ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರ ಕೊಟ್ಟಿದ್ದೇ ಕಾಂಗ್ರೆಸ್‌ನವರು?

ವಿಚಾರಣೆ ವೇಳೆ ‘ಪೋಸ್ಟ್‌ ಕಾರ್ಡ್‌’ ಮುಖ್ಯಸ್ಥ ಮಹೇಶ್ ಹೇಳಿಕೆ
Last Updated 25 ಏಪ್ರಿಲ್ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ ಪ್ರತ್ಯೇಕ ಧರ್ಮಸ್ಥಾಪನೆ ವಿಚಾರವಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಗೃಹ ಸಚಿವ ಎಂ.ಬಿ.ಪಾಟೀಲ ಬರೆದಿದ್ದಾರೆ ಎನ್ನಲಾದ ಪತ್ರವೊಂದನ್ನು ಅದೇ ಪಕ್ಷದ ಕಾರ್ಯಕರ್ತ ನನಗೆ ಕೊಟ್ಟಿದ್ದ. ಅವರ ಮಾತನ್ನು ನಂಬಿ ವೆಬ್ ಪೋರ್ಟಲ್‌ನಲ್ಲಿ ಪತ್ರವನ್ನು ಯಥಾವತ್ತಾಗಿ ಪ್ರಕಟಿಸಿದ್ದೆ...’

ಬುಧವಾರ ಸಿಐಡಿ ವಿಚಾರಣೆ ಎದುರಿಸಿದ ‘ಪೋಸ್ಟ್‌ ಕಾರ್ಡ್‌’ ವೆಬ್‌ಸೈಟ್ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗಡೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ‘ನಾನು ಪತ್ರವನ್ನು ಸೃಷ್ಟಿಸಿಲ್ಲ. ಗೃಹಸಚಿವರ ಸಹಿಯನ್ನೂ ನಕಲು ಮಾಡಿಲ್ಲ. ಯಾರೋ ಬೇರೆಯವರು ತಂದುಕೊಟ್ಟಿದ್ದರೆ ಅದನ್ನು ಪ್ರಕಟಿಸುತ್ತಲೂ ಇರಲಿಲ್ಲ. ಅದೇ ಪಕ್ಷದ ಕಾರ್ಯಕರ್ತ ಕೊಟ್ಟಿದ್ದರಿಂದ ವೆಬ್‌ಸೈಟ್‌ನಲ್ಲಿ ಹಾಕಿದ್ದೆ’ ಎಂದು ಹೇಳಿರುವುದಾಗಿ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಹೇಳಿಕೆಯ ಬೆನ್ನಲ್ಲೇ ಪೊಲೀಸರು ಕಾರ್ಯಕರ್ತನ ಜಾಡು ಹುಡುಕುತ್ತಿದ್ದಾರೆ. ‘ಸೈಬರ್ ಕ್ರೈಂ ಪೊಲೀಸರ ತಂಡ ಈಗಾಗಲೇ ಆತನ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಿದೆ. ತನಿಖೆ ದೃಷ್ಟಿಯಿಂದ ಈಗಲೇ ಆ ಕಾರ್ಯಕರ್ತನ ಹೆಸರು ಬಹಿರಂಗಪಡಿಸುವುದಿಲ್ಲ’ ಎಂದು ಅಧಿಕಾರಿಗಳು ಹೇಳಿದರು.

ಮಹತ್ವದ ಸುದ್ದಿ: ಮಹೇಶ್ ಅವರನ್ನು ವಿರಾಜಪೇಟೆಯಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದ ಸಿಐಡಿ ಪೊಲೀಸರು, ಬುಧವಾರ ನಾಲ್ಕು ತಾಸು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದರು. ‘ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಅಂತಹದ್ದೊಂದು ಪತ್ರ ಹೊರಬಿದ್ದಿತ್ತು. ಆಗ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ದೊಡ್ಡ ಚಳವಳಿಯೇ ನಡೆಯುತ್ತಿತ್ತು. ಪತ್ರದಲ್ಲಿ ಕುತೂಹಲಕಾರಿ ಅಂಶಗಳು ಇದ್ದುದರಿಂದ ಅದು ಮಹತ್ವದ ಸುದ್ದಿಯಾಗಿತ್ತು. ಹೀಗಾಗಿ, ಪ್ರಕಟಿಸಿದ್ದೆ’ ಎಂದೂ ಮಹೇಶ್ ಹೇಳಿರುವುದಾಗಿ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT