ಬುಧವಾರ, ಆಗಸ್ಟ್ 21, 2019
28 °C
ಮೂರು ದಿನಗಳಲ್ಲಿ ವರದಿ ಕೊಡಲು ಜಂಟಿ ಕಮಿಷನರ್‌ಗೆ ಸೂಚನೆ

ಆಡಿಯೊ ವೈರಲ್‌: ವಿಚಾರಣೆಗೆ ಆದೇಶ

Published:
Updated:
Prajavani

ಬೆಂಗಳೂರು: ಪೊಲೀಸ್‌ ಕಮಿಷನರ್‌ ಹುದ್ದೆಗಾಗಿ ಹಿಂದಿನ ಸರ್ಕಾರದಲ್ಲೂ ತಾವು ಲಾಬಿ ಮಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೊ ಬಗ್ಗೆ ವಿಚಾರಣೆ ನಡೆಸುವಂತೆ ಭಾಸ್ಕರ್‌ ರಾವ್‌ ಆದೇಶ ನೀಡಿದ್ದಾರೆ.

ಕೇಂದ್ರ ಅಪರಾಧ ವಿಭಾಗದ ಜಂಟಿ ಕಮಿಷನರ್‌ ಸಂದೀಪ್‌ ಪಾಟೀಲ ಅವರಿಗೆ ಈ ಬಗ್ಗೆ ವಿಚಾರಣೆ ನಡೆಸಿ ಮೂರು ದಿನದೊಳಗೆ ವರದಿ ನೀಡುವಂತೆ ಕಮಿಷನರ್‌ ಸೂಚಿಸಿದ್ದಾರೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಭವವಿದೆ ಎಂದು ರಾವ್‌ ಅವರ ಆಪ್ತ ಮೂಲಗಳು ತಿಳಿಸಿವೆ.

ಆಡಿಯೊ ಅಸಲಿಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸ್‌ ಕಮಿಷನರ್‌ ಉದ್ದೇಶಿಸಿದ್ದಾರೆ. ಯಾರಾದರೂ ಕಿಡಿಗೇಡಿಗಳು ಆಡಿಯೊ ತಿರುಚಿರಬಹುದೇ ಎಂದೂ ಪರಿಶೀಲಿಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಸಮಾಜದ ಹಿತದೃಷ್ಟಿಯಿಂದ ಅಪರಾಧಗಳ ‍ಪತ್ತೆ ಹಾಗೂ ನಿಯಂತ್ರಣಕ್ಕೆ ಕೆಲವು ಕುಖ್ಯಾತ ಕ್ರಿಮಿನಲ್‌ಗಳ ದೂರವಾಣಿ ಸಂಭಾಷಣೆ ಕೇಳುವ ವಿಶೇಷ ಅಧಿಕಾರವನ್ನು ಪೊಲೀಸ್‌ ಇಲಾಖೆಗೆ ಕೊಡಲಾಗಿದೆ. ಇದನ್ನು ದುರ್ಬಳಕೆ ಮಾಡಿಕೊಂಡು ತಮ್ಮ ದೂರವಾಣಿ ಸಂಭಾಷಣೆಯನ್ನು ಮಾಡಿ, ತಿರುಚಿರುವ ಸಾಧ್ಯತೆಯಿದೆ ಎಂದು ಭಾಸ್ಕರ್‌ ರಾವ್‌ ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ.

ಕಮಿಷನರ್‌ ಹುದ್ದೆಗೆ ಭಾಸ್ಕರ್‌ ರಾವ್‌ ಲಾಬಿ?

ನಗರ ಪೊಲೀಸ್ ಕಮಿಷನರ್ ಹುದ್ದೆ ಗಿಟ್ಟಿಸಿಕೊಳ್ಳಲು ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಭಾಸ್ಕರ್‌ ರಾವ್‌ ಲಾಬಿ ನಡೆಸಿದ್ದರೆಂದು ಆರೋಪಿಸುವ ಆಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದೆಹಲಿಯ ಕಾಂಗ್ರೆಸ್‌ ನಾಯಕನೊಬ್ಬನ ಜೊತೆ ಭಾಸ್ಕರ್‌ ರಾವ್‌ ಅವರು ಮಾತನಾಡಿದ್ದು, ಈ ವೇಳೆ ಆ ಪಕ್ಷದ ಹಿರಿಯ ನಾಯಕ ಅಹ್ಮದ್‌ ಪಟೇಲ್‌, ಪುದುಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ, ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣಗೋಪಾಲ್ ಅವರ ಹೆಸರೂ ಪ್ರಸ್ತಾವವಾಗಿದೆ.

ಕಮಿಷನರ್‌ ಆಗಿದ್ದ ಸುನೀಲ್‌ ಕುಮಾರ್‌ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಅಲೋಕ್‌ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ನೇಮಿಸಿದಾಗ, ಸೇವಾ ಜ್ಯೇಷ್ಠತೆಯಲ್ಲಿ ಹಿರಿಯರಾದ ಭಾಸ್ಕರ್‌ ರಾವ್‌ ಅಸಮಾಧಾನಗೊಂಡಿದ್ದರು.

ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಅಲೋಕ್‌ ಕುಮಾರ್‌ ಅವರನ್ನು ಬದಲಿಸಿ ಭಾಸ್ಕರ್‌ ಅವರನ್ನು ಕಮಿಷನರ್‌ ಆಗಿ ನೇಮಿಸಿದ್ದಾರೆ.

Post Comments (+)