ಕಾಡುತ್ತಿದ್ದ ಸಮಸ್ಯೆ ಕರಗಿದಾಗ...

7

ಕಾಡುತ್ತಿದ್ದ ಸಮಸ್ಯೆ ಕರಗಿದಾಗ...

Published:
Updated:

ಶ್ರೀಧರನ್: ಪುಲಿಕೇಶಿನಗರ ವಾರ್ಡ್‌ನ ಕೆಂಪ್‌ ರಸ್ತೆಯಲ್ಲಿ ಕಸ ವಿಲೇವಾರಿ ವಾಹನಗಳನ್ನು ಹಾಗೂ ಕೆಟ್ಟುಹೋದ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಸಂತೋಷ್‌ ಆಸ್ಪತ್ರೆಯಿಂದ ಗುಡ್‌ವಿಲ್‌ ಶಾಲೆಯ ವರೆಗಿನ ರಸ್ತೆಯೂ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಟ್ಟಿದೆ.

‌ಅಬ್ದುಲ್‌ ರಕೀಬ್‌ ಝಾಕೀರ್‌ (ಪುಲಿಕೇಶಿನಗರ ವಾರ್ಡ್‌ ಪಾಲಿಕೆ ಸದಸ್ಯ): ಈಗಾಗಲೇ ಅಗತ್ಯವಿರುವ ಕಡೆ ನೋ–ಪಾರ್ಕಿಂಗ್ ಫಲಕಗಳನ್ನು ಹಾಕಿದ್ದೇವೆ. ವಾಹನಗಳನ್ನು ಎಳೆದೊಯ್ದು ಮಾಲೀಕರಿಂದ ದಂಡವನ್ನು ವಸೂಲಿ ಮಾಡುತ್ತಿದ್ದೇವೆ. ಅಷ್ಟಾದರೂ ಸಮಸ್ಯೆ ನೀಗಿಲ್ಲ. ಭಾರಿ ವಾಹನಗಳು ರಸ್ತೆ ಬದಿ ನಿಲ್ಲಿಸದಂತೆ ಮತ್ತಷ್ಟು ಕಠಿಣ ಕ್ರಮಗಳನ್ನು ಜರುಗಿಸುತ್ತೇವೆ.

ಶೇಖ್‌ ಇಸ್ಮಾಯಿಲ್‌: ಈ ಹಿಂದೆ ವಹಾಬ್‌ ಗಾರ್ಡನ್‌ ವರೆಗೂ 119 ಮಾರ್ಗದ ಬಿಎಂಟಿಸಿ ಬಸ್‌ ಬರುತ್ತಿತ್ತು. ಈಗ ಬರುತ್ತಿಲ್ಲ. ಅದನ್ನು ಪುನಃ ಆರಂಭಿಸಿ.

‌ಮೊಹಮ್ಮದ್‌ ಜಮೀರ್‌ ಷಾ (ಎಸ್‌.ಕೆ.ಗಾರ್ಡನ್‌ ವಾರ್ಡ್‌ ಪಾಲಿಕೆ ಸದಸ್ಯ): ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಬಿಎಂಟಿಸಿ ಸೇವೆ ನಿಲ್ಲಿಸಿದೆ. ಸಂಪರ್ಕ ಸೇವೆಯನ್ನು ಆರಂಭಿಸುವಂತೆ ಬಿಎಂಟಿಸಿ ಅಧಿಕಾರಿಗಳಿಗೆ ಮತ್ತೊಮ್ಮೆ ಮನವಿ ಸಲ್ಲಿಸುತ್ತೇನೆ.

ಮಹಮ್ಮದ್‌ ಅಫ್ಸರ್‌: ನೇತಾಜಿ ರಸ್ತೆಯಲ್ಲಿ ಮುಕ್ತ ಎಡ ತಿರುವಿಗೆ ಅವಕಾಶ ಇತ್ತು. ಇದನ್ನು ಒಂದು ವರ್ಷದ ಹಿಂದೆ ನಿಲ್ಲಿಸಿದ್ದಾರೆ. ಇದರಿಂದ ವಾಹನ ಸವಾರರಿಗೆ ಬಹಳ ತೊಂದರೆ ಆಗುತ್ತಿದೆ.

ಶಾಸಕ: ರಸ್ತೆಯನ್ನು ಅಭಿವೃದ್ಧಿಪಡಿಸಲು ₹ 17 ಲಕ್ಷ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಕಾಮಗಾರಿ ಮುಗಿದ ಬಳಿಕ ಮುಕ್ತ ಎಡ ತಿರುವು ಪಡೆಯಲು ಅವಕಾಶ ಮಾಡಿಕೊಡಲಾಗುವುದು. 

ನಳಿನಿ ಅಯ್ಯರ್ : ಫ್ರೇಜರ್‌ಟೌನ್‌ ವ್ಯಾಪ್ತಿಯಲ್ಲಿ ಸಿ.ಸಿ ಟಿ.ವಿ. ಮತ್ತು ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಇಲ್ಲ. ಇಲ್ಲಿನ ಪಾದಚಾರಿ ಮಾರ್ಗಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ. ಅವೂ ಒತ್ತುವರಿಯಾಗಿವೆ.

ಶಾಸಕ: ಪ್ರದೇಶದಲ್ಲಿ 57 ಸಿ.ಸಿ ಟಿ.ವಿ. ಕ್ಯಾಮರಾಗಳನ್ನು ಅಳವಡಿಸಲು ಯೋಜಿಸಿದ್ದೇವೆ. ಅಗತ್ಯವಿರುವಲ್ಲಿ ಇ–ಶೌಚಾಲಯಗಳ ವ್ಯವಸ್ಥೆ ಮಾಡುತ್ತೇವೆ. ವ್ಯಾಪಾರಿಗಳಿಂದ ಒತ್ತುವರಿಯಾಗಿರುವ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುತ್ತೇವೆ. 

ಜುನೈದಾ ಜಯಂತ್‌ : ನಮ್ಮ ಪ್ರದೇಶದಲ್ಲಿ ನಡೆದ ಮತ್ತು ನಡೆಯುತ್ತಿರುವ ಎಲ್ಲ ಕಾಮಗಾರಿಗಳ ಮಾಹಿತಿ ವಾರ್ಡ್ ಕಚೇರಿಯಲ್ಲಿ ಬಿತ್ತರಿಸಿ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚುತ್ತದೆ.

‌ಅಬ್ದುಲ್‌ ರಕೀಬ್‌ ಝಾಕೀರ್‌: ಬಹುತೇಕ ಕಾಮಗಾರಿಗಳ ಮಾಹಿತಿ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪಾಲಿಕೆಯ ವಲಯ ಕಚೇರಿಯಿಂದ ನೇರವಾಗಿ ಮಾಹಿತಿ ಪಡೆಯಬಹುದು. ವಾರ್ಡ್‌ ಸಮಿತಿಯ ಸದಸ್ಯರ ಬಳಿಯೂ ಈ ಮಾಹಿತಿ ಇರುತ್ತದೆ. ಮಾಹಿತಿ ಹಕ್ಕು ಕಾಯ್ದೆಯಡಿಯೂ ವಿವರ ಪಡೆಯಬಹುದು.

ಆಂಥೋನಿ ಜೇರಿ: ಫೆದರ್‌ಲೈಟ್‌ ಪಾಟರಿ ಟೌನ್‌ ಗವರ್ನಮೆಂಟ್‌ ಹೈಸ್ಕೂಲ್‌ನಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರೇ ಬರುತ್ತಿಲ್ಲ.

ಮೊಹಮ್ಮದ್‌ ಜಮೀರ್‌ ಷಾ: ಶಾಲೆಯಿಂದ ನಿಗದಿತವಾಗಿ ಶುಲ್ಕ ಪಾವತಿಸದ ಕಾರಣ, ಜಲಮಂಡಳಿ ನೀರು ಸರಬರಾಜು ಸ್ಥಗಿತಗೊಳಿಸಿತ್ತು.  ಶುಲ್ಕವನ್ನು ಪ್ರತಿತಿಂಗಳು ನಾನೇ ಪಾವತಿಸಿ, ಇನ್ನು ಮುಂದೆ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿ
ಕೊಳ್ಳುತ್ತೇನೆ.

ರಮೇಶ್‌: ಎನ್‌.ಸಿ. ಕಾಲೊನಿಯ ನಿವಾಸಿಗಳಿಗೆ ಇನ್ನೂ ವಾಸಸ್ಥಳದ ಹಕ್ಕುಪತ್ರ ಸಿಕ್ಕಿಲ್ಲ.

ಶಾಸಕ: ಕಾಲೊನಿಯಲ್ಲಿ ಶಿಬಿರವೊಂದನ್ನು ಆಯೋಜಿಸಿ ನಿವಾಸಿಗಳಿಗೆ ಸಿಗಬೇಕಾದ ಹಕ್ಕುಪತ್ರ, ಗುರುತಿನ ಚೀಟಿಗಳ ವಿತರಣೆಗೆ ಕ್ರಮ ವಹಿಸುವೆ.

ಕೆ.ಜನಾರ್ದನ್: ವಾರ್ಡ್‌ ಸಮಿತಿಯ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಸಮಿತಿ ಸದಸ್ಯರಿಗೆ ಜವಾಬ್ದಾರಿಗಳೇ ತಿಳಿದಿಲ್ಲ.

ಆರ್‌.ಸಂಪತ್‌ರಾಜ್, ದೇವರ ಜೀವನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ: ವಾರ್ಡ್‌ ಸಮಿತಿಗಳ ಸಭೆಗಳನ್ನು ಪ್ರತಿ ತಿಂಗಳ ಮೊದಲ ಶನಿವಾರ ನಡೆಸಲಾಗುತ್ತಿದೆ. ಶಾಸಕರು, ಪಾಲಿಕೆ ಮತ್ತು ಹೈಕೋರ್ಟ್‌ ಅವುಗಳ ಮೇಲ್ವಿಚಾರಣೆ ಮಾಡುತ್ತಿದೆ. ಅದರ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ (http://bbmp.gov.in/) ಲಭ್ಯವಿದೆ.

ಜುಲ್ಫಿ ಸುಲ್ತಾನ: ರೈಲ್ವೆ ಚರ್ಚ್‌ ಬಳಿ ಬಯಲು ಪ್ರದೇಶದಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಇಲ್ಲಿ ಶೌಚಾಲಯ ಕಟ್ಟಿಸಿಕೊಡಿ. ಕೋಲ್ಸ್‌ ಪಾರ್ಕ್‌ ಬಳಿ ಕೆಲವು ಹುಡುಗರು ವ್ಹೀಲಿಂಗ್‌ ನಡೆಸುತ್ತಾರೆ. ಇದಕ್ಕೆ ಕಡಿವಾಣ ಹಾಕಿ.

‌ಅಬ್ದುಲ್‌ ರಕೀಬ್‌ ಝಾಕೀರ್‌: ರೈಲ್ವೆ ಚರ್ಚ್‌ ಬಳಿ ಶೌಚಾಲಯ ಇದ್ದರೂ ಬಳಸುತ್ತಿಲ್ಲ. ವ್ಹೀಲಿಂಗ್‌ಗೆ ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ಮಲಿಕ ಇಂಗಳಗಿ: ರಂಕಾನಗರದಲ್ಲಿ ಎರಡು ಕೊಳವೆ ಬಾವಿಗಳನ್ನು ನಿರ್ಮಿಸಿ ವರ್ಷ ಕಳೆದಿದೆ. ಇನ್ನೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ

ಬಿಬಿಎಂಪಿ ಎಂಜಿನಿಯರ್‌:

ಶೀಘ್ರವೇ ವಿದ್ಯುತ್‌ ಸಂಪರ್ಕ ಕಲ್ಪಿಸಿ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

‘ಮಾದಕ ವ್ಯಸನಗಳಿಗೆ ಯುವಕರು ಬಲಿ’

‘ಯುವಕರು ಗಾಂಜಾ, ಅಫೀಮಿನಂತಹ ಮಾದಕ ದ್ರವ್ಯಗಳಿಗೆ ದಾಸರಾಗುತ್ತಿದ್ದಾರೆ. ಇಂತಹ ಚಟ ಹತ್ತಿಸಿಕೊಂಡ ಪುಂಡರಿಂದ ಸಾಮಾನ್ಯ ಜನರಿಗೆ ಹೆಚ್ಚಿನ ತೊಂದರೆ ಆಗುತ್ತಿದೆ’ ಎಂದು ಸ್ಥಳೀಯರಾದ ಆಂಥೋನಿ ಜೇರಿ ಆತಂಕ ವ್ಯಕ್ತಪಡಿಸಿದರು.

‘ಮಾದಕ ದ್ರವ್ಯಗಳ ಮಾರಾಟದ ಮೇಲೆ ಕಣ್ಣಿಡಲು ಚೀತಾ ಮತ್ತು ಹೊಯ್ಸಳ ಸಿಬ್ಬಂದಿ ಗಸ್ತು ಹೆಚ್ಚಿಸಿದ್ದೇವೆ. ಇತ್ತೀಚೆಗೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ಈ ಅಕ್ರಮಕ್ಕೆ ಕಡಿವಾಣ ಹಾಕಲು, ಮೈದಾನ ಮತ್ತು ಉದ್ಯಾನಗಳಲ್ಲಿ ಪೊಲೀಸ್‌ ಚೌಕಿ (ಪರ್ಮನೆಂಟ್‌ ಪಾಯಿಂಟ್) ನಿರ್ಮಿಸಲು ನಿರ್ಧರಿಸಿದ್ದೇವೆ’ ಎಂದು ಜೆ.ಸಿ.ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಉತ್ತರಿಸಿದರು.

‘ಕುಂಬಾರರ ಜಾಗ ಕಸಿಯದಿರಿ’

‘ಪಾಟರಿ ಟೌನ್‌ನಲ್ಲಿನ ಮೈದಾನ ನಿರ್ದಿಷ್ಟ ಜಾಗವನ್ನು ಕುಂಬಾರ ಕರಕುಶಲ ಸಂಘಕ್ಕೆ 30 ವರ್ಷಗಳ ಅವಧಿಗೆ ಲೀಸ್‌ಗೆ ನೀಡಲಾಗಿದೆ. ಅಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಲು ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ’ ಎಂದು ಸಂಘದ ಕಾರ್ಯದರ್ಶಿ ಆನಂದ್‌ ಅಳಲು ಹೇಳಿಕೊಂಡರು.

‘ಮೆಟ್ರೊ ಮಾರ್ಗದ ಕಾಮಗಾರಿಗೆ ಬಳಸುವ ಸಲಕರಣೆ ಮತ್ತು ಸಾಮಗ್ರಿಗಳ ಸಂಗ್ರಹಕ್ಕಾಗಿ ಮೈದಾನ ಸ್ವಲ್ಪ ಜಾಗವನ್ನು ಬಳಸಲಾಗುತ್ತದೆ. ಕಾಮಗಾರಿ ಮುಗಿದ ಬಳಿಕ, ಆ ಜಾಗವನ್ನು ಸಂಘಕ್ಕೆ ಹಿಂತಿರುಗಿಸಲಾಗುತ್ತದೆ’ ಎಂದು ಶಾಸಕರು ಭರವಸೆ ನೀಡಿದರು.

‘ವೃದ್ಧಾಪ್ಯ ಪಿಂಚಣಿ ಕೊಡಿಸಿ’

‘ದುಡಿಮೆಯಲ್ಲಿ ಅಷ್ಟು–ಇಷ್ಟು ಉಳಿಸಿ, ಪುಲಿಕೇಶಿನಗರದ ದೊಡ್ಡ ಮೋರಿ ಪಕ್ಕ ಚಿಕ್ಕ ಸೂರು ಕಟ್ಟಿಕೊಂಡಿದ್ದೇನೆ. ಈ ಹಿಂದೆ ಜೋರು ಮಳೆ ಬಂದಾಗ ನೀರು ಮನೆಗೆ ನುಗ್ಗಿ ನನ್ನ ವೃದ್ಯಾಪ್ಯ ವೇತನದ ದಾಖಲೆ ಪತ್ರ ಕಾಣೆಯಾಯಿತು. ಅಂದಿನಿಂದ ವೇತನ ಸಿಕ್ಕಿಲ್ಲ. ನನಗೆ ಗಂಡು ಮಕ್ಕಳು ಇಲ್ಲ. ಹೃದ್ರೋಗ ಇದೆ. ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ವೃದ್ಧೆ ರಾಣಿ ಮನವಿ ಮಾಡಿದರು.

ಪಿಂಚಣಿ ಮುಂದುವರಿಸಲು ಕ್ರಮಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಪಡಿತರ ಚೀಟಿ ವಿತರಣೆಗೆ ಶಿಬಿರ

‘ನಾನು ಕೂಡ ಇದೇ ವಿಧಾನಸಭಾ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವನು. ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಶೇ 90ರಷ್ಟು ಜನರು ಕೊಳಗೇರಿಗಳಲ್ಲಿ ವಾಸವಿದ್ದಾರೆ. ಅವರಲ್ಲಿ ದಿನಗೂಲಿ, ಹೂ–ಹಣ್ಣು–ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸುವವರ ಸಂಖ್ಯೆ ಹೆಚ್ಚಿದೆ. ಅವರಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸಲು ಆದ್ಯತೆ ನೀಡುತ್ತೇನೆ’ ಎಂದು ಶಾಸಕರು ಅಭಯ ನೀಡಿದರು.

‘ಪ್ರತಿಯೊಬ್ಬರಿಗೂ ಮತದಾರರ ಗುರುತಿನ ಚೀಟಿ, ಅರ್ಹರಿಗೆ ಬಿಪಿಎಲ್‌ ಪಡಿತರ ಚೀಟಿ ಹಾಗೂ ಆರೋಗ್ಯ ವಿಮೆ ಚೀಟಿ ಕೊಡಿಸಲು ಪ್ರತಿ ವಾರ್ಡ್‌ನಲ್ಲಿ ಎಂಟು ದಿನಗಳ ವಿಶೇಷ ಶಿಬಿರ ಆಯೋಜಿಸುತ್ತೇನೆ’ ಎಂದು ಅವರು ತಿಳಿಸಿದರು.

‘ಹೆರಿಗೆ ಆಸ್ಪತ್ರೆ ಕಟ್ಟಿಸಿ’

‘ಫೆದರ್‌ಲೈಟ್‌ ಗವರ್ನಮೆಂಟ್‌ ಹೈಸ್ಕೂಲ್‌ ಆವರಣದಲ್ಲಿ ಇದ್ದ ಹೆರಿಗೆ ಆಸ್ಪತ್ರೆಯನ್ನು ಕೆಡವಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ವಾಸಿಗಳು ಕಡುಬಡವರೇ ಇದ್ದಾರೆ. ಅವರಿಗೆ ಖಾಸಗಿ ಆಸ್ಪತ್ರೆಯ ದುಬಾರಿ ಶುಲ್ಕಗಳನ್ನು ಭರಿಸುವ ಶಕ್ತಿಯಿಲ್ಲ. ಹಾಗಾಗಿ ಆಸ್ಪತ್ರೆಯನ್ನು ಕಟ್ಟಿಕೊಡಿ’ ಎಂದು ಸ್ಥಳೀಯರಾದ ವರದರಾಜನ್‌ ಒತ್ತಾಯಿಸಿದರು.

‘ಹೈಸ್ಕೂಲ್‌ ಮೈದಾನದ ಮಾಲೀಕತ್ವದ ಕುರಿತು ಪಾಲಿಕೆ ಮತ್ತು ವ್ಯಕ್ತಿಯೊಬ್ಬರ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು. ಆಸ್ಪತ್ರೆಯ ಕಟ್ಟಡ ತುಂಬಾ ಹಳೆಯದ್ದಾಗಿದ್ದ ಕಾರಣ ಕೆಡವಲಾಗಿದೆ. ₹ 8 ಕೋಟಿ ವೆಚ್ಚದಲ್ಲಿ ಬೇರೆ ಕಡೆ ಹೊಸ ಆಸ್ಪತ್ರೆ ಕಟ್ಟಲಿದ್ದೇವೆ’ ಎಂದು ಪಾಲಿಕೆ ಸದಸ್ಯ ಮೊಹಮ್ಮದ್‌ ಜಮೀರ್‌ ಷಾ ತಿಳಿಸಿದರು.

ಅಧಿಕಾರಿಗಳ ಸಂಪರ್ಕ ಸಂಖ್ಯೆ

ವಿಭಾಗ;ಅಧಿಕಾರಿ ಹೆಸರು;ಸಂಪರ್ಕ

ಬಿಬಿಎಂಪಿ–ಎಆರ್‌ಒ;ಎನ್‌.ಕೃಷ್ಣಪ್ಪ;9480685204

ಬಿಬಿಎಂಪಿ–ಎಇಇ;ರವಿ;9964766222

ಬೆಸ್ಕಾಂ;ಓಬಯ್ಯ;9449874810

ಜಲಮಂಡಳಿ;ಕೆ.ಕೀರ್ತನಾ;9845444025

ಪೊಲೀಸ್‌–ಪುಲಿಕೇಶಿನಗರ ಠಾಣೆ; ಬಾಲನಾಯ್ಕ,ಪಿಎಸ್‌ಐ;9845774729

 

 

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !