ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ಮೀಸಲಾತಿ: ಹೋರಾಟ ಮುಂದುವರಿಸಲು ‘ಅಹಿಂಸಾ’ ನಿರ್ಧಾರ

Last Updated 8 ಜೂನ್ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸಿ-ಎಸ್ಟಿ ನೌಕರರ ಹಿಂಬಡ್ತಿ ರದ್ದು ಆದೇಶ ಮರುಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಜುಲೈ 1ರಂದು ಅರ್ಜಿ ಸಲ್ಲಿಸಲು 'ಅಹಿಂಸಾ' ನಿರ್ಧರಿಸಿದೆ.

ನಗರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅಹಿಂಸಾ ಅಧ್ಯಕ್ಷ ಎಂ. ನಾಗರಾಜ್,ಶೇ 18ರಷ್ಟಿರುವ ಎಸ್‌ಸಿಎಸ್‌ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಕಾನೂನು ರೂಪಿಸಿದೆ.ಅದೇ ರೀತಿಶೇ 82ರಷ್ಟಿರುವ ಇತರ ಸಮುದಾಯಗಳ ನೌಕರರ ಹಿತ ಕಾಯುವ ಕಾನೂನನ್ನೂ ರೂಪಿಸಲು ಒತ್ತಡ ಹೇರಬೇಕಿದೆ ಎಂದರು.

‘ಮುಂದಿನ ತಿಂಗಳು ವಿಧಾನಸಭೆ ಅಧಿವೇಶನ ನಡೆಯಲಿದ್ದು, ಜುಲೈ ಎರಡನೇ ವಾರದಲ್ಲಿ ಬೆಂಗಳೂರಿನಲ್ಲೇ ಪ್ರತಿಭಟನೆ ನಡೆಸುವುದು ಸೂಕ್ತ. 25 ಸಾವಿರಕ್ಕೂ ಹೆಚ್ಚು ನೌಕರರು ಪಾಲ್ಗೊಳ್ಳಬೇಕು. ಎಲ್ಲಾ ಜಿಲ್ಲೆಯಿಂದಲೂ ಅಹಿಂಸಾ ಸಮುದಾಯಗಳ ನೌಕರರು ಬರಬೇಕು’ ಎಂದು ತಿಳಿಸಿದರು.

‘ಸದ್ಯಕ್ಕೆ ಅಹಿಂಸಾ ನೌಕರರ ಸಾಮೂಹಿಕ ರಾಜೀನಾಮೆಯಂತಹ ಹೋರಾಟಗಳನ್ನು ನಡೆಸಲು ಆಗುವುದಿಲ್ಲ. ಮೊದಲ ಹಂತವಾಗಿ ಎಲ್ಲಾ ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿ, ಸಮಸ್ಯೆಯ ಮನವರಿಕೆ ಮಾಡಿಕೊಡಬೇಕು. ಈ ಕೆಲಸಗಳನ್ನು ಜಿಲ್ಲಾ ಸಮಿತಿಗಳು ಮಾಡಬೇಕು’ ಎಂದು ಹೇಳಿದರು.

ಬಡ್ತಿ ಮೀಸಲಾತಿಯಿಂದ ಇತರ ಸಮುದಾಯಗಳಿಗೆ ಆಗುತ್ತಿರುವ ತೊಂದರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ.ಎಲ್ಲಾ ಜಿಲ್ಲೆಗಳ ಅಧ್ಯಕ್ಷರನ್ನು ಒಳಗೊಂಡ ನಿಯೋಗದೊಂದಿಗೆ ದೆಹಲಿಗೆ ತೆರಳಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಅಹಿಂಸಾ ಸಮುದಾಯದ ಶಕ್ತಿ ಏನೆಂಬುದನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ತೋರಿಸಲಾಗಿದೆ. ಅದು ಎಲ್ಲಾ ಜಿಲ್ಲೆಗೂ ವಿಸ್ತರಿಸಬೇಕು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ಅಹಿಂಸಾ ಹೋರಾಟಕ್ಕೆ ಹಿನ್ನಡೆಯಾದ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನಾಗರಾಜ್ ಸಭೆಯ ಆರಂಭದಲ್ಲಿ ಘೋಷಿಸಿದರು. ಸಭೆಯಲ್ಲಿದ್ದ ಎಲ್ಲರೂ ಈ ‍ಪ್ರಸ್ತಾಪವನ್ನು ಹಿಂದಕ್ಕೆ ಪಡೆದು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಮನವಿ ಮಾಡಿದರು. ‘ಅಧ್ಯಕ್ಷ ಸ್ಥಾನ ಬಿಡುವುದಾದರೆ ನಮಗೆಲ್ಲ ವಿಷ ಕೊಡಿ’ ಎಂದೂ ಕೆಲವರು ಹೇಳಿದರು. ಬಳಿಕ ತಮ್ಮ ನಿರ್ಧಾರ ವಾಪಸ್ ಪಡೆಯುವುದಾಗಿ ನಾಗರಾಜ್ ಪ್ರಕಟಿಸಿದರು.

ಖರ್ಗೆ ಸೋಲಿಗೆ ‘ಅಹಿಂಸಾ’ ಕಾರಣ

‘ಕಲಬುರ್ಗಿ ಜಿಲ್ಲೆಯಲ್ಲಿ ಸೋಲಿಲ್ಲದ ಸರದಾರ ಎಂದೇ ಬೀಗುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಹೀನಾಯ ಸೋಲಿಗೆ ಅಹಿಂಸಾ ಸಂಘಟನೆಯ ಹೋರಾಟವೇ ಕಾರಣ’ ಎಂದು ಅಹಿಂಸಾ ಕಲಬುರ್ಗಿ ಜಿಲ್ಲಾ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕದಂ ಹೇಳಿದರು.

‘ಮುಂದಿನ ದಿನಗಳಲ್ಲಿ ಖರ್ಗೆ ಅವರ ಮಗ ಪ್ರಿಯಾಂಕ ಖರ್ಗೆ ಅವರನ್ನೂ ಸೋಲಿಸ‌ಲಾಗುವುದು’ ಎಂದರು.

‘ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಬರುತ್ತಿದೆ. ಇಲ್ಲಿ ಕೂಡಅಹಿಂಸಾ ಒಟ್ಟಾಗುವ ಮೂಲಕ ಶೇ 18ರಷ್ಟು ಮೀಸಲಾತಿ ಪಡೆಯುತ್ತಿರುವ ಸಮುದಾಯದವರು ಯಾವ ಜಿಲ್ಲೆಯಲ್ಲೂ ಅಧ್ಯಕ್ಷರಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT