‘ಪ್ರಕಲ್ಪ’ದಲ್ಲಿ ಉಪಾಯಗಳ ಮೇಳೈಕೆ

7

‘ಪ್ರಕಲ್ಪ’ದಲ್ಲಿ ಉಪಾಯಗಳ ಮೇಳೈಕೆ

Published:
Updated:
Prajavani

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರಕಲ್ಪ–2019’ ವಿಜ್ಞಾನ ಮಾದರಿಗಳ ಮೇಳದಲ್ಲಿ ಸೇವಾ ಸುಧಾರಣೆಯ ಮಾರ್ಗೋಪಾಯಗಳಿದ್ದವು. ಇಂಧನ ಸದ್ಬಳಕೆ ಹೆಚ್ಚಿಸುವ ಉಪಾಯಗಳಿದ್ದವು.

ವಿಜ್ಞಾನ ಮತ್ತು ಮಾನವಿಕ ವಿಭಾಗದ ಜಿ.ಪವನ್‌ ಕೋಠಿ ಅವರತಂಡ ಹೆಚ್ಚು ಸೌರಶಕ್ತಿಯನ್ನು  ಉತ್ಪಾದಿಸುವ ಫಲಕದ ಮಾದರಿ ರೂಪಿಸಿತ್ತು. ‘ಇದು ಸೂರ್ಯೋದಯದ ವೇಳೆ ಪೂರ್ವ ದಿಕ್ಕಿಗೆ ವಾಲುತ್ತ, ಮಧ್ಯಾಹ್ನ ಸಮತಲವಾಗಿ ನಿಲ್ಲುತ್ತ ಹಾಗೂ ಸೂರ್ಯಾಸ್ತದ ವೇಳೆ ಪಶ್ಚಿಮಕ್ಕೆ ವಾಲುತ್ತದೆ’ ಎಂದು ಪವನ್‌ ತಿಳಿಸಿದರು.

‘ಇದರಿಂದ ಸೂರ್ಯನ ಕಿರಣಗಳು ಪ್ಯಾನಲ್‌ ಮೇಲೆ ನೇರವಾಗಿ ಬಿದ್ದು, ಸಾಮಾನ್ಯ ಸೌರಫಲಕಕ್ಕಿಂತ, ಈ
ವಿಶೇಷ ಫಲಕ ಶೇ 40ರಷ್ಟು ಹೆಚ್ಚು ಸೌರಶಕ್ತಿಯನ್ನು ಉತ್ಪಾದಿಸುತ್ತದೆ’ ಎಂದು ತಂಡದ ಸದಸ್ಯರು ವಿವರಿಸಿದರು.

ಇದೇ ವಿಭಾಗದ ಕಾರ್ತಿಕ್‌, ಉಷ್ಣಾಂಶ ಮತ್ತು ನೇರಳಾತೀತ ಕಿರಣಗಳನ್ನು ಗ್ರಹಿಸುವ ಸೆನ್ಸಾರ್‌ಗಳನ್ನು ರೂಪಿಸಿ, ಟೊಪ್ಪಿಗೆಯೊಂದಕ್ಕೆ ಜೋಡಿಸಿದ್ದ.

‘ಬಿಸಿಲಲ್ಲಿ ದುಡಿಯುವ ರೈತರು, ಕಾರ್ಮಿಕರು ಇದನ್ನು ಧರಿಸಿದರೆ, ಅವರ ರಕ್ತದ ಒತ್ತಡ, ಹೃದಯ ಬಡಿತ ನಿರ್ದಿಷ್ಟ ತಂತ್ರಾಂಶದಲ್ಲಿ ದಾಖಲಾಗುತ್ತದೆ. ಆರೋಗ್ಯದಲ್ಲಿ ಹೆಚ್ಚಿನ ಏರುಪೇರಾದರೆ, ಎಚ್ಚರಿಕೆಯ ಸೂಚನೆಯ ಶಬ್ದ ಮೊಳಗುತ್ತದೆ. ಆಗ ದುಡಿಮೆಗಾರರು ವಿಶ್ರಾಂತಿಗೆ ತೆರಳಬಹುದು. ವ್ಯಕ್ತಿ ತೀವ್ರತರ ಅಸ್ವಸ್ಥನಾಗಿ ಬಿದ್ದರೆ, ತಕ್ಷಣ ನಿರ್ದಿಷ್ಟ ವೈದ್ಯರಿಗೆ ಸಂದೇಶ ಹೋಗುತ್ತದೆ. ಇದರಿಂದಾಗಿ ತುರ್ತುಚಿಕಿತ್ಸೆಗಳನ್ನು ನೀಡಲು ಅನುಕೂಲವಾಗಲಿದೆ’ ಎಂದು ಕಾರ್ತಿಕ್‌ ವಿವರಣೆ ನೀಡಿದ.

ಆಂಬುಲೆನ್ಸ್‌ಗಳು ಸಂಚಾರ ದಟ್ಟಣೆಯಿಂದ ಸುಲಭವಾಗಿ ಪಾರಾಗಿ, ಆಸ್ಪತ್ರೆಗಳನ್ನು ತಲುಪಲು ವಿದ್ಯಾರ್ಥಿನಿಯರು ಸುಲಭವಾದ ಮಾದರಿಯನ್ನು ಸಿದ್ಧಪಡಿಸಿದ್ದರು.

‘ಆಂಬುಲೆನ್ಸ್‌ ಚಾಲಕ, ಸಂಚಾರ ದಟ್ಟಣೆ ನಿಯಂತ್ರಣ ಕೊಠಡಿ ಹಾಗೂ ಟ್ರಾಫಿಕ್‌ ಸಿಗ್ನಲ್‌ಗಳಿಗೆ ಸಂಪರ್ಕ ಕಲ್ಪಿಸುವ ತಂತ್ರಾಂಶ ರೂಪಿಸಬೇಕು. ಆಗ ಚಾಲಕನೇ ಸಿಗ್ನಲ್‌ ದೀಪಗಳನ್ನು ಮೊಬೈಲ್‌ ತಂತ್ರಾಂಶದ ಮೂಲಕ ಹಸಿರಾಗಿಸಿಕೊಂಡು, ಮುಂದೆ ಸಾಗಬಹುದು’ ಎಂದು ವಿದ್ಯಾರ್ಥಿನಿಯರು ವಿವರಿಸಿದರು.

ವಿನ್ಯಾಸ ವಿಭಾಗದವರು ಛಾಯಾಗ್ರಹಣ, ಉತ್ಪನ್ನ ವಿನ್ಯಾಸ, ಜಾಲತಾಣ ವಿನ್ಯಾಸದ ಪ್ರಾತ್ಯಕ್ಷಿಕೆಗಳನ್ನು
ಪ್ರದರ್ಶನಕ್ಕೆ ಇಟ್ಟಿದ್ದರು. ವಾಸುಶಿಲ್ಪ ವಿಭಾಗದ ವಿದ್ಯಾರ್ಥಿಗಳು ಬೃಹತ್‌ ಕಟ್ಟಡಗಳು, ಆಸ್ಪತ್ರೆಗಳು ಮತ್ತು ದೇವಾಲಯಗಳನ್ನು ನಿರ್ಮಿಸುವ ಬಗ್ಗೆ ಸಣ್ಣ ಪ್ರತಿಕೃತಿಗಳನ್ನು ನಿರ್ಮಿಸಿ, ಆಸಕ್ತರಿಗೆ ಮಾಹಿತಿ ನೀಡಿದರು. ಹಾಸ್ಪಿಟಾಲಿಟಿ ಮತ್ತು ಇವೆಂಟ್‌ ಮ್ಯಾನೇಜ್‌ಮೆಂಟ್‌ ವಿಭಾಗದ ವಿದ್ಯಾರ್ಥಿಗಳು ವಿಮಾನಯಾನದ ಅನುಭವ ನೀಡಲು ಕೃತಕವಾಗಿ ವಿಮಾನದ ಒಳಾಂಗಣ ನಿರ್ಮಿಸಿದ್ದರು.

***

ಮಾದರಿಗಳನ್ನು ರೂಪಿಸಿ ಕಲಿಯುವುದರಿಂದ ಉದ್ಯಮದಲ್ಲಿನ ಸವಾಲುಗಳು ತಿಳಿಯುತ್ತವೆ. ಅವುಗಳಿಗೆ ಪರಿಹಾರ ಹುಡುಕುವ ಚಿಂತನೆ ಮೊಳಕೆಯೊಡೆಯುತ್ತದೆ.

- ಎಂ.ಆರ್‌.ದೊರೆಸ್ವಾಮಿ, ಕುಲಪತಿ, ಪಿಇಎಸ್‌ ವಿಶ್ವವಿದ್ಯಾಲಯ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !