ಪೊಲೀಸರಿಗೆ 2 ವರ್ಷದ ‘ರೊಟೇಷನ್’ ವರ್ಗ !

ಮಂಗಳವಾರ, ಏಪ್ರಿಲ್ 23, 2019
31 °C
ಸ್ಥಾನಪಲ್ಲಟಕ್ಕೆ ಹೊಸ ನಿಯಮ * ಗೃಹ ಇಲಾಖೆಗೆ ಐಪಿಎಸ್ ಸಮಿತಿ ವರದಿ

ಪೊಲೀಸರಿಗೆ 2 ವರ್ಷದ ‘ರೊಟೇಷನ್’ ವರ್ಗ !

Published:
Updated:

ಬೆಂಗಳೂರು: ತಮ್ಮ ‘ಗಾಡ್‌ಫಾದರ್’ಗಳ ಪ್ರಭಾವ ಬಳಸಿ ಹಲವು ವರ್ಷಗಳಿಂದ ಫಲವತ್ತಾದ ಸ್ಥಾನಗಳಲ್ಲೇ ನೆಲೆಯೂರಿರುವ ಪೊಲೀಸರ ಸ್ಥಾನಪಲ್ಲಟಕ್ಕೆ ಮುಂದಾಗಿರುವ ರಾಜ್ಯ ಗೃಹ ಇಲಾಖೆ, ಎಕ್ಸಿಕ್ಯುಟಿವ್ ಮತ್ತು ನಾನ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಈಗ ರೋಟೇಷನ್ ಮಾದರಿಯಲ್ಲಿ ವರ್ಗಾವಣೆ ನೀತಿ ಜಾರಿಗೊಳಿಸಲು ಮುಂದಾಗಿದೆ.

ಇತ್ತೀಚಿಗೆ ನಡೆದ ಐಪಿಎಸ್ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತುತ ವರ್ಗಾವಣೆ ವ್ಯವಸ್ಥೆಯನ್ನು ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದ್ದ ಗೃಹಸಚಿವ ಎಂ.ಬಿ.ಪಾಟೀಲ, ಎರಡು ವರ್ಷದ ಸೇವಾವಧಿಯ ಆಧಾರದಡಿ ಸ್ಥಾನ ಬದಲಾವಣೆಗೆ ನಿಯಮ ತರುವಂತೆ ಡಿಜಿ-ಐಜಿಪಿ ನೀಲಮಣಿ ರಾಜು ಅವರಿಗೆ ಸೂಚಿಸಿದ್ದರು.

ಆ ಸೂಚನೆ ಬೆನ್ನಲ್ಲೇ ಅಧಿಕಾರಿಗಳ ಸಮಿತಿ ರಚಿಸಿದ್ದ ಡಿಜಿ–ಐಜಿಪಿ, ಎರಡು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ (ಕಾನ್‌ಸ್ಟೆಬಲ್‌ನಿಂದ–ಡಿವೈಎಸ್ಪಿ ಹುದ್ದೆವರೆಗಿನ) ಪಟ್ಟಿ ಸಿದ್ಧಪಡಿಸುವಂತೆ ಸಮಿತಿ ಸದಸ್ಯರಿಗೆ ಸೂಚನೆ ನೀಡಿದ್ದರು. ಇದೀಗ ಪಟ್ಟಿ ಸಿದ್ಧವಾಗಿದ್ದು, ಕೆಲ ದಿನಗಳ ಹಿಂದೆ ಅದು ಗೃಹ ಇಲಾಖೆ ಕಚೇರಿಯನ್ನೂ ತಲುಪಿದೆ.

ಜಾತಿ, ರಾಜಕೀಯ, ಹಿರಿಯ ಅಧಿಕಾರಿಗಳ ಶ್ರೀರಕ್ಷೆಯಲ್ಲಿ ಕೆಲವರು ಹಲವು ವರ್ಷಗಳಿಂದ ಬೆಂಗಳೂರು ಕಾನೂನು ಸುವ್ಯವಸ್ಥೆ, ಸಂಚಾರ, ಸಿಸಿಬಿ ವಿಭಾಗಗಳಲ್ಲೇ ಉಳಿದುಕೊಂಡಿದ್ದಾರೆ. ಮೈಸೂರು, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ–ಧಾರವಾಡದಂತಹ ನಗರ ಕೇಂದ್ರೀಕೃತ ಪ್ರದೇಶಗಳಲ್ಲೂ ಕೆಲ ಡಿವೈಎಸ್ಪಿ, ಇನ್‌ಸ್ಪೆಕ್ಟರ್ ಹಾಗೂ ಪಿಎಸ್‌ಐಗಳು ತುಂಬ ಸಮಯದಿಂದ ಇದ್ದಾರೆ. ಆದರೆ, ‘ಗಾಡ್‌ಫಾದರ್‌’ಗಳಿಲ್ಲದರು ಅಥವಾ ‘ಪ್ರಭಾವಿ’ಗಳ ಅವಕೃಪೆಗೆ ಒಳಗಾದವರು ಮಾತ್ರ ಎಸಿಬಿ, ಸಿಐಡಿ, ಗುಪ್ತದಳ ಹಾಗೂ ಐಎಸ್‌ಡಿಯಂತಹ ನಾನ್‌ ಎಕ್ಸಿಕ್ಯುಟಿವ್ ಹುದ್ದೆಗಳಲ್ಲಿ ಕೊಳೆಯುತ್ತಿದ್ದಾರೆ.

‘ಹೊಸ ನೀತಿಯಡಿ ಪ್ರಾಥಮಿಕ ಹಂತವಾಗಿ ಸಿಐಡಿಯ ಕೆಲ ಪೊಲೀಸರನ್ನು ಈಗಾಗಲೇ ಬದಲಾವಣೆ ಮಾಡಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಹೊಸ ನೀತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ಹೊಸ ನೀತಿಯ ವರ್ಗವಲ್ಲ: ‘ಮೂರು ವರ್ಷ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸಿದವರನ್ನು ಚುನಾವಣೆ ಕಾರಣಕ್ಕೆ ಬದಲಾವಣೆ ಮಾಡಬೇಕು’ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಅದರಂತೆ ಬದಲಾವಣೆ ಮಾಡಲಾಗಿದೆಯೇ ಹೊರತು, ಹೊಸ ನೀತಿಯಡಿ ಸರ್ಕಾರ ಯಾರನ್ನೂ ಎಕ್ಸಿಕ್ಯುಟಿವ್ ಹುದ್ದೆಗೆ ವರ್ಗಾಯಿಸಿಲ್ಲ’ ಎಂದು ಸಿಐಡಿ ಇನ್‌ಸ್ಪೆಕ್ಟರ್‌ವೊಬ್ಬರು ದೂರಿದ್ದಾರೆ.

‘ಎಲ್ಲರಿಗೂ ಅವಕಾಶ ಸಿಗತ್ತೆ’

‘ವರ್ಗಾವಣೆ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಾದ ಪೊಲೀಸ್ ಸಿಬ್ಬಂದಿ ಮಂಡಳಿ (ಪಿಇಬಿ) ನೆಪ ಮಾತ್ರಕ್ಕಷ್ಟೇ ಇದೆ. ಸಚಿವರು, ಶಾಸಕರು, ಮುಖ್ಯಮಂತ್ರಿಗಳ ‘ಮಿನಿಟ್’ ಆಧಾರದ ಮೇಲೇ ವರ್ಗಾವಣೆಗಳು ನಡೆಯುತ್ತಿವೆ. ಸರ್ಕಾರದ ಆದೇಶದಂತೆ ಪಿಇಬಿ ನಡೆದುಕೊಳ್ಳುತ್ತಿರುವ ಕಾರಣ ಗುಪ್ತದಳ, ಐಎಸ್‌ಡಿಯಂತಹ ಮಹತ್ವದ ಹುದ್ದೆ ನಿರ್ವಹಿಸುತ್ತಿರುವವರಲ್ಲೂ ವೃತ್ತಿಪರತೆ ತರಲು ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಗಳು ಸಭೆಯಲ್ಲಿ ದೂರಿದ್ದರು. 

ಆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವರು, ‘ರೊಟೇಷನ್ ಮಾದರಿಯಲ್ಲಿ ವರ್ಗಾವಣೆ ನೀತಿ ತರೋಣ. ಆಗ ಎಲ್ಲರಿಗೂ ಎಕ್ಸಿಕ್ಯುಟಿವ್ ಹುದ್ದೆಗಳಲ್ಲೂ ಅವಕಾಶ ಸಿಕ್ಕಂತಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ಮಾತಿಗೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !