ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ

ಸಾಮೂಹಿಕ ರಾಷ್ಟ್ರಗೀತೆ, ಕಪ್ಪು ಬಟ್ಟೆ ಪ್ರದರ್ಶನ, ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ
Last Updated 26 ಡಿಸೆಂಬರ್ 2019, 16:15 IST
ಅಕ್ಷರ ಗಾತ್ರ

ಬಾಗಲಕೋಟೆ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಬಾಗಲಕೋಟೆ ಮುಸ್ಲಿಮ್ ಒಕ್ಕೂಟ, ಟಿ‍ಪ್ಪು ಸುಲ್ತಾನ್ ಸಂಘ ಹಾಗೂ ದಲಿತ ಮತ್ತು ಕನ್ನಡಪರ ಸಂಘಟನೆಗಳಿಂದ ಗುರುವಾರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಅಂಜುಮನ್ ಸಂಸ್ಥೆಯಿಂದ ರಾಷ್ಟ್ರ ಧ್ವಜ ಹಿಡಿದು ಕಪ್ಪು ಬಟ್ಟೆ ಪ್ರದರ್ಶಿಸುತ್ತಾ ಜಿಲ್ಲಾಡಳಿತ ಭವನಕ್ಕೆ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಬಂದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ಮೋದಿ ಸರ್ಕಾರ ದೇಶಕೋ ಸತ್ಯಾ ನಾಶ್ ಕಿಯಾ, ಅವಾಜ್ ದೋ ಹಮ್ ಏಕ್ ಹೈ’ ಎಂಬ ಘೋಷಣೆಗಳ ಕೂಗುತ್ತಾ ಸಾಗಿ ಬಂದರು.

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನಾ ಸಭೆ ನಡೆಸಿ ದೇಶದಲ್ಲಿರುವ ಎಲ್ಲರೂ ಒಂದೇ ಎಂದು ಸಾರಲು ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಿದರು. ನಂತರ ಒಕ್ಕೂಟದ ಅಧ್ಯಕ್ಷ ಐ.ಎ.ಬೇಪಾರಿ ನೇತೃತ್ವದಲ್ಲಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿವಿಧ ಮುಖಂಡರು ಮಾತನಾಡಿ, ‘ಎಲ್ಲ ಧರ್ಮದ ಜನರನ್ನು ಸಮಾನವಾಗಿ ಪರಿಗಣಿಸುವುದು ದೇಶದ ಪರಿಕಲ್ಪನೆಯಾಗಿದೆ. ಈ ಕಾಯ್ದೆ ಧರ್ಮವನ್ನು ಪೌರತ್ವದ ಮಾನದಂಡವನ್ನಾಗಿ ಮಾಡುತ್ತದೆ’ ಎಂದು ಆರೋಪಿಸಿದರು.

‘ಧರ್ಮವನ್ನು ಪೌರತ್ವಕ್ಕೆ ಜೋಡಿಸುವುದು ಜಾತ್ಯತೀತತೆಗೆ ವಿರುದ್ಧ. ಪೌರತ್ವ ಸಂವಿಧಾನದ ಮೂಲ ರಚನೆಯ ಒಂದು ಭಾಗ. ಆದರೆ, ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಧರ್ಮ, ಪ್ರದೇಶ, ಜಾತಿ, ಮತ, ಭಾಷೆ ಸೇರಿದಂತೆ ಸ್ವಾತಂತ್ರ್ಯದ ನಿಜವಾದ ಮನೋಭಾವಕ್ಕೆ ವಿರುದ್ಧವಾಗಿದೆ’ ಎಂದರು.

‘ಎಲ್ಲ ಧರ್ಮಗಳ ಕಿರುಕುಳಕ್ಕೊಳಗಾದವರಿಗೆ ಆಶ್ರಯ ಮತ್ತು ರಕ್ಷಣೆ ನೀಡಿದ ರಾಷ್ಟ್ರ ನಮ್ಮದು. ದೇಶಕ್ಕಾಗಿ ಮುಸ್ಲಿಮರು ಪ್ರಾಣತ್ಯಾಗಕ್ಕೂ ಸಿದ್ಧರಿದ್ದಾರೆ. ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶದಲ್ಲಿ ಸಮಾನತೆ ಸಾರಿದೆ. ಆದರೆ, ಅಂತಹ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಬದಲಾಯಿಸಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದ ಬಿಜೆಪಿ ಸರ್ಕಾರ ಮುಸ್ಲಿಮ್ ಸಮುದಾಯ ಗುರಿಯಾಗಿಸಿಕೊಂಡಿದೆ. ಬಿಜೆಪಿ ಸರ್ಕಾರದ ಅಸಂವಿಧಾನಿಕ ನೀತಿ ನಾವೆಲ್ಲ ಖಂಡಿಸುತ್ತೇವೆ. ರಾಷ್ಟ್ರಪತಿ ಇದನ್ನೆಲ್ಲ ಪರಿಗಣಿಸಿ ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಕೇಂದ್ರಕ್ಕೆ ಸೂಚನೆ ನೀಡಬೇಕು’ ಎಂದು ಆಗ್ರಹಿಸಿದರು.

ಟಿಪ್ಪು ಸುಲ್ತಾನ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಲೀಂ ಮೋಮಿನ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದನೂರ, ಸತ್ಯಶೋಧಕ ಸಂಘದ ಪರಶುರಾಮ ಮಹಾರಾಜನವರ, ಒಕ್ಕೂಟದ ಮುಖಂಡರಾದ ಸಿಕಂದರ್ ಅಥಣಿ, ನೂರ್‌ಅಹಮ್ಮದ್ ಪಟ್ಟೇವಾಲ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಒಕ್ಕೂಟದ ಮುಖಂಡರಾದ ಎ.ಎಂ.ಬೆಣ್ಣೂರ, ಎ.ಎಂ.ಮುಲ್ಲಾ, ಎ.ಕೆ.ಪಟೇಲ್, ಹಾಜಿಸಾಬ್ ದಂಡಿನ, ರಿಯಾಜ್‌ಸಾಬ್ ಬೇಪಾರಿ, ಬಿ.ಎಸ್.ಮುದ್ದೇಬಿಹಾಳ, ಎ.ಎಚ್.ಬೇಪಾರಿ, ಎಚ್.ಎಚ್.ಕಲಾದಗಿ, ಎಂ.ಕೆ.ಕಲಾದಗಿ, ಆರ್,ಎಂ.ನಾಲಬಂದ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT