ಶುಕ್ರವಾರ, ನವೆಂಬರ್ 15, 2019
22 °C
ಕಾಂಕ್ರೀಟ್ ತಂತ್ರಜ್ಞಾನದ ರಾಷ್ಟ್ರೀಯ ವಿಚಾರ ಸಂಕಿರಣ

ವೆಚ್ಚ ಕಡಿಮೆ ಮಾಡುವ ಪ್ರಿಕಾಸ್ಟ್‌ ತಂತ್ರಜ್ಞಾನ

Published:
Updated:

ಬೆಂಗಳೂರು: ‘ಕಟ್ಟಡಗಳ ನಿರ್ಮಾಣಕ್ಕೆ ಪ್ರಿಕಾಸ್ಟ್‌ ತಂತ್ರಜ್ಞಾನ ಅಳವಡಿಸಿಕೊಂಡರೆ ಸಮಯ ಮತ್ತು ವೆಚ್ಚ ಎರಡನ್ನೂ ಕಡಿಮೆ ಮಾಡಬಹುದು’ ಎಂದು  ಸ್ಟಾರ್‌ವರ್ಥ್ ಇನ್‌ಫ್ರಾ ಸ್ಟ್ರಕ್ಚರ್ ಆ್ಯಂಡ್ ಕನ್‌ಸ್ಟ್ರಕ್ಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜ್ ಪಿಳ್ಳೈ ಹೇಳಿದರು.

ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್ (ಐಸಿಐ) ಬೆಂಗಳೂರು ಶಾಖೆ ಶನಿವಾರ ಆಯೋಜಿಸಿದ್ದ ಕಾಂಕ್ರೀಟ್ ತಂತ್ರಜ್ಞಾನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪ್ರಿಕಾಸ್ಟ್ ತಂತ್ರಜ್ಞಾನ ಎಂದರೆ ಕಟ್ಟಡಕ್ಕೆ ಬೇಕಿರುವ ಗೋಡೆ, ಕಿಟಕಿ, ಮೆಟ್ಟಿಲು, ತಾರಸಿ ಸೇರಿದಂತೆ ಎಲ್ಲವನ್ನೂ ಕಾರ್ಖಾನೆಯಲ್ಲೇ ಸಿದ್ಧಪಡಿಸಿಕೊಂಡು ತಂದು ಜೋಡಣೆ ಮಾಡುವುದು. ಬಹುಮಹಡಿಗಳನ್ನು ಕಟ್ಟಲು ಈ ತಂತ್ರಜ್ಞಾನ ಹೆಚ್ಚು ಅನುಕೂಲ. ಭಾರತದಲ್ಲಿ ಕೂಡ ಇತ್ತೀಚೆಗೆ ಈ ತಂತ್ರಜ್ಞಾನ ಅಳವಡಿಕೆ ಹೆಚ್ಚುತ್ತಿದೆ’ ಎಂದರು.

‘ಬೆಂಗಳೂರಿನಲ್ಲೂ ನಮ್ಮ ಕಂಪನಿ ಕಾರ್ಖಾನೆ ತೆರೆದಿದೆ. ಹಲವು ಕಟ್ಟಡಗಳನ್ನು ಇದೇ ಮಾದರಿಯಲ್ಲಿ ಕಟ್ಟಲಾಗಿದೆ. ವೇಗವಾಗಿ ಕೆಲಸ ಮುಗಿಸಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಟ್ಟಡಗಳು ಇದೇ ತಂತ್ರಜ್ಞಾನದಲ್ಲಿ ನಿರ್ಮಾಣಗೊಳ್ಳಲಿವೆ. ಹೀಗಾಗಿ, ಯುವ ಎಂಜಿನಿಯರ್‌ಗಳು ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಲಿಮೆಟಿಕ್ ಇಂಡಿಯಾ ಕಂಪನಿಯ ವೈಭವ್ ಸಿಂಗಲ್ ಮಾತನಾಡಿ ‘ಕಟ್ಟಡಗಳ ನಿರ್ಮಾಣಕ್ಕೆ ಇಂದು ಕಾರ್ಮಿಕರ ಕೊರತೆ ಇದೆ. ಪ್ರಿಕಾಸ್ಟ್‌ ತಂತ್ರಜ್ಞಾನ ಬಳಸಿ
ಕೊಂಡರೆ ಕಾರ್ಮಿಕರ ಸಂಖ್ಯೆಯನ್ನು ಶೇ 30ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಗುಣಮಟ್ಟ ಮತ್ತು ವೇಗವಾಗಿ ಕೆಲಸ ಮುಗಿಸಲು ಅನುಕೂಲ’ ಎಂದರು.

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್.ಆರ್. ದೊಡ್ಡಿಹಾಳ್ ವಿಚಾರಸಂಕಿರಣ ಉದ್ಘಾಟಿಸಿದರು.

ಪ್ರತಿಕ್ರಿಯಿಸಿ (+)