ಹುಣಸೆಮಾರನಹಳ್ಳಿಯಲ್ಲಿ ಜಾಗ ಭಾರಿ ತುಟ್ಟಿ

7
ಒಂದು ಎಕರೆ ಕೃಷಿ ಭೂಮಿಗೆ ₹6.63 ಕೋಟಿ l ಚಿಕ್ಕನಳ್ಳಿಯಲ್ಲಿ ಎಕರೆಗೆ ₹16 ಲಕ್ಷ

ಹುಣಸೆಮಾರನಹಳ್ಳಿಯಲ್ಲಿ ಜಾಗ ಭಾರಿ ತುಟ್ಟಿ

Published:
Updated:

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ಹುಣಸೆಮಾರನಹಳ್ಳಿಯ ಒಂದು ಎಕರೆ ಕೃಷಿ ಭೂಮಿಯ ಬೆಲೆ ರೂ6.63 ಕೋಟಿ. ಸರ್ಜಾಪುರ ರಸ್ತೆಯ ಚಿಕ್ಕನಳ್ಳಿಯ ಒಂದು ಎಕರೆ ಕೃಷಿ ಭೂಮಿಯ ಬೆಲೆ ರೂ16 ಲಕ್ಷ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯದಾದ್ಯಂತ ಸ್ಥಿರಾಸ್ತಿ ಮಾರ್ಗ­ಸೂಚಿ ದರ ಪರಿಷ್ಕರಣೆ ಮಾಡಿದೆ. ಪರಿಷ್ಕೃತ ದರ ಜನವರಿ 1ರಿಂದ ಜಾರಿಗೆ ಬಂದಿದೆ. ಸ್ಥಿರಾಸ್ತಿಯ ಹಾಲಿ ಮಾರ್ಗ­ಸೂಚಿ ದರ, ಮಾರುಕಟ್ಟೆ ದರ, ಸಂಪರ್ಕಕ್ಕೆ ಇರುವ ರಸ್ತೆ­ಗಳು, ಆಸ್ತಿ ಇರುವ ಪ್ರದೇಶ­ದ ವಾಣಿಜ್ಯ ಚಟುವಟಿ­ಕೆ­, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ, ಭೂಪರಿವರ್ತನೆ, ಸ್ಥಿರಾಸ್ತಿಯ ಸ್ವರೂಪಗಳನ್ನು ಆಧರಿಸಿ ದರ ಪರಿಷ್ಕರಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಿಂದ ಹೊರಕ್ಕೆ ಇರುವ ಕೃಷಿ ಜಮೀನುಗಳ ಕನಿಷ್ಠ ಹಾಗೂ ಗರಿಷ್ಠ ಮಾರ್ಗಸೂಚಿ ದರಗಳ ಮಾಹಿತಿ ಪಟ್ಟಿಯನ್ನು ಇಲಾಖೆ
ಸಿದ್ಧಪಡಿಸಿದೆ.

ಮಾರ್ಗಸೂಚಿ ದರ ಶೇ 5ರಿಂದ ಶೇ 25ರಷ್ಟು ಹೆಚ್ಚಳ ಆಗಿದೆ. ಹೆಬ್ಬಾಳ ರಸ್ತೆ, ನೆಲಮಂಗಲ ರಸ್ತೆ, ಮೈಸೂರು ರಸ್ತೆಗಳಲ್ಲಿ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಇಲ್ಲಿ ಈ ಪ್ರಮಾಣ ಶೇ 25ರಷ್ಟು ಇದೆ. ನಗರದ ಕೇಂದ್ರ ಭಾಗದ ಪ್ರದೇಶಗಳಲ್ಲಿ (ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಶಿವಾಜಿನಗರ ಸುತ್ತಮುತ್ತಲ ಪ್ರದೇಶ) ಶೇ 5ರಿಂದ 15ರಷ್ಟು ಜಾಸ್ತಿ ಆಗಿದೆ.

ಆಸ್ತಿ ನೋಂದಣಿಗೆ ದುಂಬಾಲು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೋಂದಣಿ ಹಾಗೂ ಮುದ್ರಾಂಕ ಇಲಾಖೆಗೆ ರೂ1,200 ಕೋಟಿ ಹೆಚ್ಚುವರಿ ರಾಜಸ್ವ ಸಂಗ್ರಹವಾಗಿದೆ. ಇದಕ್ಕೆ ಕಾರಣ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ ವಿಳಂಬ ಮಾಡಿದ್ದು!

ಮಾರ್ಗಸೂಚಿ ದರ ಹೆಚ್ಚಳ ಮಾಡಲು ಇಲಾಖೆ ಸೆಪ್ಟೆಂಬರ್‌ ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಿತ್ತು. ಅಕ್ಟೋಬರ್‌ನಲ್ಲಿ ಹೊಸ ದರ ಪ್ರಕಟಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಉಪಚುನಾವಣೆಯ ನೀತಿಸಂಹಿತೆ ಕಾರಣದಿಂದ ದರ ಪರಿಷ್ಕರಣೆಯನ್ನು ಮುಂದೂಡಲಾಗಿತ್ತು. ದರ ಹೆಚ್ಚಳವಾಗಲಿದೆ ಎಂಬ ಆತಂಕದಿಂದ ಜನರು ಈ ಅವಧಿಯಲ್ಲಿ ಆಸ್ತಿ ನೋಂದಣಿಗೆ ದುಂಬಾಲು ಬಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 75,580ಕ್ಕೂ ಹೆಚ್ಚು ಆಸ್ತಿಗಳ ನೋಂದಣಿ
ಆಗಿದೆ.

2016ರ ನವೆಂಬರ್‌ನಲ್ಲಿ ಭಾರಿ ಮುಖಬೆಲೆಯ ನೋಟು ರದ್ದು ಮಾಡಿದ್ದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆ, ನಗರ ಮತ್ತು ಪಟ್ಟಣಗಳಲ್ಲಿ ಭೂಮಿ, ನಿವೇಶನ, ಫ್ಲಾಟ್ ಖರೀದಿ ಮತ್ತು ಮಾರಾಟ ಬಹುತೇಕ ಸ್ಥಗಿತಗೊಂಡಿತ್ತು.

2016–17ರಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ರೂಪದಲ್ಲಿ ರೂ9,100 ಕೋಟಿ ತೆರಿಗೆ ಸಂಗ್ರಹ ಗುರಿ ಇತ್ತು. ತಿಂಗಳಿಗೆ ಸರಾಸರಿ ರೂ758 ಕೋಟಿ ಸಂಗ್ರಹವಾಗಬೇಕಿತ್ತು. ನೋಟು ರದ್ದತಿ ಬಳಿಕ ತೆರಿಗೆ ಸಂಗ್ರಹದಲ್ಲಿ ತಿಂಗಳ ಸರಾಸರಿ ರೂ150 ಕೋಟಿ ಇಳಿಕೆಯಾಗಿತ್ತು. ಆ ವರ್ಷ ಇಲಾಖೆಯ ಆದಾಯ ರೂ1,350 ಕೋಟಿ ರಾಜಸ್ವ ಖೋತಾ ಉಂಟಾಗಿತ್ತು.

2017-18ರ ಆರಂಭದಲ್ಲಿ ಮಂದಗತಿಯಲ್ಲಿತ್ತು. ಬಳಿಕ ಚೇತರಿಸಿಕೊಂಡಿತ್ತು. ಕಳೆದ ವರ್ಷ ರೂ9 ಸಾವಿರ ಕೋಟಿ ರಾಜಸ್ವ ನಿರೀಕ್ಷಿಸಲಾಗಿತ್ತು. ಪ್ರತಿಯಾಗಿ ರೂ9,041 ಕೋಟಿ ಸಂಗ್ರಹವಾಗಿತ್ತು. 2018–19ರಲ್ಲಿ ರೂ10,400 ಕೋಟಿಯ ಗುರಿ ಇರಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ರೂ7,809 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ6,596 ಕೋಟಿ ರಾಜಸ್ವ ಸಂಗ್ರಹವಾಗಿತ್ತು.

‘ಈ ವರ್ಷ ಗುರಿಗಿಂತ ಹೆಚ್ಚಿನ ರಾಜಸ್ವ ಸಂಗ್ರಹವಾಗುವ ವಿಶ್ವಾಸ ಇದೆ. ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಅಧಿಕ ಪ್ರಮಾಣದಲ್ಲಿ ಆಸ್ತಿಗಳ ನೋಂದಣಿ ಆಗಲಿದೆ’ ಎಂದು ಇಲಾಖೆಯ ಆಯುಕ್ತ ಕೆ.ವಿ.ತ್ರಿಲೋಕ್‌ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !