ಪಿಎಸ್‌ಐ,ಕಾನ್‌ಸ್ಟೆಬಲ್‌ಗೂ ವಂಚನೆ

ಗುರುವಾರ , ಮಾರ್ಚ್ 21, 2019
32 °C
ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಬಂಧನ ಪ್ರಕರಣ

ಪಿಎಸ್‌ಐ,ಕಾನ್‌ಸ್ಟೆಬಲ್‌ಗೂ ವಂಚನೆ

Published:
Updated:
Prajavani

ಬೆಂಗಳೂರು: ಭೂಕಬಳಿಕೆ, ವಂಚನೆ ಹಾಗೂ ಜೀವ ಬೆದರಿಕೆ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ, ಪೊಲೀಸರು ಹಾಗೂ ಸರ್ಕಾರಿ ನೌಕರರಿಗೂ ವಂಚಿಸಿರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಆಂಧ್ರಪ್ರದೇಶದ ವ್ಯಾಪಾರಿಯೊಬ್ಬರು ಪ್ರಭಾಕರ್ ರೆಡ್ಡಿ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಗೆ ನೀಡಿದ್ದ ದೂರಿನ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ರೆಡ್ಡಿಯವರ ಕೋರಮಂಗಲದಲ್ಲಿರುವ ಕಚೇರಿ ಹಾಗೂ ಎಚ್‌ಎಸ್‌ಆರ್‌ ಲೇಔಟ್, ರಾಜರಾಜೇಶ್ವರಿನಗರ, ಮೈಲಸಂದ್ರದಲ್ಲಿರುವ ಮನೆಗಳ ಮೇಲೆ ದಾಳಿ ಮಾಡಿದ್ದರು. 200ಕ್ಕೂ ಹೆಚ್ಚು ಆಸ್ತಿ ದಾಖಲೆಗಳನ್ನು ಜಪ್ತಿ ಮಾಡಿದ್ದರು.

‘ನಗರದ ವಿವಿಧೆಡೆ ಸರ್ಕಾರಿ ಹಾಗೂ ಖಾಸಗಿ ಜಾಗವನ್ನು ಒತ್ತುವರಿ ಮಾಡಿಕೊಂಡು ನಿವೇಶನ ನಿರ್ಮಿಸುತ್ತಿದ್ದ ಪ್ರಭಾಕರ್ ರೆಡ್ಡಿ, ಅವುಗಳನ್ನು ಮಾರಾಟ ಮಾಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದರು. ಅವರ ವಂಚನೆ ಬಗ್ಗೆ ಕೆಲ ಸಾರ್ವಜನಿಕರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಸಿಸಿಬಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ನಿವೇಶನ ಮಾರುವುದಕ್ಕಾಗಿ ಆರೋಪಿ, ಕಂತಿನಲ್ಲಿ ಹಣ ಕಟ್ಟಲು ಅವಕಾಶ ನೀಡುತ್ತಿದ್ದರು. ಅದೇ ಕಾರಣಕ್ಕೆ ಕೆಲ ಸರ್ಕಾರಿ ನೌಕರರು, ಪೊಲೀಸರು, ಖಾಸಗಿ ಉದ್ಯೋಗಿಗಳು ಹಾಗೂ ನಿವೃತ್ತ ನೌಕರರು ಕಂತಿನಲ್ಲಿ ಹಣ ಕಟ್ಟಿ ನಿವೇಶನ ಕಾಯ್ದಿರಿಸಿದ್ದರು. ಅಂಥವರಿಗೆ ಆರೋಪಿ, ನಿವೇಶನ ನೀಡಿಲ್ಲ. ಹಣವನ್ನೂ ವಾಪಸ್ ಕೊಟ್ಟಿಲ್ಲ’ ಎಂದು ಹೇಳಿದರು.  ‘ಕೆಲ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ಗಳಿಗೂ ಆರೋಪಿ ವಂಚಿಸಿದ್ದಾರೆ. ಅವರೆಲ್ಲ ಈಗಾಗಲೇ ದೂರು ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

156 ಮಂದಿಗೆ ವಂಚನೆ, 8 ಎಫ್‌ಐಆರ್: ‘ಸಾಯಿ ರಿಯಲೇಟರ್ಸ್ ಬಿಲ್ಡರ್ ಮತ್ತು ಸಾಯಿ ಲ್ಯಾಂಡ್ ಡೆವಲಪರ್ಸ್’ ಹೆಸರಿನಲ್ಲಿ ಕೋರಮಂಗಲದಲ್ಲಿ ಕಚೇರಿ ತೆರೆದಿದ್ದ ಪ್ರಭಾಕರ್, ಇದುವರೆಗೂ 156 ಮಂದಿಗೆ ವಂಚಿಸಿದ್ದಾರೆ’ ಎಂದು ಅಧಿಕಾರಿ
ಹೇಳಿದರು.

‘ಪ್ರಭಾಕರ್ ರೆಡ್ಡಿ ಹಾಗೂ ಅವರ ಸಹಚರರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಇದುವರೆಗೂ 8 ಎಫ್‌ಐಆರ್‌ಗಳು ದಾಖಲಾಗಿವೆ’ ಎಂದರು. 

ಶಿಕ್ಷಕರಿಂದ ದೂರು: ‘ಜಿಗಣಿ ಬಳಿಯ ಇಂಡ್ಲವಾಡಿ ಗ್ರಾಮದಲ್ಲಿ ನಿರ್ಮಿಸಿದ್ದ ‘ಸಾಯಿ ಸಿಟಿ ಪೇಸ್ ಬಡಾವಣೆ’ಯಲ್ಲಿ ನಿವೇಶನ ಖರೀದಿಗಾಗಿ ₹5.50 ಲಕ್ಷ ಪಾವತಿಸಿದ್ದೆ. ಹಣ ಪಡೆದಿದ್ದ ಪ್ರಭಾಕರ್ ಇದುವರೆಗೂ ನಿವೇಶನ ನೀಡಿಲ್ಲ’ ಎಂದು ಶಿಕ್ಷಕರೊಬ್ಬರು ಕೋರಮಂಗಲ ಠಾಣೆಗೆ ದೂರು ನೀಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ದೂರು ನೀಡಿರುವ ನಿವೃತ್ತ ನೌಕರ, ‘ಬೆಟ್ಟದಾಸಪುರದ ಚಾಮುಂಡೇಶ್ವರಿ ಲೇಔಟ್‌ನಲ್ಲಿ ನಿವೇಶನ ನೀಡುವುದಾಗಿ ಹೇಳಿ ಪ್ರಭಾಕರ್ ರೆಡ್ಡಿ ವಂಚಿಸಿದ್ದಾರೆ’ ಎಂದು ಆರೋಪಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !