ಸಿಇಟಿ ಶುಲ್ಕದ ಹಣ ವಾಪಸ್‌ ಮಾಡಿ

ಮಂಗಳವಾರ, ಏಪ್ರಿಲ್ 23, 2019
27 °C
ಸಿಇಟಿಗಿಂತ ಮೊದಲೇ ಪಿಯು ಫಲಿತಾಂಶ ಪ್ರಕಟ: ತಿಮ್ಮಯ್ಯ ಪುರ್ಲೆ ಆಕ್ಷೇಪ

ಸಿಇಟಿ ಶುಲ್ಕದ ಹಣ ವಾಪಸ್‌ ಮಾಡಿ

Published:
Updated:

ಬೆಂಗಳೂರು: ಸಿಇಟಿ ಪರೀಕ್ಷೆಗಿಂತ ಮೊದಲೇ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಿಸಿರುವುದರಿಂದ ವಿಜ್ಞಾನದ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅಧ್ಯಾಪಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.

 ಪಿಯುಸಿಯಲ್ಲಿ ಅನುತ್ತೀರ್ಣರಾಗಿರುವ ಮತ್ತು ಕಡಿಮೆ ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗುವ ಸಾಧ್ಯತೆ ಕಡಿಮೆ. ಆದ್ದರಿಂದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಗಾಗಿ ಪಾವತಿಸಿರುವ ಶುಲ್ಕವನ್ನು ವಾಪಸ್ ಮಾಡಬೇಕು ಎಂದು ಪುರ್ಲೆ ಒತ್ತಾಯಿಸಿದರು.

ಶುಲ್ಕವನ್ನು ವಾಪಸ್‌ ನೀಡದೇ ಇದ್ದರೆ, ಪೋಷಕರು ಮತ್ತು ವಿದ್ಯಾರ್ಥಿಗಳ ಪರವಾಗಿ ರಾಜ್ಯದೆಲ್ಲೆಡೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಈ ಬಾರಿ ಮೌಲ್ಯಮಾಪನದ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಅಂಕಗಳನ್ನು ಸರ್ವರ್‌ಗೆ ಹಾಕಬೇಕು ಎಂಬ ಒತ್ತಡ ಇದ್ದ ಕಾರಣ ಅಧ್ಯಾಪಕರು ಮೌಲ್ಯಮಾಪನವನ್ನು ಒತ್ತಡದಿಂದ ಮಾಡಿದ್ದಾರೆ. ಬೇಗ ಫಲಿತಾಂಶ ಪ್ರಕಟಿಸಬೇಕು ಎಂಬ ಅಧಿಕಾರಿಗಳ ಆಗ್ರಹದ ಪರಿಣಾಮ ಅಧ್ಯಾಪಕರು ಶಾಂತ ಚಿತ್ತರಾಗಿ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ನಡೆಸಲು ಸಾಧ್ಯವಾಗಿಲ್ಲ ಎಂದು ಅವರು ದೂರಿದರು.

ವಿಜ್ಞಾನ ವಿಷಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದರಿಂದ ಸಿಇಟಿ ಮತ್ತು ನೀಟ್‌ ಪರೀಕ್ಷೆಗೆ ಹಾಜರಾಗಲು ರಾಜ್ಯದ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಾರೆ. ಇದರಿಂದ ಅನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪುರ್ಲೆ ಹೇಳಿದರು.

ಸಂಭಾವನೆ ಶೇ 30 ಹೆಚ್ಚಿಸಬೇಕು: ಉತ್ತರ ಪತ್ರಿಕೆಗಳ ಅಂಕಗಳನ್ನು ಆನ್‌ಲೈನ್‌ ಮೂಲಕ ಸರ್ವರ್‌ಗೆ ಸೇರಿಸುವ ಕೆಲಸವನ್ನು ಅಧ್ಯಾಪಕರೇ ಮಾಡುವುದರಿಂದ ಮೌಲ್ಯಮಾಪನ ಸಂಭಾವನೆಯನ್ನು ಶೇ 10 ರ ಬದಲು ಶೇ 30 ರಷ್ಟು ಏರಿಕೆ ಮಾಡಬೇಕು ಎಂದೂ ಅವರು ಒತ್ತಾಯಿಸಿದರು.

ಪ್ರತಿ ಮೂರು ವರ್ಷಕ್ಕೆ ಒಮ್ಮೆ ಮೌಲ್ಯಮಾಪನದ ಸಂಭಾವನೆಯನ್ನು ಪರಿಷ್ಕರಿಸಲಾಗುತ್ತದೆ. ಹಿಂದಿನ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಶೇ 10 ರಷ್ಟು ಪರಿಷ್ಕರಣೆಗೆ ಒಪ್ಪಿದ್ದರು. ಈಗ ಕಾರ್ಯಭಾರ ಹೆಚ್ಚಾಗಿರುವುದರಿಂದ ಶೇ 30 ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !