ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗುದಾಣದಲ್ಲಿ ಕಸದ ರಾಶಿ

ಪಾಲಿಕೆ–ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆ
Last Updated 15 ಫೆಬ್ರುವರಿ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು:‌‌‌‌‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ನಿರ್ಮಿಸಿರುವ ಪ್ರಯಾಣಿಕರ ತಂಗುದಾಣಗಳಲ್ಲಿನ ಬಹುತೇಕ ಬುಟ್ಟಿಗಳು ಕಸದಿಂದ ತುಂಬಿ ತುಳುಕುತ್ತಿವೆ. ಬಸ್‌ಗಳಿಗಾಗಿ ಕಾಯುತ್ತಿರುವವರು ಕಸದ ವಾಸನೆ ಸಹಿಸಬೇಕಾಗಿದೆ.

ಪಾಲಿಕೆಯ ಟ್ರಾಫಿಕ್‌ ಎಂಜಿನಿಯರಿಂಗ್‌ ವಿಭಾಗವು (ಟಿಇಸಿ) ಪಿಪಿಪಿ ಮಾದರಿಯಲ್ಲಿ ನಗರದ ನೂರಾರು ಕಡೆಗಳಲ್ಲಿ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿದೆ. ಪ್ರತಿ ತಾಣದಲ್ಲಿ ಕಸ ಸಂಗ್ರಹಣೆಗಾಗಿ ಎರಡು ಬುಟ್ಟಿಗಳನ್ನು ಜೋಡಿಸಲಾಗಿದೆ. ಒಂದರಲ್ಲಿ ಹಸಿ ಕಸ, ಮತ್ತೊಂದರಲ್ಲಿ ಒಣ ಕಸ ಹಾಕಲು ವ್ಯವಸ್ಥೆ ಮಾಡಿದೆ. ಆದರೆ, ಬುಟ್ಟಿಯಲ್ಲಿ ಸಂಗ್ರಹವಾಗುವ ಕಸವನ್ನು ಯಾರು ವಿಲೇವಾರಿ ಮಾಡಬೇಕೆಂಬ ವಿಷಯವಾಗಿ ಸ್ಪಷ್ಟತೆ ಇಲ್ಲ. ತಂಗುದಾಣ ನಿರ್ಮಿಸುವ ಕಂಪನಿಗಳೊಂದಿಗಿನ ಒಪ್ಪಂದದಲ್ಲೂ ಅದರ ಪ್ರಸ್ತಾಪ ಇಲ್ಲ.

‘ಆಯಾ ವಾರ್ಡ್‌ಗಳ ಕಸ ವಿಲೇವಾರಿ ಮಾಡುವ ಗುತ್ತಿಗೆದಾರರೇ ಈ ಕಸವನ್ನು ಸಾಗಿಸುತ್ತಾರೆ’ ಎಂದು ಟಿಇಸಿ ವಿಭಾಗದ ಅಧಿಕಾರಿಗಳು ಹೇಳುತ್ತಾರೆ. ಆದರೆ, ‘ನಮಗೆ ಮನೆಗಳಿಂದ ಹಸಿ ಕಸ ಸಂಗ್ರಹಕ್ಕೆ ಮಾತ್ರ ಗುತ್ತಿಗೆ ನೀಡಲಾಗಿದೆ. ಬಸ್‌ ಶೆಲ್ಟರ್ಸ್‌ ಬಿನ್‌ಗಳಲ್ಲಿನ ಕಸ ಎತ್ತುವ ಕೆಲಸ ನಮ್ಮದಲ್ಲ’ ಎಂದು ಗುತ್ತಿಗೆದಾರರು ವಾದಿಸುತ್ತಾರೆ.

ಇವರ ನಿರ್ಲಕ್ಷ್ಯದಿಂದಾಗಿ ಬುಟ್ಟಿಯಲ್ಲಿ ಬಿದ್ದ ತಿಂಡಿ–ತಿನಿಸು ಪೊಟ್ಟಣಗಳ ಕಸ ವಿಲೇವಾರಿ ತಾಣಕ್ಕೆ ತಲುಪುತ್ತಿಲ್ಲ.

ಹಲವೆಡೆ ಬುಟ್ಟಿಗಳು ಭರ್ತಿಯಾಗಿ, ಕಸವು ಹೊರಚಲ್ಲುತ್ತಿದೆ. ಗಾಳಿಗೆ ಹಾರಿ ತಂಗುದಾಣ, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದೆ. ಕೆಲವೆಡೆ ಬುಟ್ಟಿಗಳು ಮುರಿದಿವೆ. ಇದರಿಂದ ಸಾರ್ವಜನಿಕ ಸ್ಥಳದ ಸ್ವಚ್ಛತೆ ಹಾಳಾಗುತ್ತಿದೆ.

‘ನಮಗೆ ವಾರ್ಡ್‌ನಲ್ಲಿನ ಮನೆಗಳಿಂದ ಹಸಿ ಕಸ ಸಂಗ್ರಹಕ್ಕೆ ಮಾತ್ರ ಗುತ್ತಿಗೆ ನೀಡುತ್ತಾರೆ. ಈ ಶೆಲ್ಟರ್‌ಗಳಲ್ಲಿ ಹಸಿ ಮತ್ತು ಒಣ ಕಸ ಮಿಶ್ರಣ ಆಗಿರುತ್ತದೆ. ಅದನ್ನು ಹೇಗೆ ವಿಲೇವಾರಿ ಮಾಡುವುದು? ಅಲ್ಲದೆ, ವಾರ್ಡ್‌ವೊಂದರಲ್ಲಿ ಎಲ್ಲೆಲ್ಲಿ ತಂಗುದಾಣಗಳಿವೆ ಎಂಬ ನಿಖರ ಮಾಹಿತಿಯೇ ನೀಡಿಲ್ಲ’ ಎಂದು ಪಾಲಿಕೆಯ ಕಸ ವಿಲೇವಾರಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ಬಾಲಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂಗುತಾಣಗಳು ಇರುವ ರಸ್ತೆಗಳವರೆಗೂ ಕಸ ವಿಲೇವಾರಿ ವಾಹನಗಳನ್ನು ಕೊಂಡೊಯ್ದರೆ, ಇಂಧನ ಮತ್ತು ಕಾರ್ಮಿಕ ಶ್ರಮವು ಹೆಚ್ಚುವರಿಯಾಗಿ ವ್ಯಯವಾಗುತ್ತದೆ. ಅದನ್ನು ಗುತ್ತಿಗೆ ನೀಡುವ ವೇಳೆ ಅಧಿಕಾರಿಗಳು ಪರಿಗಣಿಸಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತ
ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT