ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧ್ಯಾಪಕರಿಗೂ ಸರ್ಕಾರಿ ನೌಕರರಷ್ಟೇ ಪಿಂಚಣಿ

*2006ಕ್ಕಿಂತ ಮೊದಲು ನಿವೃತ್ತರಿಗೆ ಅನ್ವಯ*ವಿಧಾನಸಭೆಯಲ್ಲಿ ಮಸೂದೆಗೆ ಅಂಗೀಕಾರ
Last Updated 17 ಮಾರ್ಚ್ 2020, 21:23 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು 1–1–2006ಕ್ಕಿಂತ ಮೊದಲು ನಿವೃತ್ತರಾಗಿದ್ದರೆ, ಅವರಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ವೇತನದ ಪಿಂಚಣಿ ಸೌಲಭ್ಯ ಇರುವುದಿಲ್ಲ. ಇದಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ ಮಸೂದೆ’ಗೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ನೀಡಲಾಯಿತು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ಯುಜಿಸಿ ನಿಯಮಗಳಿಗೆ ಕಾನೂನಿನ ಬಲ ಇದ್ದರೂ, ರಾಜ್ಯಗಳ ಯೋಜನೆಗಳಿಗೆ ಹೊರತಾದುದು ಅಲ್ಲ ಎಂದು ಜಗದೀಶ್‌ ಪ್ರಸಾದ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಕೇಂದ್ರ ಸರ್ಕಾರ ಸಹ 2010ರಲ್ಲಿ ಪತ್ರ ಬರೆದು, ಪರಿಷ್ಕೃತ ಪಿಂಚಣಿ ಸೌಲಭ್ಯ ನೀಡುವುದು ರಾಜ್ಯ ಸರ್ಕಾರಕ್ಕೆ ಕಡ್ಡಾಯವಲ್ಲ ಎಂದು ಹೇಳಿದೆ’ ಎಂದರು.

‘ಒಂದು ವೇಳೆ ಈ ಸೌಲಭ್ಯವನ್ನು 2006ಕ್ಕಿಂತ ಮೊದಲು ನಿವೃತ್ತರಾದವರಿಗೂ ವಿಸ್ತರಿಸಿದರೆ ರಾಜ್ಯದ ಬೊಕ್ಕಸಕ್ಕೆ ₹800 ಕೋಟಿಯಿಂದ ₹1 ಸಾವಿರ ಕೋಟಿ ಹಣಕಾಸಿನ ಹೊರೆ ಬೀಳುತ್ತದೆ’ ಎಂದು ತಿಳಿಸಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘2006ಕ್ಕಿಂತ ಮೊದಲು ನಿವೃತ್ತರಾದವರಿಗೆ ಯುಜಿಸಿ ಪ್ರಕಾರ ಪಿಂಚಣಿ ನೀಡಲು ಹಿಂದಿನ ಸರ್ಕಾರ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಕೆಲವರು ಕೋರ್ಟ್‌ ಮೊರೆ ಹೋಗಿದ್ದರು. ಬಳಿಕ ಸುಗ್ರೀವಾಜ್ಞೆ ತರಲಾಗಿತ್ತು. ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ಈ ಮಸೂದೆ ತರಲಾಗಿದೆ. 2006ರ ಮೊದಲಿನ ಎಲ್ಲ ಸರ್ಕಾರಿ ನೌಕರರಿಗೆ ಒಂದೇ ರೀತಿ ಪಿಂಚಣಿ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT