪ, ರಾಮ್ಕಿ ಸಂಸ್ಥೆಯ ಚಾಲಕರ ಪರಿಚಯ ಮಾಡಿಕೊಂಡು ಹಣದ ಆಮಿಷವೊಡ್ಡಿ ತ್ಯಾಜ್ಯವನ್ನು ಪಡೆದುಕೊಳ್ಳುತ್ತಿದ್ದ. ನೀರಿನ ಖಾಲಿ ಬಾಟಲಿ ಸೇರಿದಂತೆ ಇತರೆ ಪ್ಲಾಸ್ಟಿಕ್‌ ವಸ್ತುಗಳ ಜೊತೆಗೇ ಆಸ್ಪತ್ರೆ ತ್ಯಾಜ್ಯ ಸೇರಿಸಿ, ಕೆ.ಜಿ ಲೆಕ್ಕದಲ್ಲಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆ ಅಪಾಯಕಾರಿ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಇದೆ. ಚಂದ್ರಪ್ಪನಿಂದ ತ್ಯಾಜ್ಯ ಖರೀದಿಸುತ್ತಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು