ರಾತ್ರೋರಾತ್ರಿ ರೌಡಿಗಳ ಚಳಿ ಬಿಡಿಸಿದ ಪೊಲೀಸರು

7

ರಾತ್ರೋರಾತ್ರಿ ರೌಡಿಗಳ ಚಳಿ ಬಿಡಿಸಿದ ಪೊಲೀಸರು

Published:
Updated:
Prajavani

ಬೆಂಗಳೂರು: ಸುಬ್ರಹ್ಮಣ್ಯಪುರ ಉಪವಿಭಾಗದಲ್ಲಿ ರಾತ್ರೋರಾತ್ರಿ ರೌಡಿಗಳ ಹಾಗೂ ಹಳೆ ಆರೋಪಿಗಳ ಪರೇಡ್ ನಡೆಸಿರುವ ಡಿಸಿಪಿ ಅಣ್ಣಾಮಲೈ ನೇತೃತ್ವದ ತಂಡ, ದಾಖಲೆಗಳಿಲ್ಲದ 72 ಬೈಕ್‌ಗಳನ್ನು ವಶಪಡಿಸಿಕೊಂಡಿದೆ.

ಗುರುವಾರ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 5.30ರವರೆಗೆ ಕಾರ್ಯಾಚರಣೆ ನಡೆದಿದೆ. ಪೊಲೀಸರು ಐದು ತಂಡಗಳನ್ನು ರಚಿಸಿಕೊಂಡು ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್, ತಲಘಟ್ಟಪುರ, ಸುಬ್ರಹ್ಮಣ್ಯಪುರ ಹಾಗೂ ಪುಟ್ಟೇನಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಮತ್ತಿ ಶಿವ, ಕರಿಯಾ ಅಶ್ವತ್ಥ್‌, ಸೈಕೊ ಸುಮನ್, ಪುಟ್ಟ, ತಾಮ್ರ ಶಿವ, ಜಪಾನ್ ಭರತ, ಬಡಾರ ಮುತ್ತು, ಮೋಹಿನ್ ಪಾಷಾ ಸೇರಿದಂತೆ 32 ರೌಡಿಗಳನ್ನು ಹಾಗೂ 44 ಎಂಒಬಿಗಳನ್ನು (ಹಳೆ ಆರೋಪಿಗಳು) ಪೊಲೀಸರು ವಿಚಾರಣೆ ನಡೆಸಿದರು. ಅವರ ಪ್ರಸ್ತುತ ವಿಳಾಸ, ಮೊಬೈಲ್ ಸಂಖ್ಯೆ, ಬೆರಳಮುದ್ರೆ, ಸದ್ಯದ ಜೀವನ ಶೈಲಿ, ಮಾಡುತ್ತಿರುವ ಕೆಲಸಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ರೌಡಿ ಚಟುವಟಿಕೆ ನಡೆಸಿದರೆ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದರು.

‘ಕೊಳಗೇರಿ ಹಾಗೂ ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸಲಾಗಿದ್ದ ಎಲ್ಲ ವಾಹನಗಳ ದಾಖಲೆಗಳನ್ನೂ ಪರಿಶೀಲಿಸಿದೆವು. ಕೆಲ ವಾಹನಗಳಿಗೆ ನಂಬರ್‌ ಪ್ಲೇಟ್ ಇರಲೇ ಇಲ್ಲ. ಇನ್ನೂ ಕೆಲ ಬೈಕ್‌ಗಳಲ್ಲಿ ಮುಂದೆ ಹಾಗೂ ಹಿಂದೆ ಬೇರೆ ಬೇರೆಯ ನಂಬರ್‌ ಪ್ಲೇಟ್‌ಗಳನ್ನು ಹಾಕಲಾಗಿತ್ತು. ಅಂಥ 72 ಬೈಕ್‌ಗಳನ್ನು ಜಪ್ತಿ ಮಾಡಿ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದೇವೆ’ ಎಂದು ಮಾಹಿತಿ ನೀಡಿದರು.‌

***

ರೌಡಿಗಳಿಗೆ ಪೊಲೀಸರ ಮೇಲೆ ಭಯ ಇರಬೇಕು. ಆಗ ಮಾತ್ರ ಅಪರಾಧ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತವೆ. ಇನ್ನು ಮುಂದೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇರುತ್ತವೆ

-ಅಣ್ಣಾಮಲೈ, ಡಿಸಿಪಿ, ದಕ್ಷಿಣ ವಿಭಾಗ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !