ಸಿಟಿಜನರ ಶ್ರದ್ಧಾಂಜಲಿ, ಪ್ರಗತಿಪರರ ಶಾಂತಿ ಅಂಬಲಿ

ಶುಕ್ರವಾರ, ಮೇ 24, 2019
29 °C

ಸಿಟಿಜನರ ಶ್ರದ್ಧಾಂಜಲಿ, ಪ್ರಗತಿಪರರ ಶಾಂತಿ ಅಂಬಲಿ

Published:
Updated:
Prajavani

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಯೋಧರಿಗೆ ರಾಜರಾಜೇಶ್ವರಿನಗರದ ವಿವಿಧ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಶನಿವಾರ ರಾತ್ರಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ಚರ್ಚ್‌ ಬಳಿಯ 12ನೇ ಮುಖ್ಯರಸ್ತೆಯಲ್ಲಿರುವ ಪಿರಮಿಡ್‌ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ ಮುಂಭಾಗ ಸೇರಿದ ನಿವಾಸಿಗಳು ಹುತಾತ್ಮ ಯೋಧರಿಗೆ ಮೋಂಬತ್ತಿ ಬೆಳಗುವ ಮೂಲಕ ನಮನ ಸಲ್ಲಿಸಿದರು. ಬಳಿಕ 12ನೇ ಮುಖ್ಯರಸ್ತೆ, ಕೆಂಚೇನಹಳ್ಳಿ ಮುಖ್ಯರಸ್ತೆ, ವಿಜಯ ಬ್ಯಾಂಕ್‌, ಡಯಟ್‌ ರಸ್ತೆ ಮೂಲಕ ಮೆರವಣಿಗೆ ನಡೆಸಿದರು.

ಪುಟಾಣಿಗಳಿಂದ ಹಿರಿಯ ನಾಗರಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಉಗ್ರರ ದಾಳಿಯನ್ನು ಖಂಡಿಸುವ ಘೋಷಣೆಗಳನ್ನು ಕೂಗಿದರು. ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ಆಗ್ರಹಿಸಿದರು.

ಪಿರಮಿಡ್‌ ಟೆಂಪಲ್‌ ಬೆಲ್ಸ್‌, ಟೆಂಪಲ್‌ ಬೆಲ್ಸ್‌ ಪ್ರೀಮಿಯರ್‌, ಅಜಂತ ಕ್ಲಾಸಿಕ್‌, ಎಲಿಗೆಂಟ್‌ ಎಂಬೆಸಿ–2, ಗ್ರ್ಯಾಂಡ್‌ ಗಂಧರ್ವ, ಶುಭೋದಯ, ಮಾರ್ಸ್‌ ಕ್ಲಾಸಿಕ್‌, ಚೈತ್ರಶ್ರೀ, ರಾಜೇಶ್ವರಿ ಡ್ವೆಲ್ಲಿಂಗ್ಸ್‌ ಸೇರಿದಂತೆ ಹಲವು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಉಗ್ರರ ದಾಳಿಯಲ್ಲಿ ಹುತಾತ್ಮರಾಗಿರುವ ಮಂಡ್ಯ ಜಿಲ್ಲೆಯ ಗುಡಿಗೆರೆಯ ಸಿಆರ್‌ಪಿಎಫ್‌ ಯೋಧ ಗುರು ಅವರ ಕುಟುಂಬಕ್ಕೆ ಅಪಾರ್ಟ್‌ಮೆಂಟ್‌ ನಿವಾಸಿಗಳ ವತಿಯಿಂದ ಆರ್ಥಿಕ ನೆರವು ನೀಡಲು ಇದೇ ವೇಳೆ ತೀರ್ಮಾನಿಸಲಾಯಿತು.

ಹೆಗಡೆ ನಗರದಲ್ಲಿ ಶ್ರದ್ಧಾಂಜಲಿ
ಹೆಗಡೆ ನಗರದ ಸುತ್ತಮುತ್ತಲಿನ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸುತ್ತಲಿನ ಶಕ್ತಿನಗರ, ಹೆಗಡೆ ನಗರ, ನೂರ್‌ ನಗರ, ಶಬರಿ ನಗರ, ಬಸವಲಿಂಗಪ್ಪ ನಗರ, ದಸ್‌ ಘರ್‌ ಕಾಲೊನಿಯ ಹಲವರು ಕೈಯಲ್ಲಿ ಮೇಣದ ಬತ್ತಿ ಹಿಡಿದು ಇಡೀ ಪ್ರದೇಶದಲ್ಲಿ ’ಹಿಂದೂಸ್ತಾನ್‌ ಜಿಂದಾಬಾದ್‌‘ ಘೋಷಣೆ ಕೂಗುತ್ತ ಸಾಗಿದರು. ಮೇಣದ ಬತ್ತಿ ಬೆಳಕಿನಲ್ಲಿ ಸಾಗಲೆಂದೇ ಬೀದಿ ದೀಪಗಳನ್ನು ಕೆಲ ಹೊತ್ತು ಆರಿಸಲಾಗಿತ್ತು. ಹಿಂದೂ, ಮುಸ್ಲಿಂ, ಕ್ರೈಸ್ತರು ಆದಿಯಾಗಿ ಎಲ್ಲರೂ ಜಾತಿ ಧರ್ಮದ ಭೇದ ಭಾವ ಮರೆತು ಭಾಗವಹಿಸಿದ್ದರು.

ಹೆಗಡೆ ನಗರ ಸರ್ಕಲ್‌ನಲ್ಲಿ ಸಭೆ ಸೇರಿ ಹುತಾತ್ಮ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಮತದ ಭೇದ ಮರೆತು ಇಡೀ ದೇಶ ಒಂದಾಗಿ ನಿಲ್ಲುವ ಸಮಯವಿದು. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ದೇಶದ ಅಭ್ಯುದಯಕ್ಕಾಗಿ ಒಂದಾಗೋಣ ಎನ್ನುವ ಸಂಕಲ್ಪ ತಾಳಿದ್ದು ವಿಶೇಷವಾಗಿತ್ತು.

ಪ್ರತೀಕಾರವೇ ಪರಿಹಾರವಲ್ಲ: ಪ್ರಗತಿಪರರ ದನಿ
ನಗರದ ಹಲವು ಪ್ರಗತಿಪರರು ಕೂಡ ಶನಿವಾರ ಪುರಭವನದೆದುರು ಜಮಾಯಿಸಿ ಹುತಾತ್ಮರಿಗೆ ಅರ್ಥಪೂರ್ಣ ನಮನಗಳನ್ನು ಸಲ್ಲಿಸಿದರು. ಸೇಡು, ಪ್ರತೀಕಾರಗಳೇ ಎಲ್ಲದಕ್ಕೂ ಪರಿಹಾರವಲ್ಲ. ಈಗ ಆಗಿರುವ ಅನಾಹುತ ಅತ್ಯಂತ ಖಂಡನೀಯ. ಆದರೆ, ರಾಜಕೀಯ ಸಮಾಲೋಚನೆ ಮತ್ತು ಚರ್ಚೆಗಳ ಮೂಲಕ ಆಗುತ್ತಿರುವ ಅನಾಹುತಗಳನ್ನು ನಿಲ್ಲಿಸಲು ಶ್ರಮಿಸುವುದು ಅಗತ್ಯ. ಪ್ರತೀಕಾರ, ಯುದ್ಧವೇ ಎಲ್ಲದರ ಅಂತಿಮ ಪರಿಹಾರ ಆಗುವುದು ಅಮಾನವೀಯ ಎನ್ನುವ ನಿಲುವನ್ನು ಸ್ಪಷ್ಟಪಡಿಸಿದರು.

ವಾಸಿಯಾಗದ ಕಾಯಿಲೆ
ಯಾವುದೇ ರೀತಿಯ ಹಿಂಸೆ ಭೀಕರವಾದ ಸಾವುಗಳಲ್ಲಿ ಅಂತ್ಯವಾಗುವುದು ಪ್ರತಿಪ್ರಜೆಯೂ ವಿರೋಧಿಸಬೇಕಾದ ಸಂಗತಿ. ಆತಂಕವಾದಿ ಚಲನೆಗಳು ಏಕೆ ಆಗುತ್ತಿವೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅಷ್ಟು ಸಣ್ಣ ವಯಸ್ಸಿನ ಯುವಕ ಈಗಾಗಲೇ ನಾಲ್ಕು ಸಲ ಜೈಲಿಗೆ ಹೋಗಿದ್ದ. ಟಾರ್ಚರ್ ಮಾಡಲಾಗಿತ್ತು ಎಂಬ ವಿವರಗಳೂ ಕಣ್ಮುಂದೆ ಇವೆ. ಸಮಾಜವನ್ನು ಕಟ್ಟುವ ಕಡೆಗೆ ವಿಶೇಷವಾದ ಕಾಳಜಿಯನ್ನು ದೇಶ ತೆಗೆದುಕೊಂಡಾಗ ಮಾತ್ರ ಇಂಥ ಆತಂಕವಾದಿ ನಾಶವಾಗಲು ಸಾಧ್ಯ. ಸಾವನ್ನು ಸಾವಿನಿಂದ ಮಾತ್ರ ಗೆಲ್ಲುತ್ತೇವೆ ಅನ್ನೋದು ವಾಸಿಯಾಗದ ಕಾಯಿಲೆ.

