ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚೋದನಕಾರಿ ಸಂದೇಶ: ಏಳು ತಿಂಗಳಲ್ಲಿ 20 ಮಂದಿ ಬಂಧನ

Last Updated 11 ನವೆಂಬರ್ 2019, 19:40 IST
ಅಕ್ಷರ ಗಾತ್ರ

ಬಾಗಲಕೋಟೆ: ಯುವಕರೇ ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್ ಹೀಗೆ ಸಾಮಾಜಿಕ ಜಾಲತಾಣದ ಬೇರೆ ಬೇರೆ ಆ್ಯಪ್‌ಗಳಲ್ಲಿ ಸಂದೇಶ (ಪೋಸ್ಟ್) ರವಾನಿಸುವಾಗ ಕೊಂಚ ಎಚ್ಚರವಹಿಸಿ..

ನೀವು ಕಳುಹಿಸುವಇಲ್ಲವೇ ಫಾರ್ವರ್ಡ್ ಮಾಡುವ ಸಂದೇಶಗಳು ಸಮಾಜದ ಸಾಮರಸ್ಯ ಹಾಳುಮಾಡಬಹುದು. ಅಂತಹ ಸಂಗತಿಗಳ ಮೇಲೆ ಜಿಲ್ಲೆಯ ಪೊಲೀಸ್ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗ (ಐಟಿ ಸೆಲ್) ಸದಾ ಕಣ್ಣಿಡಲಿದೆ.

ಹೀಗೆ ಪ್ರಚೋದನಕಾರಿ ಪೋಸ್ಟ್‌ಗಳನ್ನು ರವಾನಿಸಿ ಸಾಮಾಜಿಕ ಸ್ವಾಸ್ಥ್ಯ ಕದಡಿದ ಆರೋಪದ ಮೇಲೆ ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಲ್ಲಿ 12 ಪ್ರಕರಣಗಳನ್ನು ದಾಖಲಿಸಿಕೊಂಡು 20 ಜನರನ್ನು ಬಂಧಿಸಲಾಗಿದೆ.

‘ಮನಸ್ಸಿಗೆ ಬಂದಂತೆ ನಿರ್ದಿಷ್ಟ ಸಮುದಾಯ, ಧರ್ಮ, ವ್ಯಕ್ತಿ, ಗುಂಪು, ಮಹಿಳೆ, ಹಿರಿಯರು ಹೀಗೆ ಬೇರೆ ಬೇರೆ ವರ್ಗದವರ ಬಗ್ಗೆ ಅವಹೇಳನಕಾರಿ ಸಂದೇಶ ಕಳುಹಿಸುವುದು. ಅಪಮಾನಕಾರಿ ಚಿತ್ರ, ವಿಡಿಯೊ ಹರಡುವುದು, ಸುಳ್ಳು ಸಂದೇಶ ಕಳುಹಿಸಿ ಬೇರೆಯವರನ್ನು ಪ್ರಚೋದಿಸುವುದು ಕಾನೂನಿನ ಅಡಿ ಅಪರಾಧ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಹೇಳುತ್ತಾರೆ.

ನಾವು ಕಳುಹಿಸುವ ಸಂದೇಶದಿಂದ ಸಾಮಾಜಿಕ ಸ್ವಾಸ್ಥ್ಯ ಹದಗೆಟ್ಟರೆ ಇಲ್ಲವೇ ಕಾನೂನು–ಸುವ್ಯವಸ್ಥೆಗೆ ಭಂಗ ಬಂದರೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಭಾರತೀಯ ದಂಡಸಂಹಿತೆಯ ಕಲಂ 153, 153A, 295, 295A, 505 ಅಡಿ ಕನಿಷ್ಠ 3ರಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎನ್ನುತ್ತಾರೆ.

ಸ್ವಯಂ ಪ್ರೇರಿತ ದೂರು ದಾಖಲು: ‘ಪ್ರಚೋದನಕಾರಿ ಸಂದೇಶದಿಂದ ಅಪಮಾನಕ್ಕೀಡಾದವರೇ ದೂರು ನೀಡಬೇಕೆಂದಿಲ್ಲ. ಪೊಲೀಸರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಿದ್ದೇವೆ. ಕಳೆದ ಎರಡು ತಿಂಗಳಲ್ಲಿ ಇಂತಹ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ’ ಎಂದು ಲೋಕೇಶ್ ಮಾಹಿತಿ ನೀಡುತ್ತಾರೆ.

‘ಮೊದಲೆಲ್ಲಾ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಮಾತ್ರ ಈ ರೀತಿ ಪ್ರಚೋದನಕಾರಿ ಸಂದೇಶ ಹರಡುವ ಪ್ರವೃತ್ತಿ ನಡೆಯುತ್ತಿತ್ತು. ಈಗ ಟಿಕ್‌ಟಾಕ್‌ನಲ್ಲಿ ವಿಡಿಯೊ ಮಾಡಿ ಹರಿಯ ಬಿಡುವ ಕೆಲಸ ನಡೆದಿದೆ. ಪ್ರಶಾಂತವಾದ ತಿಳಿನೀರಿನ ಮೇಲೆ ಕಲ್ಲು ಎಸೆದು ಅಶಾಂತಿಯ ಅಲೆ ಸೃಷ್ಟಿಸುವ ಇಂತಹ ಕಾರ್ಯಗಳನ್ನು ಸಹಿಸೊಲ್ಲ’ ಎಂದು ಎಚ್ಚರಿಕೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT