ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರಯಾಣಿಕರ ರಕ್ಷಣೆಗೆ ‘ಪಿಂಕ್ ಸಾರಥಿ’

Last Updated 6 ಜೂನ್ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಸ್ ನಿಲ್ದಾಣಗಳು, ಬಸ್ ತಂಗುದಾಣಗಳು, ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರು, ಮಕ್ಕಳಿಗೆ ತೊಂದರೆಯಾದರೆ ತಕ್ಷಣ ರಕ್ಷಣೆಗೆ ‘ಪಿಂಕ್ ಸಾರಥಿ’ ವಾಹನ ಬರಲಿದೆ.

ಮಹಿಳಾ ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆಗಾಗಿ ‘ಪಿಂಕ್ ಸಾರಥಿ’ ಸಂಚಾರಿ ವಾಹನ ಸೇವೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆರಂಭಿಸಿದೆ. ಇದಕ್ಕಾಗಿ ₹4.30 ಕೋಟಿ ವೆಚ್ಚದಲ್ಲಿ 25 ಬೊಲೆರೊ ಜೀಪುಗಳನ್ನು ಖರೀದಿಸಲಾಗಿದೆ. ವಿಧಾನಸೌಧದ ಎದುರು ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಸೇವೆಗೆ ಚಾಲನೆ ನೀಡಿದರು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಬಿಎಂಟಿಸಿ ಅಧ್ಯಕ್ಷ ಎನ್.ಎ.ಹ್ಯಾರಿಸ್ ಇದ್ದರು.

ಕಾರ್ಯನಿರ್ವಹಣೆ ಹೇಗೆ:ಸಂಸ್ಥೆಯ ನಿಯಂತ್ರಣ ಕೊಠಡಿಗೆ ದೂರು ಬಂದ ತಕ್ಷಣ ಸಮೀಪದಲ್ಲಿ ಇರುವ ಸಾರಥಿ ವಾಹನಕ್ಕೆ ಮಾಹಿತಿ ರವಾನೆಯಾಗಲಿದ್ದು, ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಿಳೆಯರು, ಮಕ್ಕಳ ರಕ್ಷಣೆಗೆ ಮುಂದಾಗುತ್ತಾರೆ. ಈ ವಾಹನದಲ್ಲಿ ಇನ್‌ಸ್ಪೆಕ್ಟರ್, ಒಬ್ಬರು ಸಿಬ್ಬಂದಿ, ಚಾಲಕ ಇರುತ್ತಾರೆ. ವಾಹನಕ್ಕೆ ಜಿಪಿಎಸ್ ಅಳವಡಿಸಲಾಗಿದ್ದು, ಪಬ್ಲಿಕ್ ಅಡ್ರೆಸ್ ಸಿಸ್ಟಂ ಹೊಂದಿದೆ. ನಿಯಂತ್ರಣ ಕೊಠಡಿಯಿಂದ ವಾಹನದ ಮೇಲೆ ನಿಗಾ ವಹಿಸಲಿದ್ದು, 24X7 ಕಾರ್ಯನಿರ್ವಹಿಸಲಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ‘ನಿರ್ಭಯ’ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೆ ಕಾರ್ಯಕ್ರಮಗಳನ್ನು ರೂಪಿಸಲು ಬಿಎಂಟಿಸಿಗೆ ಕೇಂದ್ರ ಸರ್ಕಾರ ₹56.7 ಕೋಟಿ ಅನುದಾನ ನೀಡಿದೆ. ಈ ಹಣದಲ್ಲಿ ‘ಪಿಂಕ್ ಸಾರಥಿ’ ಸೇವೆಗಾಗಿ ವಾಹನ ಖರೀದಿಸಲಾಗಿದೆ.

ಪಾಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ

ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಇನ್ನು ಮುಂದೆ ಅರ್ಜಿ ಹಿಡಿದು ಓಡಾಡಬೇಕಿಲ್ಲ. ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಳ್ಳಬಹುದು. ಸಲ್ಲಿಸಿದ ಅರ್ಜಿಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ನಲ್ಲೇ ಪರಿಶೀಲಿಸಿ ಅನುಮೋದನೆ ನೀಡಬಹುದು. 2018–19ರಿಂದಲೇ ಇದು ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಈ ಬಾರಿ ವಿದ್ಯಾರ್ಥಿಗಳು ಪಾಸ್ ಪಡೆದುಕೊಳ್ಳಲು 26 ಸ್ಥಳಗಳಲ್ಲಿ 29 ಕೌಂಟರ್‌ಗಳನ್ನು ತೆರೆಯಲಾಗಿದೆ.

ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್‌ಗಳನ್ನು ಆನ್‌ಲೈನ್‌ ಮೂಲಕ ವಿತರಿಸುತ್ತಿರುವ ದೇಶದ ಮೊದಲ ಸಾರಿಗೆ ಸಂಸ್ಥೆಯಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ.

ಮಹಿಳಾ ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆ

7760991212,18004251663

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT