ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆ ಮೈದಾನದಲ್ಲಿ ಕಸ ಸಾಂದ್ರೀಕರಣ ಘಟಕ: ಸ್ಥಳೀಯರು ಹಾಗೂ ವ್ಯಾಪಾರಿಗಳ ಪ್ರತಿಭಟನೆ

ಹುಬ್ಬಳ್ಳಿ ಬೆಂಗೇರಿ ಸಂತೆ ಮೈದಾನ
Last Updated 15 ಡಿಸೆಂಬರ್ 2018, 11:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಬೆಂಗೇರಿ ಸಂತೆ ಮೈದಾನದಲ್ಲಿ ಕಸ ಸಾಂದ್ರೀಕರಣ ಘಟಕ ಆರಂಭಿಸುವುದನ್ನು ವಿರೋಧಿಸಿ ಸ್ಥಳೀಯರು ಹಾಗೂ ವ್ಯಾಪಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಸಾಂದ್ರೀಕರಣ ಘಟಕ ಆರಂಭಿಸಿದರೆ ದುರ್ವಾಸನೆಯಿಂದಾಗಿ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ಜನರು ಸಹ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಇಂದಿರಾ ಕ್ಯಾಂಟೀನ್ ಇರುವುದರಿಂದ ಈ ಸ್ಥಳದಲ್ಲಿ ಸಾಂದ್ರೀಕರಣ ಘಟಕವನ್ನು ಯಾವುದೇ ಕಾರಣಕ್ಕೂ ಆರಂಭಿಸಬಾರದು ಎಂದು ಆಗ್ರಹಿಸಿದರು.

ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗನಿ ವಲಿ ಅಹಮ್ಮದ್ ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸ್ಥಳೀಯ ಜನರಿಗೆ ಯಾವುದೇ ಮಾಹಿತಿ ನೀಡದೆ ಈ ಘಟಕ ಆರಂಭಿಸಲು ಮುಂದಾಗಿರುವುದು ಸರಿಯಲ್ಲ. ಜನ ವಸತಿ ಪ್ರದೇಶ ಇದಾಗಿರುವುದರಿಂದ ಪಾಲಿಕೆ ಇನ್ನೊಮ್ಮೆ ತನ್ನ ನಿರ್ಧಾರವನ್ನು ಪರಿಶೀಲಿಸಬೇಕು ಎಂದರು.

ಇದು ಹಲವು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೂ ಆಗಿರುವುದರಿಂದ ಕಸ ವಿಲೇವಾರಿ ಘಟಕ ಆರಂಭವಾದರೆ ದಟ್ಟಣೆಯೂ ಹೆಚ್ಚಾಗಲಿದೆ ಎಂದರು.

ಎಐಟಿಯುಸಿ ಕಾರ್ಯದರ್ಶಿ ಪೀರಜಾದೆ ಮಾತನಾಡಿ, ಶಾಲೆಯೂ ಸಮೀಪದಲ್ಲಿ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು. ಮನವಿ ಸ್ವೀಕರಿಸಲು ಬಂದ ವಲಯ ಆಯುಕ್ತ ಹಿರೇಮಠ ಅವರನ್ನು ಹೋರಾಟಗಾರರು ವಾಪಸ್ ಕಳುಹಿಸಿದರು. ಕಮಿಷನರ್ ಅವರೇ ಬರಬೇಕು ಎಂದು ಆಗ್ರಹಿಸಿದರು.

‘ಕೈಮುಗಿದು ಏರು ಇದು ಕನ್ನಡದ ತೇರು’ ಆಟೊ ಚಾಲಕರ ಸಂಘದ ನಿಂಗಪ್ಪಣ್ಣ, ಸೂರ್ಯನಗರ ವೆಲ್ಫೇರ್ ಅಸೋಸಿಯೇಷನ್‌ನ ಬಾಬುರಾವ್ ತಾಡೆ ಇದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಗದ್ದಲ ಆಗಬಹುದು ಎಂಬ ಕಾರಣಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT