ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟ ವಿಶೇಷ ಭತ್ಯೆ ಕಿತ್ತುಕೊಳ್ಳುತ್ತಿದೆ ಸರ್ಕಾರ

₹1.93 ಕೋಟಿ ವಸೂಲಿಗೆ ಮುಂದಾದ ಪದವಿಪೂರ್ವ ಶಿಕ್ಷಣ ಇಲಾಖೆ
Last Updated 11 ನವೆಂಬರ್ 2018, 19:14 IST
ಅಕ್ಷರ ಗಾತ್ರ

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯು ಉಪನ್ಯಾಸಕರಿಗೆ ನೀಡಿದ ವಿಶೇಷ ಭತ್ಯೆಯನ್ನು ಹಿಂದಕ್ಕೆ ಪಡೆಯಲು ಆದೇಶ ಹೊರಡಿಸಿದೆ. ಈ ಕ್ರಮಕ್ಕೆ ಉಪನ್ಯಾಸಕರ ಸಮೂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

2008ರ ಅಗಸ್ಟ್‌ 1ರ ನಂತರ ನೇಮಕಗೊಂಡ 1,896 ಉಪನ್ಯಾಸಕರಿಗೆ ಪಾವತಿ ಮಾಡಿರುವ ₹1.93 ಕೋಟಿ ವಿಶೇಷ ಭತ್ಯೆಯ ಕುರಿತು ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ, ವಿಶೇಷ ಭತ್ಯೆ ಮಂಜೂರು ಮಾಡಲು ಅವಕಾಶ ಇಲ್ಲ ಎಂದು ಆರ್ಥಿಕ ಇಲಾಖೆ ಕೂಡಾ ಹೇಳಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಭತ್ಯೆಯನ್ನು ಹಿಂಪಡೆಯುವುದು ಅನಿವಾರ್ಯ ಎಂದು ಇಲಾಖೆ ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

‘ರಾಜ್ಯ ಸರ್ಕಾರವು 2006ರ ಏಪ್ರಿಲ್‌ನಿಂದ ಅನ್ವಯವಾಗುವಂತೆ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ತಿಂಗಳಿಗೆ ₹300, ಪ್ರೌಢಶಾಲಾ ಶಿಕ್ಷಕರಿಗೆ ₹400 ಮತ್ತು ಕಾಲೇಜು ಉಪನ್ಯಾಸಕರಿಗೆ ₹500 ವಿಶೇಷ ಭತ್ಯೆ ನೀಡಲು ಆದೇಶ ಹೊರಡಿಸಿತ್ತು. 2008ರ ಆಗಸ್ಟ್‌ 29ರಂದು ಹೊರಡಿಸಿದ ಮತ್ತೊಂದು ಆದೇಶದಲ್ಲಿ, 2008 ಆಗಸ್ಟ್‌ 1ರ ನಂತರ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರು ಈ ಭತ್ಯೆಗೆ ಅರ್ಹರಲ್ಲ ಎಂದು ಹೇಳಿತ್ತು. ಆ ಆದೇಶವನ್ನು ಪ್ರೌಢಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರಿಗೂ ನಿಯಮಬಾಹಿರವಾಗಿ ಅನ್ವಯಿಸಿ, 10 ವರ್ಷಗಳಿಂದ ಪಡೆದಿರುವ ಭತ್ಯೆಯನ್ನು ವಸೂಲಿ ಮಾಡಲಾಗುತ್ತಿದೆ’ ಎಂದು ಉಪನ್ಯಾಸಕರೊಬ್ಬರು ದೂರಿದರು.

ಇಲಾಖೆಯ ಈ ಕ್ರಮವನ್ನು ಖಂಡಿಸಿ, ಕೆಲವು ಉಪನ್ಯಾಸಕರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಮಂಡಳಿಯು ಉಪನ್ಯಾಸಕರ ಪರ ಆದೇಶ ನೀಡಿದೆ. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಗಳು ವಜಾಗೊಂಡಿವೆ. ಈಗ, ಇಲಾಖೆ ‘ಈ ಆದೇಶ ಅರ್ಜಿದಾರ ಉಪನ್ಯಾಸಕರಿಗೆ ಮಾತ್ರ ಸೀಮಿತ’ ಎಂದು ವಾದಿಸುತ್ತಿದ್ದು, ಉಳಿದ ಉಪನ್ಯಾಸಕರ ವೇತನದಲ್ಲಿ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸುತ್ತಿದೆ.

‘ವಿಶೇಷ ಭತ್ಯೆ ಪಡೆದ ಪ್ರಕರಣಗಳನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ಪತ್ತೆ ಹಚ್ಚಬೇಕು. ಈ ವಿಷಯವನ್ನು ಸೂಕ್ಷ್ಮ ಮತ್ತು ಜರೂರು ಎಂದು ಭಾವಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) ಅಗತ್ಯ ಕ್ರಮ ಕೈಗೊಳ್ಳಬೇಕು. ವಸೂಲಾತಿಯಲ್ಲಿ ವಿಳಂಬ ಮಾಡಿದರೆ ಅಥವಾ ಅಗತ್ಯ ಕ್ರಮ ವಹಿಸದಿದ್ದರೆ ಪ್ರಾಂಶುಪಾಲರು ಮತ್ತು ಡಿಡಿಪಿಐ ಅವರನ್ನೇ ಹೊಣೆ ಮಾಡುತ್ತೇವೆ’ ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

‘2008ರಿಂದ ಸರಾಸರಿ ₹10,000 ಮೊತ್ತವನ್ನು ಉಪನ್ಯಾಸಕರು ವಿಶೇಷ ಭತ್ಯೆಯಾಗಿ ಪಡೆದಿದ್ದಾರೆ. ಕೆಲವರು ಇದನ್ನು ನಿರಾಕರಿಸಿದ್ದಾರೆ. ಗರಿಷ್ಠ ₹60,000 ಭತ್ಯೆ ಪಡೆದವರೂ ಇದ್ದಾರೆ. ಮೂರು ತಿಂಗಳಿನಿಂದ, ಭತ್ಯೆಯ ಮೊತ್ತ ಹಿಂಪಡೆಯುವ
ಸಲುವಾಗಿ ವೇತನದಲ್ಲಿ ಕನಿಷ್ಠ ₹500ರಿಂದ ₹10,000ದವರೆಗೂ ಕಡಿತ ಮಾಡುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕ
ರೊಬ್ಬರು ತಿಳಿಸಿದರು.

‘ಬೆಳೆಯುತ್ತಿದೆ ಕಡತಗಳ ಬೆಟ್ಟ’

‘ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿ.ಶಿಖಾ ಅವರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿಯಾಗಿಯೂ ಹೆಚ್ಚುವರಿ ಹೊರೆಯನ್ನು ನಿಭಾಯಿಸಬೇಕಾಗಿದೆ. ಅವರು ಶಿಕ್ಷಣ ಇಲಾಖೆಯ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಹೆಚ್ಚು ಆಸಕ್ತಿ ತೋರುತ್ತಿಲ್ಲ’ ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಲೇಜುಗಳ ನಿರ್ವಹಣೆಯ ನೂರಾರು ಕಡತಗಳು, ಉಪನ್ಯಾಸಕರ ವೇತನ ಬಡ್ತಿ, ವರ್ಗಾವಣೆ, ಅನುದಾನ ಹಂಚಿಕೆ, ಪ್ರಾಂಶುಪಾಲರ ಹುದ್ದೆಗಳ ಭರ್ತಿ, ಪಿ.ಯು. ಪರೀಕ್ಷೆ ತಯಾರಿ ಕುರಿತ ಹತ್ತಾರು ಕಾರ್ಯಗಳು ನನೆಗುದಿಗೆ ಬಿದ್ದಿವೆ. ವಿಧಾನ ಪರಿಷತ್‌ ಸದಸ್ಯರು ಮತ್ತು ಸಭಾಪತಿ ಜೊತೆ ಸಭೆ ನಡೆಸಿ ಈ ಕುರಿತು ಚರ್ಚಿಸಿದ್ದೆವು. ಈ ಚರ್ಚೆಯ ಮಾಹಿತಿಯನ್ನು ಉಪನ್ಯಾಸಕರಿಗೆ ತಿಳಿಸಿದ್ದೆವು. ಅದನ್ನೇ, ಮಹಾಪರಾಧ ಎಂದು ಆರೋಪಿಸಿ ಪರಿಷತ್‌ ಸದಸ್ಯರು, ಸಂಘದ ಪದಾಧಿಕಾರಿಗಳಿಗೆ ನೋಟಿಸ್‌ ನೀಡಿದ್ದಾರೆ’ ಎಂದು ಅತೃಪ್ತಿ ಹೊರಹಾಕಿದರು.

***

2006ರ ಆದೇಶದ ₹300 ವಿಶೇಷ ಭತ್ಯೆಯು ಶಿಕ್ಷಕರ ಮೂಲವೇತನದಲ್ಲಿ ಸೇರ್ಪಡೆಯಾಗಿದೆ. ₹500ರ ವಿಶೇಷ ಭತ್ಯೆ ವಿಲೀನ ಮಾಡಬೇಕು.

- ಪ್ರಧಾನ ಕಾರ್ಯದರ್ಶಿ, ಪಿ.ಯು.ಕಾಲೇಜುಗಳ ಉಪನ್ಯಾಸಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT