ಮೇಡಂ, ಇಂಥ ರಸ್ತೆಯಲ್ಲಿ ಹೇಗೆ ಓಡಾಡ್ತೀರಿ?

6

ಮೇಡಂ, ಇಂಥ ರಸ್ತೆಯಲ್ಲಿ ಹೇಗೆ ಓಡಾಡ್ತೀರಿ?

Published:
Updated:

ನೂತನ ಮೇಯರ್‌ ಗಂಗಾಂಬಿಕೆ ಅವರಿಗೆ ಅಹವಾಲು ಹೇಳಿಕೊಳ್ಳಲು ‘ಪ್ರಜಾವಾಣಿ’ ಕಲ್ಪಿಸಿರುವ ಅವಕಾಶಕ್ಕೆ ಸಾರ್ವಜನಿಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದಿರುವ ದೂರುಗಳಲ್ಲಿ ಕಸ ವಿಲೇವಾರಿ, ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿವೆ. ರಾಜಕಾಲುವೆಯ ಹೂಳು ಎತ್ತದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬೀದಿನಾಯಿಗಳ ಹಾವಳಿ ತಪ್ಪಿಸುವಂತೆ ಮನವಿಗಳು ಬಂದಿವೆ. ಮೇಯರ್‌ಗೆ ಜನರು ಸಲ್ಲಿಸಿರುವ ಕೆಲವು ಅಹವಾಲುಗಳು ಇಲ್ಲಿವೆ.

ಬಡಾವಣೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ

ನಗರದ ಹೊಸ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ಇನ್ನೂ ಒದಗಿಸಿಲ್ಲ. ರಸ್ತೆಗಳು ಡಾಂಬರ್‌ ಕಂಡಿಲ್ಲ. ಬೀದಿ ದೀಪಗಳು ಉರಿಯುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಂಡಿಲ್ಲ. ಹೀಗೆ ನೂರಾರು ಸಮಸ್ಯೆಗಳಿವೆ. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಬಡಾವಣೆಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡಿ.

ಮಂಜುನಾಥ್ ಸಿ.ನೆಟ್ಕಲ್, ಎಂಎಲ್‌ಎ ಮಹಿಳಾ ಪದವಿಪೂರ್ವ ಕಾಲೇಜು

ಪೌರಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳಿ

ಪೌರಕಾರ್ಮಿಕರು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ. ಅವರಿಗೆ ಸಮಯಕ್ಕೆ ಸರಿಯಾಗಿ ವೇತನ ದೊರೆಯುವಂತೆ ವ್ಯವಸ್ಥೆ ಮಾಡಿದರೆ, ಖುಷಿಯಿಂದ ನಗರವನ್ನು ಶುಚಿಯಾಗಿಡುವಲ್ಲಿ ಮುತುವರ್ಜಿ ವಹಿಸುತ್ತಾರೆ. 

ಪುಷ್ಪಾ ಶ್ರೀರಾಮ್, ಶಿಕ್ಷಕಿ, ಪ್ಯಾಲೇಸ್ ಗುಟ್ಟಹಳ್ಳಿ

ಹದಗೆಟ್ಟ ರಸ್ತೆಗಳ ದುರಸ್ತಿ ಮಾಡಿ

ನಗರದ ಹಲವೆಡೆ ರಸ್ತೆಗಳು ಹದಗೆಟ್ಟಿವೆ. ಕೆಲವು ರಸ್ತೆಗಳು ಡಾಂಬರು, ಕಾಂಕ್ರಿಟ್ ಕಂಡಿಲ್ಲ. ಕಾಮಗಾರಿಯೂ ಪೂರ್ಣಗೊಂಡಿಲ್ಲ. ವಾಹನಗಳು ಸಂಚಾರಿಸುವುದಿರಲಿ, ಜನ ನಡೆದಾಡಲು ಸಹ ಕಷ್ಟವಾಗುತ್ತಿದೆ. ಈ ಕೂಡಲೇ ಕ್ರಮಕೈಗೊಳ್ಳ

ಹುಸೇನಪ್ಪ, ಬೆಂಗಳೂರು 

ಬೀದಿನಾಯಿಗಳ ಹಾವಳಿ ತಪ್ಪಿಸಿ

ಲಗ್ಗೆರೆಯ ಮುನೇಶ್ವರ ಬಡಾವಣೆಯ 10ನೇ ಅಡ್ಡರಸ್ತೆಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ವಾರ್ಡ್‌ ಸದಸ್ಯರಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ತಕ್ಷಣ ಈ ಬಗ್ಗೆ ಕ್ರಮವಹಿಸಿ.

 ನಾರಾಯಣ ಟಿ, ಮುನೇಶ್ವರ ಬಡಾವಣೆ

ಕಾಮಗಾರಿ ಪೂರ್ಣಗೊಳಿಸಿ

ಬಳೆಪೇಟೆಯಲ್ಲಿ ಒಳಚರಂಡಿಯ ಪೈಪ್‌ಗಳನ್ನು ಬದಲಾಯಿಸಿ ಒಂದು ವರ್ಷ ಕಳೆದರೂ, ಚರಂಡಿಯ ಕಾಮಗಾರಿ ಪೂರ್ಣಗೊಳಿಸಿಲ್ಲ. ಬಡಾವಣೆಯ ಅಂಗಡಿಗಳ ಮುಂದೆ ಕಸದ ರಾಶಿ‌ಯೇ ಇದೆ. ಮಕ್ಕಳಿಗೆ, ವಯಸ್ಸಾದವರಿಗೆ ಓಡಾಡಲು ಸರಿಯಾದ ರಸ್ತೆಗಳಿಲ್ಲ. ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಬೇಕು.

ಹರಿಚರಣ್, ಬಳೇಪೇಟೆ

ಮೈದಾನವನ್ನು ಸಂರಕ್ಷಿಸಿ

ಆರ್.ಟಿ.ನಗರದಲ್ಲಿರುವ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಕ್ರೀಡೆಗಳು ನಡೆಯುತ್ತವೆ. ಆದರೆ, ಹಲವು ದಿನಗಳಿಂದ ಇಲ್ಲಿ ಪಾಲಿಕೆಯ ಕಸ ಸಂಗ್ರಹದ ವಾಹನಗಳನ್ನು ನಿಲ್ಲಿಸುತ್ತಿರುವ ಕಾರಣ ಕೆಟ್ಟ ವಾಸನೆ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿ.

ಸಂತೋಷ್, ಗಂಗಾನಗರ

ಒಳಚರಂಡಿ ದುರಸ್ತಿ ಮಾಡಿ

ಮೈಕೋ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಮನೆಯ ಪಕ್ಕದಲ್ಲಿಯೇ ಚರಂಡಿ ನೀರು ನಿಲ್ಲುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ. ಈ ಬಗ್ಗೆ ಶೀಘ್ರ ಗಮನವಹಿಸಿ.

ಭಾರತಿ, ಮೈಕೋ ಬಡಾವಣೆ,‌ ಹೊಂಗಸಂದ್ರ

ರೈಲ್ವೆ ಕೆಳ ಸೇತುವೆ ಸಮಸ್ಯೆ

ಕೊಡಿಗೇಹಳ್ಳಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ದಿನೇ ದಿನೇ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಕೂಡಲೇ ಈ ಕಾಮಗಾರಿ ಪೂರ್ಣಗೊಳಿಸಿ. ತಿಂಡ್ಲು, ವಿರೂಪಾಕ್ಷಪುರ, ವಿದ್ಯಾರಣ್ಯಪುರ ಜನತೆಯ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು.

ಡಾ. ಚಿದಾನಂದ,ದೇವಸಮುದ್ರ, ಕೊಡಿಗೇಹಳ್ಳಿ

ಸ್ಥಳೀಯರಿಗೆ ಆದ್ಯತೆ ನೀಡಿ

ನಗರದ ಐಟಿ–ಬಿಟಿ ಸಂಸ್ಥೆಗಳಲ್ಲಿ ಉದ್ಯೋಗ ನೀಡಲು, ಬಹುತೇಕ ಅನ್ಯಭಾಷಿಕರಿಗೆ ಮಣೆ ಹಾಕುತ್ತಿರುವುದು ಬೇಸರದ ಸಂಗತಿ. ಎಲ್ಲ ಅರ್ಹತೆಗಳಿದ್ದರೂ ಕಂಪನಿಯವರು ಸ್ಥಳೀಯರನ್ನು ನಿರ್ಲಕ್ಷಿಸುತ್ತಿದ್ದಾರೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವಂತೆ
ಕ್ರಮಕೈಗೊಳ್ಳಿ.

ಸು.ಜಗದೀಶ್, ಬನ್ನೇರುಘಟ್ಟ

ಜಯಣ್ಣ ಬಡಾವಣೆಗಿಲ್ಲ ಸೌಲಭ್ಯ

ರಾಜರಾಜೇಶ್ವರಿ ನಗರದ ಹಲವು ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಆದರೆ, ಕೂಗಳತೆ ದೂರದಲ್ಲಿರುವ ಜಯಣ್ಣ ಬಡಾವಣೆಗೆ ಮಾತ್ರ ಅಭಿವೃದ್ಧಿ ಭಾಗ್ಯ ಸಿಕ್ಕಿಲ್ಲ. ಕಳೆದ ಏಳು ವರ್ಷಗಳಿಂದ ರಸ್ತೆಗಳು ಡಾಂಬರ್‌ ಕಂಡಿಲ್ಲ. ದ್ವಿಚಕ್ರ ವಾಹನ ಸವಾರರು ಸಾಕಷ್ಟು ಬಾರಿ ಬಿದ್ದಿದ್ದಾರೆ. ಮಕ್ಕಳು, ವಯೋವೃದ್ಧರಿಗೆ ಓಡಾಡಲೂ ಸಾಧ್ಯವಾಗದಂತಹ ರೀತಿಯಲ್ಲಿ ಗುಂಡಿಗಳು ಬಿದ್ದಿವೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಒಂದೊಂದು ರೀತಿಯ ಸಬೂಬು ಹೇಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಕೊಳ್ಳಿ.

ಗೋಪಾಲ್‌ ರಾವ್‌, ಜಯಣ್ಣ ಬಡಾವಣೆ

ಬೀದಿ ವ್ಯಾಪಾರಿಗಳ ಪಾಲಾಗಿವೆ

ಹೆಬ್ಬಾಳ-ನಾಗೇನಹಳ್ಳಿ ಮುಖ್ಯರಸ್ತೆ ಅಗೆಯಲಾಗಿದ್ದು, ಜಲ್ಲಿಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಳೆದ ಮೂರು ತಿಂಗಳಿನಿಂದ ಓಡಾಡಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ, ಇನ್ನೂ ಡಾಂಬರ್‌ ಹಾಕಿಲ್ಲ. ನಾಗೇನಹಳ್ಳಿ ರಸ್ತೆಗಳಲ್ಲಿ ಕಸ ನಿರ್ವಹಣೆ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಇಲ್ಲಿನ ಪಾದಚಾರಿ ಮಾರ್ಗಗಳು ಬೀದಿ ವ್ಯಾಪಾರಿಗಳ ಪಾಲಾಗಿವೆ. ಸಾರ್ವಜನಿಕರು ಸುಗಮವಾಗಿ ಓಡಾಡಲು ಅನಾನುಕೂಲವಾಗಿದೆ. ಈ ತೊಂದರೆಗಳ ಬಗ್ಗೆ ಆದಷ್ಟು ಬೇಗ ಗಮನಹರಿಸಬೇಕು.

ಪಿ.ಆರ್.ಮಂಜುಳಾ, ವಿಶ್ವನಾಥ ನಾಗೇನಹಳ್ಳಿ

ವೇತನದ ಬಗ್ಗೆ ಕ್ರಮವಹಿಸಿ

ನಿಗದಿತ ಸಮಯಕ್ಕೆ ಪೌರಕಾರ್ಮಿಕರಿಗೆ ವೇತನ ಪಾವತಿಯಾಗದ ಕಾರಣ, ಅವರು ಕೆಲಸದಲ್ಲಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಆದ್ದರಿಂದ ಗುತ್ತಿಗೆದಾರರು ಪೌರಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಗೆ ಸೂಕ್ತ ಕ್ರಮಕೈಗೊಳ್ಳಿ. 

ನಿಂಗೇಗೌಡ, ವಿಜಯನಗರ

ಸಿಗ್ನಲ್‌ ಅಳವಡಿಸಿ

ಹೇರೊಹಳ್ಳಿ ವಾರ್ಡನ ಬಿ.ಇ.ಎಲ್ ಬಡಾವಣೆಯಲ್ಲಿ ಕಾವೇರಿ ನೀರಿನ ಪೂರೈಕೆ ಆಗುತ್ತಿಲ್ಲ. ನೀರಿನ ವ್ಯವಸ್ಥೆ ಆಗಬೇಕು. ಬ್ಯಾಡರಹಳ್ಳಿಯಿಂದ ಮಾಗಡಿ ರಸ್ತೆಯ ತನಕ ಟ್ರಾಫಿಕ್ ಸಮಸ್ಯೆಯೂ ತುಂಬಾ ಇದೆ. ಹಾಗಾಗಿ ಸಿಗ್ನಲ್‌ಗಳನ್ನು ಅಳವಡಿಸುವುದರಿಂದ ಸಂಚಾರ ಸಮಸ್ಯೆಯನ್ನು ನಿಯಂತ್ರಿಸಬಹುದು.

ಎ.ಆರ್.ರಾಜ್‌ಕುಮಾರ್, ಬಿ.ಇ.ಎಲ್ ಬಡಾವಣೆ ನಿವಾಸಿ.

ನೆಮ್ಮದಿ ಇಲ್ಲ, ನಿದ್ದೆಯೂ ಇಲ್ಲ...

ವಾರ್ಡ್ ಸಂಖ್ಯೆ 140 ರಲ್ಲಿರುವ ನಮ್ಮ ಮನೆಯ ಪಕ್ಕ ಲಾಜಿಸ್ಟಿಕ್ಸ್ ಸಂಸ್ಥೆ ತಲೆ ಎತ್ತಿದೆ. ಇಲ್ಲಿರುವವರಿಗೆ 24 ಗಂಟೆಯೂ ಕೆಲಸ. ಇದರಿಂದ ನಮಗೆ ನೆಮ್ಮದಿಯೂ ಇಲ್ಲ, ನಿದ್ದೆಯೂ ಇಲ್ಲದಂತಾಗಿದೆ.

ನಮ್ಮ ದೂರಿಗೆ ಈ ಸಂಸ್ಥೆ ಸ್ಪಂದಿಸಿಲ್ಲ. ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಆರರ ತನಕ ಕಡ್ಡಾಯವಾಗಿ ಸಂಸ್ಥೆ
ಕಾರ್ಯನಿರ್ವಹಿಸದಂತೆ ಕ್ರಮವಹಿಸಿ.

ಪಿ.ಡಿ.ವಿಜಯಕುಮಾರ್, ಚಾಮರಾಜಪೇಟೆ

ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ

ನಾಗರಬಾವಿಯ 2ನೇ ಹಂತದ 8ನೇ ಬ್ಲಾಕ್‌ನ ಜನತಾ ಕಾಲೊನಿಯಲ್ಲಿನ  ರಾಜಕಾಲುವೆ ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ.  ಗಿಡ ಗಂಟಿಗಳೂ ಬೆಳೆದಿವೆ. ಸೊಳ್ಳೆ, ಹಾವುಗಳ ಕಾಟವೂ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವಂತೆ ಕ್ರಮವಹಿಸಿ. 

ಡಾ.ಕೆ.ಸತೀಶ್‌, ಜನತಾ ಕಾಲೊನಿ, ನಾಗರಭಾವಿ

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !