ಶುಕ್ರವಾರ, ನವೆಂಬರ್ 15, 2019
27 °C
ಹಂದಿ ಸಾಕಾಣಿಕೆದಾರರ ಪರವಾನಗಿ ವಿಚಾರ

‘ಎರಡು ದಿನದಲ್ಲಿ ನೀತಿ ರೂಪಿಸಿ’

Published:
Updated:

ಬೆಂಗಳೂರು: ಹಸಿ ತ್ಯಾಜ್ಯ ಸಂಗ್ರಹಿಸುವ ಹಂದಿ ಸಾಕಾಣಿಕೆದಾರರಿಗೆ ಪರವಾನಗಿ ನೀಡಲು ಸ್ಪಷ್ಟ ನೀತಿ ರೂಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಸಮಿತಿ ಬಿಬಿಎಂಪಿಗೆ ಸಲಹೆ ನೀಡಿದೆ. 

ಈ ಕುರಿತು ಶುಕ್ರವಾರ ಬಿಬಿಎಂಪಿ ಅಧಿಕಾರಿಗಳು ಹಾಗೂ ಹಂದಿ ಸಾಕಾಣಿಕೆದಾರರ ಸಭೆ ನಡೆಸಿದ ಎನ್‌ಜಿಟಿಯ ರಾಜ್ಯಮಟ್ಟದ ಕಸ ನಿರ್ವಹಣೆ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ, ‘ಹಸಿ ತ್ಯಾಜ್ಯ ನಿರ್ವಹಣೆ ಬಿಬಿಎಂಪಿಗೆ ಸವಾಲಾಗಿದ್ದರೆ, ಹಂದಿಗಳಿಗೆ ಆಹಾರ ಕೊರತೆ ಉಂಟಾಗಿರುವುದು ಸಾಕಾಣಿಕೆದಾರರಿಗೂ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಎರಡು–ಮೂರು ದಿನದಲ್ಲಿ ಸೂಕ್ತ ನೀತಿ ರೂಪಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಹಂದಿ ಸಾಕಾಣಿಕೆದಾರರು ಹೋಟೆಲ್‌ಗಳಿಂದ ಅನಧಿಕೃತವಾಗಿ ಹಸಿ ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ಆಹಾರ ತ್ಯಾಜ್ಯದೊಂದಿಗೆ ಪ್ಲಾಸ್ಟಿಕ್‌ ಕೂಡ ಸೇರಿಕೊಂಡಿರುತ್ತದೆ. ಇದನ್ನು ಹೇಗೆ ವಿಲೇವಾರಿ ಮಾಡುತ್ತಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಪರವಾನಗಿ ಪಡೆದ ಹಂದಿ ಸಾಕಾಣಿಕೆದಾರರು ನಿರ್ದಿಷ್ಟ 4ರಿಂದ 5 ಹೋಟೆಲ್‌ಗಳಿಂದ ಮಾತ್ರ ಆಹಾರ ತ್ಯಾಜ್ಯ ಸಂಗ್ರಹಿಸಬೇಕು ಎಂಬ ಅಂಶಗಳನ್ನು ನೀತಿ ರೂಪಿಸುವ ವೇಳೆ ಪರಿಗಣಿಸಲಾಗುವುದು’ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಹೇಳಿದರು. 

‘ಹಸಿ ತ್ಯಾಜ್ಯ ಸಂಗ್ರಹದ ನಿರ್ವಹಣೆ ಉದ್ದೇಶದಿಂದ ಒಂದು ಆ್ಯಪ್‌ ಅಭಿವೃದ್ಧಿ ಪಡಿಸಲಾಗುವುದು. ಸಾಕಾಣಿಕೆದಾರರನ್ನು ಗ್ರೂಪ್‌ಗೆ ಸೇರಿಸಲಾಗುವುದು. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದಿರುವ ಸಾಕಾಣಿಕೆದಾರರನ್ನು ಈ ಗ್ರೂಪ್‌ನಲ್ಲಿ ಸೇರಿಸಲಾಗುವುದು. ಅಗತ್ಯ ಮಾಹಿತಿ ಅಪ್‌ಲೋಡ್ ಮಾಡಿದರೆ ಆ್ಯಪ್‌ ಮೂಲಕವೇ ಪರವಾನಗಿ ನೀಡುವ ವ್ಯವಸ್ಥೆ ರೂಪಿಸುವ ಚಿಂತನೆ ಇದೆ’ ಎಂದು ಅವರು ತಿಳಿಸಿದರು. 

‘ಬಿಬಿಎಂಪಿ ಕೆಲವು ಗುತ್ತಿಗೆದಾರರು ಆಹಾರ ತ್ಯಾಜ್ಯ ಸಂಗ್ರಹಿಸುವ ನಮ್ಮಿಂದಲೂ ದುಡ್ಡು ತೆಗೆದುಕೊಳ್ಳುತ್ತಾರೆ ಮತ್ತು ಹೋಟೆಲ್‌ಗಳಿಂದಲೂ ದುಡ್ಡು ತೆಗೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಪರಿಹಾರವಾಗಬೇಕು’ ಎಂದು ಹಂದಿ ಸಾಕಾಣಿಕೆದಾರರ ಸಂಘದ ಮುಖಂಡ ಜಿ.ಎನ್. ನಾಗೇಶ್‌ ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)