–ಬಿ. ಸುರೇಶ, ನಿರ್ದೇಶಕ

ಯುದ್ಧ ಭಾವಾವೇಶ

ಯುದ್ಧ ಅಂತ ನಾವು ತುಂಬಾ ಸುಲಭವಾಗಿ ಮಾತನಾಡುತ್ತೇವೆ. ಅದು ಬರೀ ಭಾವಾವೇಶದ ಮಾತುಗಳಷ್ಟೆ. ಯುದ್ಧದಿಂದ ಇದು ಪರಿಹಾರವಾಗುವಂಥದ್ದು ಅಲ್ಲ. ಕಾಶ್ಮೀರದ ಶೇ 65ರಷ್ಟು ಜನರಿಗೆ ಭಾರತವನ್ನು ಅಪ್ಪಿಕೊಳ್ಳುವ ಮನಸ್ಥಿತಿ ಇಲ್ಲ. ಅವರ ಮನಸ್ಸು ಬೇರೆಲ್ಲೋ ಇದೆ. ಮೊದಲು ಅದನ್ನು ಸರಿಪಡಿಸಬೇಕಿದೆ. ಕಾಶ್ಮೀರದ ಜನರಿಗೆ ಭಾರತ ನನ್ನದು ಅನ್ನಿಸುವಂತಾಗಬೇಕು. ಈ ರೀತಿಯ ಯೋಜನೆಗಳು ರೂಪುಗೊಳ್ಳಬೇಕಿದೆ.

–ಚಕ್ರವರ್ತಿ ಚಂದ್ರಚೂಡ್, ಅಧ್ಯಕ್ಷ, ಪೀಪಲ್ ಫಾರ್ ಪೀಪಲ್

ಆಕ್ರೋಶದೆಡೆಗೆ ತಿರುಗಿದೆ...

ಈ ಹಿಂದೆ ಭಯೋತ್ಪಾದಕರಿಂದ ಹತರಾದ ಸೈನಿಕರ ಶವಯಾತ್ರೆ ನೋಡಿದಾಗ ಜನರಿಗೆ ದುಃಖ ಆಗುತ್ತಿತ್ತು. ಆದರೆ, ಈ ಬಾರಿ ಜನರಲ್ಲಿ ದುಃಖಕ್ಕಿಂತ ಆಕ್ರೋಶವಿದೆ. ಜನರು ಈಗ ದುಃಖದ ರೀತಿಯಲ್ಲಿ ಮಾತನಾಡುತ್ತಿಲ್ಲ. ಫೇಸ್‌ಬುಕ್, ಟಿ.ವಿಯಲ್ಲಾಗಲೀ, ಜನರ ಮಾತುಗಳಲ್ಲಾಗಲೀ ಆಕ್ರೋಶದ ಮಾತುಗಳೇ ಕೇಳಿಬರುತ್ತಿವೆ. ಸರ್ಕಾರ ಏನಾದರೊಂದು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನರ ಮನಸಿನಲ್ಲಿರುವುದಂತೂ ನಿಜ.

–ವಾದಿರಾಜ್, ಆರ್‌ಎಸ್‌ಎಸ್‌ ವಿಚಾರಧಾರೆ ಲೇಖಕ 

ಗಡಿ ಭೂಭಾಗವಷ್ಟೇ ಅಲ್ಲ

ಪ್ರತೀಕಾರವೇ ಪರಿಹಾರ ಅಂತ ಅನ್ನುವುದಾದರೆ ಉರಿಯ ನಂತರ ಮತ್ತೊಮ್ಮೆ ಭಯೋತ್ಪಾದನೆ ತಲೆ ಎತ್ತಬಾರದಿತ್ತು. ಯೋಧರು ಬಸ್‌ನಲ್ಲಿ ಹೋಗುವಾಗ ಸ್ಕಾರ್ಪಿಯೋ ವಾಹನ ಬಂದು ಡಿಕ್ಕಿ ಹೊಡೆಯುತ್ತದೆ ಅಂದರೆ ಭದ್ರತೆಯ ಲೋಪವನ್ನೂ ಕಡೆಗಣಿಸಲಾಗದು ಅಲ್ಲವೇ? ಭಾರತ ಅಂದರೆ ಬರೀ ಗಡಿಭೂಭಾಗವಲ್ಲ. ಜನರೂ ಇದ್ದಾರೆ. ಇಂಥ ಜನರನ್ನು ರಕ್ಷಿಸುವ ಯೋಧರನ್ನು ರಕ್ಷಿಸುವುದು ನಮಗೆ ಆಗುವುದಿಲ್ಲ ಅನ್ನುವುದಾದರೆ ಅದರ ಹಿಂದಿನ ಕಾರಣವನ್ನು ಹುಡುಕಬೇಕಿದೆ. ಯುದ್ಧೋನ್ಮಾದ ಮತ್ತು ಪ್ರಚೋದನಕಾರಿ ಮಾತುಗಳು ಯಾವತ್ತೂ ಇದಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ. ನಮ್ಮದು ಶಾಂತಿಪ್ರಿಯ ರಾಷ್ಟ್ರ. ಹಾಗಾಗಿ ಶಾಂತಿಯುತವಾಗಿಯೇ ಇದನ್ನು ಬಗೆಹರಿಸಿಕೊಳ್ಳಬೇಕು.

–ಕೆ.ಎಸ್. ವಿಮಲಾ, ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ

ಬಡಪಾಯಿ ಸೈನಿಕರೇ ಬಲಿಪಶು

ಮೂಲಭೂತವಾಗಿ ಪಾಕಿಸ್ತಾನದಲ್ಲಿ ಸೇನೆ ಮೇಲುಗೈ. ಭಾರತದಲ್ಲಿ ರಾಜಕಾರಣದ್ದು ಮೇಲುಗೈ. ಅಲ್ಲಿ ರಾಜಕಾರಣ ಅಸಹಾಯಕವಾಗಿದೆ. ಇಲ್ಲಿ ಸೇನೆ ಸ್ವಲ್ಪಮಟ್ಟಿಗೆ ಅಸಹಾಯಕವಾಗಿದೆ. ಈ ದೃಷ್ಟಿಯಲ್ಲಿ ಸೇನೆ ಮತ್ತು ಆಡಳಿತ ತುಂಬಾ ಹೊಂದಾಣಿಕೆಯಿಂದ ಯೋಚನೆ ಮಾಡಿ ಮೂಲಭೂತ ನಿರ್ಣಯಗಳನ್ನು ಕೈಗೊಳ್ಳಬೇಕಿದೆ. ಇಸ್ರೇಲ್ ಮಾದರಿಯಲ್ಲಿ ಯುದ್ಧ ನೈಪುಣ್ಯವನ್ನು ನಾವು ಕಂಡುಕೊಳ್ಳಬೇಕು. ಪುಟ್ಟ ರಾಷ್ಟ್ರ ಇಸ್ರೇಲ್ ತನ್ನ ಸುತ್ತಲಿನ ಶತ್ರುಗಳನ್ನು ಚಾಣಾಕ್ಷತನದಿಂದ ಎದುರಿಸಿಕೊಂಡಿದೆ. ನಮ್ಮದು ಪಾಕಿಸ್ತಾನಕ್ಕಿಂತ ದೊಡ್ಡ ರಾಷ್ಟ್ರ. ನಮ್ಮಲ್ಲಿ ಎಲ್ಲವೂ ಇದೆ. ಪಾಕಿಸ್ತಾನ ನಮಗೆ ಶಾಶ್ವತ ತಲೆನೋವಾಗಿದೆ. ಇದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಬೇಕಿದೆ. ಸರ್ಕಾರ ಬದಲಾಗುತ್ತಲೇ ಇರುತ್ತವೆ. ಆದರೆ, ಬಡಪಾಯಿ ಸೈನಿಕರು ಬಲಿಯಾಗುತ್ತಲೇ ಇರುತ್ತಾರೆ. ಶ್ರೀಸಾಮಾನ್ಯರು ಇದಕ್ಕೆ ಪರಿಹಾರ ಕೊಡಲಾಗದು. ಹುತಾತ್ಮರಲ್ಲಿ ಅನೇಕ ಮುಸ್ಲಿಂ ಸೈನಿಕರೂ ಇದ್ದಾರೆ. ಇದನ್ನು ರಾಜಕಾರಣಿಗಳು ಕ್ಷುಲ್ಲಕ ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಭಯೋತ್ಪಾದನೆ ಎಲ್ಲಾ ಧರ್ಮಗಳಲ್ಲೂ ಇದೆ. ಅದನ್ನು ಯಾರು ಮಾಡಿದರೂ ಅದು ಖಂಡನೀಯ. ಇದನ್ನು ಧರ್ಮಕ್ಕೆ ಗಂಟು ಹಾಕಿ ನೋಡಬಾರದು.

–ನಾಗತಿಹಳ್ಳಿ ಚಂದ್ರಶೇಖರ್, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ಅಕಾಡೆಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !