ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋರೋಗಕ್ಕೆ ರಕ್ಷಕ ಜೀವಕೋಶ ಕಾರಣ!

Last Updated 9 ನವೆಂಬರ್ 2018, 20:21 IST
ಅಕ್ಷರ ಗಾತ್ರ

ಬೆಂಗಳೂರು: ಪರಕೀಯ ಜೀವಿಗಳಿಂದ ದೇಹವನ್ನು ರಕ್ಷಿಸುವ ಒಂದು ವರ್ಗದ ಜೀವಕೋಶಗಳು ವ್ಯಕ್ತಿಯಲ್ಲಿ ಗೀಳು ಗ್ರಸ್ತತೆ ಪ್ರವೃತ್ತಿ (ಅಬ್ಸೆಸಿವ್‌– ಕಂಪಲ್ಸಿವ್‌) ವರ್ತನೆಯಂತಹ ಮನೋ ವ್ಯಾಧಿಗೂ ಕಾರಣವಾಗುತ್ತವೆ.

ಸಾಮಾನ್ಯವಾಗಿ ಮಲ್ಟಿಪಲ್‌ ಸ್ಕಿರೋಸಿಸ್‌ನಂತಹ (ಎಂಎಸ್‌) ಸ್ವಪ್ರತಿರೋಧಕ ಕಾಯಿಲೆ ಇದ್ದವರಲ್ಲಿ ಇಂತಹ ವರ್ತನೆ ಕಂಡು ಬರುತ್ತದೆ. ಆದರೆ, ಕೆಲವು ಬಗೆಯ ಪ್ರತಿಜೀವಿ ರಕ್ಷಕ ಜೀವಕೋಶಗಳೇ ಅಬ್ಸೆಸಿವ್‌– ಕಂಪಲ್ಸಿವ್‌ ವರ್ತನೆಗೆ ಕಾರಣ ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಹೊಸ ಅಧ್ಯಯನದ ಮೂಲಕ ಪತ್ತೆ ಮಾಡಿದ್ದಾರೆ.

ಸ್ವಯಂಪ್ರತಿರೋಧಕ ಕಾಯಿಲೆಯಿಂದ (ಆಟೋಇಮ್ಯೂನ್‌ ಡಿಸ್‌ ಆರ್ಡಾರ್‌) ದೇಹದಲ್ಲಿ ನಿರೋಧಕ ವ್ಯವಸ್ಥೆಯೇ ವಿಲಕ್ಷಣಗೊಳ್ಳುತ್ತದೆ ಮತ್ತು ಆರೋಗ್ಯವಂತ ಜೀವಕೋಶಗಳ ಮೇಲೆ ದಾಳಿ ನಡೆಸುತ್ತದೆ. ಇದಕ್ಕೆ ಚಿಕಿತ್ಸೆ ನೀಡಿ ಸರಿಪಡಿಸುವುದು ಕಷ್ಟದ ಕೆಲಸ.

ಮಲ್ಟಿಪಲ್‌ ಸ್ಕಿರೋಸಿಸ್‌ ಅನ್ನು ಗುಣಪಡಿಸಲು ಸಾಧ್ಯವಿಲ್ಲ. ಇದರಿಂದ ವಿಶ್ವದಾದ್ಯಂತ 20 ಲಕ್ಷಕ್ಕೂ ಅಧಿಕ ಜನ ಬಳಲುತ್ತಿದ್ದಾರೆ. ಈ ಕಾಯಿಲೆ ಇದ್ದವರಲ್ಲಿ ಒತ್ತಡ, ಖಿನ್ನತೆ ಮತ್ತುಅಬ್ಸೆಸಿವ್‌– ಕಂಪಲ್ಸಿವ್‌ ಲಕ್ಷಣಗಳು ಸಾಮಾನ್ಯ. ಆದರೂ, ಈ ಬಗೆಯ ಕಾಯಿಲೆಗೂ ಪ್ರತಿರೋಧಕ ವ್ಯವಸ್ಥೆಗೂ ಇರುವ ಸಂಬಂಧ ಇಲ್ಲಿಯವರೆಗೆ ಸ್ಪಷ್ಟವಾಗಿರಲಿಲ್ಲ. ಐಐಎಸ್‌ಸಿ ವಿಜ್ಞಾನಿಗಳು ಮೊದಲ ಬಾರಿಗೆ ಈ ನಿಗೂಢತೆಯನ್ನು ಅನಾವರಣಗೊಳಿಸಿದ್ದಾರೆ.

ಮಲ್ಟಿಪಲ್‌ ಸ್ಕಿರೋಸಿಸ್‌ ಲಕ್ಷಣಗಳನ್ನು ಹೊಂದಿದ್ದ ಇಲಿಗಳನ್ನು ಸಂಶೋಧನೆಗೆ ಒಳಪಡಿಸಿದಾಗ, ರಹಸ್ಯ ಅನಾವರಣಗೊಂಡಿತು. ಅಬ್ಸೆಸಿವ್–ಕಂಪಲ್ಸಿವ್‌ ವರ್ತನೆಗೆ ಪ್ರೇರೇಪಿಸುವ ದುಗ್ಧ ಕೋಶ ಟಿಎಚ್‌ 17 ಇಲಿಯ ಮಿದುಳಿನೊಳಗೆ ತೂರಿಕೊಂಡು ಅಂತರ್‌ನಿರ್ಬಂಧ ವರ್ತನೆಯನ್ನು ನಿಯಂತ್ರಿಸುವ ನರ ಮಂಡಲವನ್ನು ಹಾಳುಗೆಡವಿ ಹಾಕಿತ್ತು ಎಂದು ಅಧ್ಯಯನ ನಡೆಸಿದ ತಂಡ ಪತ್ತೆ ಮಾಡಿದೆ ಎಂದು ಸಂಸ್ಥೆ ಹೇಳಿದೆ.

ಈ ಅಧ್ಯಯನವು ಫ್ರಾಂಟಿಯರ್‌ ಇನ್‌ ಇಮ್ಯುನಾಲಜಿ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಜೀವಕೋಶಗಳ ವಿಚಿತ್ರ ವರ್ತನೆಯನ್ನು ಪತ್ತೆ ಮಾಡಿದವರು ಅಣು ಜೀವಭೌತ ವಿಜ್ಞಾನ ವಿಭಾಗದ ಅವಧೇಶ್‌ ಸುರೋಲಿಯಾ ಮತ್ತು ತಂಡ. ಅಬ್ಸೆಸಿವ್‌– ಕಂಪಲ್ಸಿವ್‌ ಇದ್ದವರಲ್ಲಿ ಆಲೋಚನೆಗಳು, ಚಿಂತನೆಗಳು, ಸಂವೇದನೆಗಳು ಅನಿಯಂತ್ರಿತವಾಗಿ ಪುನರಾವರ್ತನೆಗೊಳ್ಳುತ್ತವೆ. ಅಲ್ಲದೆ, ಈ ವ್ಯಕ್ತಿಗಳು ಎಲ್ಲವನ್ನೂ ಅತಿರೇಕದಿಂದ ಮೇಲಿಂದ ಮೇಲೆ ಮಾಡುತ್ತಲೇ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT