ಮತದಾನಕ್ಕೆ ಮಾರಕವಾದ ಸಾಲು, ಸಾಲು ರಜೆಗಳು

ಶನಿವಾರ, ಮೇ 25, 2019
22 °C

ಮತದಾನಕ್ಕೆ ಮಾರಕವಾದ ಸಾಲು, ಸಾಲು ರಜೆಗಳು

Published:
Updated:

ಅಷ್ಟೊಂದು ಪ್ರಚಾರದ ನಂತರವೂ ಮತದಾನದಿಂದ ದೂರ ಉಳಿದು ಬದುಕಿದ್ದರೂ ಸತ್ತಂತೆ ವರ್ತಿಸಿದ ಬೆಂಗಳೂರು ನಗರದ ಸುಶಿಕ್ಷಿತ ‘ಸತ್‌’ ಪ್ರಜೆಗಳಿಗೆ ನಮ್ಮ ಶ್ರದ್ಧಾಂಜಲಿ...

ಮತದಾನದ ಮರುದಿನವೇ ಬೆಂಗಳೂರಿನಲ್ಲಿ ಇಂಥದೊಂದು ಫ್ಲೆಕ್ಸ್‌ ಹಾಕಲಾಗಿದೆ. ಮತಗಟ್ಟೆಗೆ ಬಾರದ ಬೆಂಗಳೂರಿನ ಮತದಾರರನ್ನು‘ಸತ್ತ ಪ್ರಜೆಗಳು’ ಎಂದು ಮೂದಿಸಲಾಗಿದೆ. 

ಹೌದು! ಮತದಾನ ಉತ್ತೇಜಿಸಲು ಚುನಾವಣಾ ಆಯೋಗ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಮತದಾನ ಜಾಗೃತಿ ಕಾರ್ಯಕ್ರಮಗಳು ಬೆಂಗಳೂರಿನ ಸುಶಿಕ್ಷಿತ ಮತದಾರನನ್ನು ಮತಗಟ್ಟೆಗೆ ಕರೆ ತರಲು ವಿಫಲವಾಗಿವೆ. ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಸುಧಾರಿಸದ ಬಗ್ಗೆ ಅನೇಕ ರೀತಿಯ ವಿಶ್ಲೇಷಣೆಗಳು ನಡೆಯುತ್ತಿವೆ.

ಈ ನಡುವೆಯೇ ಇದು ತಮಗೆ ಹೇಗೆ ಲಾಭ ತರಬಹುದು ಎಂದು ರಾಜಕೀಯ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿವೆ. ಪಕ್ಕದ ಜಿಲ್ಲೆಗಳಲ್ಲಿ ಉತ್ತಮ ಮತದಾನವಾದರೂ ಮತಗಟ್ಟೆಗೆ ಬರಲು ಬೆಂಗಳೂರಿಗರು ಏಕಿಷ್ಟು ಆಲಸ್ಯ ಮಾಡುತ್ತಿದ್ದಾರೆ ಎಂದು ಚುನಾವಣಾ ಆಯೋಗ ಮತ್ತು ಸಂಘ, ಸಂಸ್ಥೆಗಳು ಚಿಂತನೆ ನಡೆಸಿವೆ. ಪ್ರಜಾತಂತ್ರದ ಹಬ್ಬ ಎಂದು ಬಣ್ಣಿಸುತ್ತಿದ್ದ ಸುಶಿಕ್ಷಿತ ಮತದಾರ ವರ್ಗದ ಈ ಮನೋಭಾವ ಮತ್ತು ವರ್ತನೆ ಭಾರಿ ಟೀಕೆಗೆ ಒಳಗಾಗಿದೆ. 

ಸಾಲು, ಸಾಲು ರಜೆ ಮುಳುವಾದವು:  ಸಾಲು, ಸಾಲು ರಜೆಗಳು ಬಂದ ಕಾರಣ ಬೆಂಗಳೂರಿಗರು ಪ್ರವಾಸಕ್ಕೆ ತೆರಳಿದ್ದು ಇದಕ್ಕೆ ಕಾರಣ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರಮಾಣದಷ್ಟು ಮತದಾನವಾಗಿಲ್ಲ ಎಂಬುವುದನ್ನು ಚುನಾವಣಾ ಆಯೋಗ ಕೂಡ ಒಪ್ಪಿಕೊಂಡಿದೆ. ಆದರೆ, ನಿರ್ದಿಷ್ಟ ಕಾರಣದ ಬಗ್ಗೆ ಬೊಟ್ಟು ಮಾಡಲು ನಿರಾಕರಿಸಿರುವ ಆಯೋಗ ಈ ಬಗ್ಗೆ ‘ಪೋಸ್ಟ್‌ ಮಾರ್ಟಮ್‌’ ನಡೆಸಲು ಮುಂದಾಗಿದೆ. 

ಇಷ್ಟೊಂದು ಸುಶಿಕ್ಷಿತ ಜನಸಂಖ್ಯೆ ಮತ್ತು ಮತದಾನ ಜಾಗೃತಿ ಹೊರತಾಗಿಯೂ ಮತದಾನ ಪ್ರಮಾಣ ಸುಧಾರಿಸದಿರುವುದು ಆಶ್ಚರ್ಯ ಮೂಡಿಸಿದೆ. ಇದಕ್ಕೆ ಏನು ಕಾರಣ ಎಂದು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಜಂಟಿ ಚುನಾವಣಾ ಆಯುಕ್ತ ಸೂರ್ಯಸೇನ್‌.

ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರಿಂದ ವರದಿ ಕೇಳಲಾಗಿದೆ. ವರದಿ ಕೈಸೇರಿದ ನಂತರ ಈ ಬಗ್ಗೆ ಆಯೋಗ ವಿಶ್ಲೇಷಣೆ ನಡೆಸಲಿದೆ ಎಂದು ಅವರು ‘ಮೆಟ್ರೊ’ಗೆ ತಿಳಿಸಿದರು.

ಸಾಲು, ಸಾಲು ರಜೆ ಬಂದಿರುವುದು ಕೂಡ ಕಾರಣಗಳಲ್ಲಿ ಒಂದಾಗಿರಬಹುದು ಎಂದು ಅವರು ಒಪ್ಪಿಕೊಂಡರು. ಆದರೆ, ಅದೊಂದೇ ಕಾರಣ ಎಂದು ನಿಖರವಾಗಿ ಹೇಳಲಾಗದು. ಕರಾರುವಾಕ್ಕಾದ ಅಂಕಿ, ಸಂಖ್ಯೆಗಳು ಇನ್ನೂ ಲೆಕ್ಕ ಹಾಕುತ್ತಿದ್ದೇವೆ. ಶುಕ್ರವಾರ ರಾತ್ರಿಯ ವೇಳೆಗೆ ನಿಖರ ಅಂಕಿ, ಅಂಶ ದೊರೆಯಬಹುದು ಎಂದರು. 

ಸರ್ವಜ್ಞ ನಗರದಲ್ಲಿ ಮಂದಗತಿ ಮತದಾನ

ರಾಜ್ಯದಲ್ಲಿ ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬೆಂಗಳೂರಿನ ಸರ್ವಜ್ಞ ನಗರದಲ್ಲಿ ಅತ್ಯಂತ ಕಡಿಮೆ ಮತ್ತು ಮಂದಗತಿಯ ಮತದಾನವಾಗಿದೆ. ಇದಕ್ಕೆ ನಿಖರವಾದ ಕಾರಣಗಳು ಇನ್ನೂ ಗೊತ್ತಾಗಿಲ್ಲ. ಯಾವ, ಯಾವ ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆ ಎಂಬ ಬಗ್ಗೆ ವರದಿ ತರಸಿಕೊಳ್ಳುತ್ತಿದ್ದೇವೆ ಎಂದು ಸೂರ್ಯಸೇನ್‌ ಹೇಳುತ್ತಾರೆ. 

‘ಇದೇನು ಮೊದಲ ಬಾರಿಯಲ್ಲ. ಬೆಂಗಳೂರಿನಲ್ಲಿ ಪ್ರತಿ ಚುನಾವಣೆಯಲ್ಲಿಯೂ ಕಡಿಮೆ ಮತದಾನ ಸಾಮಾನ್ಯ.  ಈ ಬಾರಿ ಸಾಲು, ಸಾಲು ರಜೆಗಳು ಇದಕ್ಕೆ ಕಾರಣವಾಗಿರಬಹುದು’ ಎಂದು ಆಯೋಗದ ಮತ್ತೊಬ್ಬ ಅಧಿಕಾರಿ ವಿಶ್ಲೇಷಿಸಿದರು. (ಹೆಸರನ್ನು ಪ್ರಕಟಿಸದಂತೆ ಅವರು ಮನವಿ ಮಾಡಿದರು) 

ಪಟ್ಟಿಯಿಂದ ಬಿಟ್ಟು ಹೋದ ಹೆಸರು

ಮತದಾನ ಉತ್ತೇಜಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ಇಷ್ಟಾದರೂ ಮತದಾನವಾಗಿದೆ. ಇಲ್ಲದಿದ್ದರೆ ಮತದಾನ ಪ್ರಮಾಣ ಇನ್ನಷ್ಟು ಕುಸಿಯುತ್ತಿತ್ತು. ಮತದಾರರ ಪಟ್ಟಿಯಿಂದ ಹೆಸರು ಬಿಟ್ಟು ಹೋಗಿರುವುದು ಮತದಾನ ಪ್ರಮಾಣ ಕುಸಿಯಲು ಮತ್ತೊಂದು ಕಾರಣ ಎನ್ನುವುದು ಕನ್ಸರ್ನ್ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ (ಸಿಡಬ್ಲುಸಿ) ನಿರ್ದೇಶಕಿ ಕವಿತಾ ರತ್ನ ಅಭಿಪ್ರಾಯ.

ರಜೆಗಳ ಕಾರಣ ಬೆಂಗಳೂರಿನಲ್ಲಿ ನೆಲೆಸಿರುವ ಹೊರ ರಾಜ್ಯಗಳ ಜನರು ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದಾರೆ. ಸ್ಥಳೀಯ ರಾಜಕಾರಣದಲ್ಲಿ ಅವರಿಗೆ ಆಸಕ್ತಿ ಇಲ್ಲ. ಹೀಗಾಗಿ ಅವರೇಕೆ ತಲೆ ಕೆಡಸಿಕೊಳ್ಳುತ್ತಾರೆ? ಮತಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐ.ಟಿ ಮತ್ತು ಬಿ.ಟಿ ಕ್ಷೇತ್ರದ ಉದ್ಯೋಗಿಗಳು ಮತದಾನದಂದು ನಾಪತ್ತೆಯಾಗಿದ್ದರು ಎಂಬ ಮತ್ತೊಂದು ಕುತೂಹಲಕಾರಿ ವಿಷಯವನ್ನು ಹೈಕೋರ್ಟ್ ವಕೀಲ ಎಸ್‌.ವಿ. ದೇಸಾಯಿ ಬಿಚ್ಚಿಟ್ಟರು.

ಮನೆಯ ಪಕ್ಕದಲ್ಲಿಯೇ ಮತಗಟ್ಟೆಯಿದ್ದರೂ ಅಲ್ಲಿಗೆ ತೆರಳಿ ಮತ ಚಲಾಯಿಸಲು ಆಗದಷ್ಟು ಆಲಸಿಗಳು ಇಲ್ಲಿದ್ದಾರೆ. ಅಂಥವರನ್ನು ಮತಗಟ್ಟೆಗೆ ಕರೆ ತರುವುದು ಸಾಧ್ಯವಿಲ್ಲ ಎನ್ನುವುದು ದೇಸಾಯಿ ಅವರ ವಾದ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !