ಇಲಾಖೆಯ ಸಿಬ್ಬಂದಿಯಷ್ಟು ವೇತನ ನೀಡಿ: ಹೊರಗುತ್ತಿಗೆ ನೌಕರರ ಆಗ್ರಹ

7
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಅನಿರ್ಧಿಷ್ಟಾವಧಿ ಧರಣಿ

ಇಲಾಖೆಯ ಸಿಬ್ಬಂದಿಯಷ್ಟು ವೇತನ ನೀಡಿ: ಹೊರಗುತ್ತಿಗೆ ನೌಕರರ ಆಗ್ರಹ

Published:
Updated:
Prajavani

ಬೆಂಗಳೂರು: ಸಮಾನ ವೇತನ ಮತ್ತು ಸೇವಾ ಭದ್ರತೆ ಒದಗಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ’ದ ಕಾರ್ಯಕರ್ತರು ಮತ್ತು ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

‘ರಾಜ್ಯದಲ್ಲಿ 30 ಸಾವಿರ ಗುತ್ತಿಗೆ ನೌಕರರು ಹಗಲಿರುಳು ಎನ್ನದೇ ದುಡಿಯುತ್ತಿದ್ದಾರೆ. ಆದರೆ, ನಮಗೆ ಇಲಾಖೆಯ ಸಿಬ್ಬಂದಿಯಷ್ಟು ವೇತನ ನೀಡುತ್ತಿಲ್ಲ. ಅವರಂತೆಯೇ ಕೆಲಸ ಮಾಡುತ್ತೇವೆ. ಆದರೂ ವೇತನದಲ್ಲಿ ತಾರತಮ್ಯ ಮಾಡುವುದುದೇಕೆ?’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ದೆಹಲಿ ಮತ್ತು ಹರಿಯಾಣ ಸರ್ಕಾರ ಎಲ್ಲ ಬಗೆಯ ಗುತ್ತಿಗೆ ನೌಕರರಿಗೆ ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿ ಘನತೆಯ ವೇತನ ಹಾಗೂ ಸೇವಾ ಭದ್ರತೆ ಒದಗಿಸಲು ಕ್ರಮಕೈಗೊಂಡಿದೆ. ಅದೇ ರೀತಿಯ ಮಾದರಿಯನ್ನು ಅನುಸರಿಸಿ, ರಾಜ್ಯದಲ್ಲೂ ಗುತ್ತಿಗೆ ನೌಕರರಿಗೆ ನಿವೃತ್ತಿವರೆಗೂ ಸೇವಾ ಭದ್ರತೆ ನೀಡುವ ಕೆಲಸ ಮಾಡಬೇಕಾಗಿದೆ’ ಎಂದು ಮನವಿ
ಮಾಡಿದರು.

‘ಸರ್ಕಾರಿ ನೌಕರರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಜ್ಯೋತಿ ಸಂಜೀವಿನಿ ಯೋಜನೆಯು ಇಲಾಖೆಯಲ್ಲಿಯೇ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ಇಲ್ಲವಾಗಿದೆ. ಅದನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಜೀತ ಪದ್ಧತಿಯ ಪರಿಷ್ಕೃತ ರೂಪದಂತಿರುವ ಗುತ್ತಿಗೆ ಪದ್ಧತಿಯೇ ಅಸಾಂವಿಧಾನಿಕ. ತಮ್ಮ ಜೀವಮಾನದ ಅಮೂಲ್ಯವಾದ ಯೌವ್ವನಾವಸ್ಥೆಯಲ್ಲಿ ದುಡಿಯುವ ಕಾರ್ಮಿಕರನ್ನು ನಂತರದ ವರ್ಷಗಳಲ್ಲಿ ಕೆಲಸದಿಂದ ತೆಗೆದುಹಾಕುವುದು ಅಮಾನವೀಯ. ಮಾದರಿ ಉದ್ಯೋಗದಾತರಾಗಿರಬೇಕಾದ ಸರ್ಕಾರವೇ ಇಂತಹ ಪದ್ಧತಿ ಅಳವಡಿಸಿಕೊಂಡರೇ ಹೇಗೆ’ ಎಂದು ಪ್ರಶ್ನಿಸಿದರು.

‘ಬಜೆಟ್‌ನಲ್ಲೂ ಇಲಾಖೆಗೆ ನಿರಾಸೆ ತಂದಿದೆ. ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಒಳಗುತ್ತಿಗೆ ನೌಕರರನ್ನು ಹೊರಗುತ್ತಿಗೆಗೆ ದೂಡಬಾರದು. ಹಾಲಿ ಗುತ್ತಿಗೆ ವ್ಯವಸ್ಥೆಯಲ್ಲಿರುವ ಹುದ್ದೆಗಳನ್ನು ಕಾಯಂ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !